ಮಹಾರಾಜ್‌ಗಂಜ್(ಉತ್ತರ ಪ್ರದೇಶ) :ಪ್ರೇಮ ಸಂಬಂಧವನ್ನು ಪೋಷಕರು ಒಪ್ಪದ ಕಾರಣ 12ನೇ ತರಗತಿ ವಿದ್ಯಾರ್ಥಿಯೊಬ್ಬ 16 ವರ್ಷದ ವಿದ್ಯಾರ್ಥಿನಿಯೊಂದಿಗೆ ಶಾಲಾ ಆವರಣದಲ್ಲೆ ವಿಷ ಸೇವಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಘಟನೆ ನಡೆದ ಕೂಡಲೇ ಇಬ್ಬರನ್ನೂ ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ವೇಳೆ 12ನೇ ತರಗತಿಯ 20 ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಬಾಲಕಿ ಇನ್ನೂ ಆಸ್ಪತ್ರೆಯಲ್ಲಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇವರಿಬ್ಬರು ಒಂದೇ ಗ್ರಾಮದ ನಿವಾಸಿಗಳಾಗಿದ್ದರು. ಅವರು ಮದುವೆಯಾಗಲು ಬಯಸಿದ್ದರು. ಆದರೆ, ಹುಡುಗಿ ಅಪ್ರಾಪ್ತ ವಯಸ್ಕಳಾಗಿದ್ದರಿಂದ ಪೋಷಕರು ಸಂಬಂಧವನ್ನು ಒಪ್ಪಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ನಿಚ್ಲಾಲ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಆನಂದ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.