ಕಾನ್ಪುರ: ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ಜನರು ಮಾಸ್ಕ್ ಧರಿಸಬೇಕೆಂದು ಪೊಲೀಸರು, ವೈದ್ಯರು, ಸರ್ಕಾರ ಮನವಿ ಮಾಡುತ್ತಲೇ ಇದೆ. ಆದರೆ ಮಾಸ್ಕ್ ಧರಿಸದೇ ಓಡಾಡುವವರಿಗೆ ಪೊಲೀಸರು ದಂಡವನ್ನೂ ಹಾಕುತ್ತಿದ್ದಾರೆ. ಆದರೆ ಮೇಕೆಯೊಂದು ಮಾಸ್ಕ್ ಧರಿಸಿಲ್ಲ ಎಂದು ಪೊಲೀಸರು ಬಂಧಿಸಿ ಠಾಣೆಗೆ ಎಳೆದೊಯ್ದ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕಾನ್ಪುರದ ಅನ್ವರ್ ಗಂಜ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೆಕನ್ ಗಂಜ್ ಪ್ರದೇಶದಲ್ಲಿ ಮೇಕೆಯೊಂದು ಓಡಾಡುತ್ತಿತ್ತು. ಇದನ್ನು ಗಮನಿಸಿದ ಪೊಲೀಸರು ತಮ್ಮ ಜೀಪಿನಲ್ಲಿ ಹಾಕಿಕೊಂಡು ಠಾಣೆಗೆ ಕರೆದುಕೊಮಡು ಬಂದಿದ್ದಾರೆ. ಪೊಲೀಸರು ತನ್ನ ಮೇಕೆಯನ್ನು ಕರೆದುಕೊಂಡು ಹೋದ ವಿಷಯ ತಿಳಿದ ಮೇಕೆ ಮಾಲಕ ಕೂಡಲೇ ಠಾಣೆಗೆ ಧಾವಿಸಿದ್ದಾನೆ.
ಠಾಣೆಯ ಎದುರು ಕಟ್ಟಿಹಾಕಿದ್ದ ಮೇಕೆಯನ್ನು ಅದರ ಮಾಲಕನಿಗೆ ಒಪ್ಪಿಸಿದ ಪೊಲೀಸರು, ರಸ್ತೆಯಲ್ಲಿ ಪ್ರಾಣಿಗಳನ್ನು ಓಡಾಡಲು ಬಿಡಬಾರದು ಎಂದು ಎಚ್ಚರಿಸಿ ಕಳುಹಿಸಿದ್ದಾರೆ.
ವ್ಯಕ್ತಿಯೋರ್ವ ಮಾಸ್ಕ್ ಇಲ್ಲದೆ ನಡೆದುಕೊಂಡು ಹೋಗುತ್ತಿದ್ದ. ಮೇಕೆಯೂ ಆತನ ಜೊತೆ ಬರುತ್ತಿತ್ತು. ಪೊಲೀಸರನ್ನು ಕಂಡಕೂಡಲೇ ಆತ ಅಲ್ಲಿಂದ ಕಾಲ್ಕಿತ್ತ. ಹಾಗಾಗಿ ಮೇಕೆಯನ್ನು ಹಿಡಿದುಕೊಂಡು ಬಂದಿದ್ದಾರೆ ಎಂದು ಠಾಣಾಧಿಕಾರಿ ಸೈಫುದ್ದೀನ್ ಬೈಗ್ ಹೇಳಿದ್ದಾರೆ.
ಆದರೆ ಮೇಕೆಯನ್ನು ಬಂಧಿಸಿದ ಪೊಲೀಸ್ ಹೇಳುವುದೇ ಬೇರೆ. ಜನರು ಈಗ ತಮ್ಮ ನಾಯಿಗಳಿಗೂ ಮಾಸ್ಕ್ ಹಾಕುತ್ತಾರೆ. ಆದರೆ ಮೇಕೆಗೆ ಯಾಕೆ ಹಾಕುವುದಿಲ್ಲ. ಹಾಗಾಗಿ ಬಂಧಿಸಿದ್ದೇನೆ ಎನ್ನುತ್ತಾರೆ.