ಲಕ್ನೋ : ಇಲ್ಲಿನ ಶಾಪಿಂಗ್ ಮಾಲ್ ಆವರಣದಲ್ಲಿ ಅನಧಿಕೃತವಾಗಿ ನಮಾಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಶನಿವಾರ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಈ ಪ್ರಕರಣದಲ್ಲಿ ಇದುವರೆಗೆ 5 ಮಂದಿಯನ್ನು ಬಂಧಿಸಲಾಗಿದೆ.
“ಲಕ್ನೋ ದ ಚೌಪಾಟಿಯ ನಿವಾಸಿ ಮೊಹಮ್ಮದ್ ಆದಿಲ್ ನನ್ನು ಬಂಧಿಸಲಾಗಿದೆ. ಆರೋಪಿಯು ಮಾಲ್ ಆವರಣದಲ್ಲಿ ಅನುಮತಿಯಿಲ್ಲದೆ ಧಾರ್ಮಿಕ ಪ್ರಾರ್ಥನೆ ಸಲ್ಲಿಸಿದವರಲ್ಲಿದ್ದನು.” ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಾಜೇಶ್ ಕುಮಾರ್ ಶ್ರೀವಾಸ್ತವ್ ತಿಳಿಸಿದರು.
ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ ಮೂರು ದಿನಗಳ ನಂತರ ಈ ಬಂಧನ ನಡೆದಿದೆ. ಪ್ರಕರಣದ ಇತರ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇತ್ತೀಚೆಗೆ ಲುಲು ಮಾಲ್ ಉದ್ಘಾಟಿಸಿದ್ದರು. ಬಂಧಿತರಲ್ಲಿ ಯಾರೊಬ್ಬರೂ ಲುಲು ಮಾಲ್‌ನ ಸಿಬ್ಬಂದಿಯಲ್ಲ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ವಾತಾವರಣವನ್ನು ಹಾಳುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಯೋಗಿ ಆದಿತ್ಯನಾಥ್ ಸೋಮವಾರ ಆಡಳಿತಕ್ಕೆ ನಿರ್ದೇಶನ ನೀಡಿದ ನಂತರ ಬಂಧಿಸಲಾಗಿದೆ. ಜುಲೈ 13 ರಂದು ಲುಲು ಮಾಲ್‌ನಲ್ಲಿ ಜನರು ನಮಾಜ್ ಮಾಡುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಬಲಪಂಥೀಯ ಹಿಂದೂ ಸಂಘಟನೆಯು ಮಾಲ್ ಆವರಣದಲ್ಲಿ ನಮಾಜ್ ಮಾಡುವುದನ್ನು ವಿರೋಧಿಸಿ ಅಲ್ಲಿ ಹನುಮಾನ್ ಚಾಲೀಸಾ ಪಠಿಸಲು ಅನುಮತಿ ಕೇಳಿದ್ದರಿಂದ ಘಟನೆಯು ಗದ್ದಲಕ್ಕೆ ಕಾರಣವಾಗಿತ್ತು. ಅಖಿಲ ಭಾರತೀಯ ಹಿಂದೂ ಮಹಾಸಭಾದ ಕೆಲವು ಸದಸ್ಯರು ಜುಲೈ 14 ರಂದು ಲುಲು ಮಾಲ್‌ನ ಗೇಟ್‌ನಲ್ಲಿ ಧರಣಿ ನಡೆಸಿದ್ದರು.