Advertisement

ವಿಶ್ವದ ನಂಬಿಕಸ್ತ ಪಾಲುದಾರ ಭಾರತ; ಪ್ರಧಾನಿ ಮೋದಿ 

12:32 AM Jun 04, 2022 | Team Udayavani |

ಲಕ್ನೋ/ಕಾನ್ಪುರ: ಜಿ-20 ರಾಷ್ಟ್ರಗಳ ಪೈಕಿ ಭಾರತವೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥ ವ್ಯವಸ್ಥೆ. ಜತೆಗೆ ಜಗತ್ತು ಈಗ ಎದುರು ನೋಡುತ್ತಿರುವ ಅತ್ಯುತ್ತಮ ಹಾಗೂ ನಂಬಿಕಸ್ತ ಪಾಲುದಾರನಾಗಲು ಭಾರತಕ್ಕೆ ಸಾಧ್ಯ ವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮೂರನೇ ಆವೃತ್ತಿಯ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಅವರು ಮಾತನಾಡಿದರು.

Advertisement

ಇದೇ ಕಾರ್ಯಕ್ರಮದಲ್ಲಿ ಪ್ರಧಾನಿ 80 ಸಾವಿರ ಕೋಟಿ ರೂ. ವೆಚ್ಚದ 1,406 ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಅವುಗಳ ಉದ್ಘಾಟನೆಯನ್ನೂ ನೆರವೇರಿಸಿದ್ದಾರೆ. ಕೃಷಿ, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌, ಮಧ್ಯಮ, ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆ ಕ್ಷೇತ್ರ, ಉತ್ಪಾದನೆ, ನವೀಕೃತ ಇಂಧನ, ಔಷಧೋದ್ಯಮ, ಪ್ರವಾಸೋದ್ಯಮ, ರಕ್ಷಣೆ ಮತ್ತು ವಾಯುಯಾನ, ಜವುಳಿ ಮತ್ತು ಕೈಮಗ್ಗ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ದಿಮೆಗಳು ಉದ್ಘಾಟನೆಗೊಂಡ ಯೋಜನೆಗಳಲ್ಲಿ ಸೇರಿವೆ.

ಜಗತ್ತಿನಲ್ಲಿ ಸದ್ಯ ಉಂಟಾಗಿರುವ ಬೆಳವಣಿಗೆಗಳು ನಮ್ಮ ದೇಶಕ್ಕೆ ಪ್ರಧಾನ ಭೂಮಿಕೆ ನಿರ್ವಹಿಸುವ ಅವಕಾಶ ತಂದುಕೊಟ್ಟಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. “ಪ್ರಜಾಸತ್ತಾತ್ಮಕವಾಗಿರುವ ನಮ್ಮ ಭಾರತಕ್ಕೆ ಮಾತ್ರ ಸದ್ಯ ಜಗತ್ತು ಎದುರು ನೋಡುತ್ತಿರುವ ನಂಬಿಕಸ್ತ ಪಾಲುದಾರ ನಾಗಲು ಸಾಧ್ಯ. ಏಕೆಂದರೆ ನಮಗೆ ಆ ರೀತಿಯ ಸಾಮರ್ಥ್ಯ ಮತ್ತು ಶಕ್ತಿ ಇದೆ’ ಎಂದರು.

ದಾಖಲೆ ಎಫ್ಡಿಐ: ಕಳೆದ ವರ್ಷ ದೇಶಕ್ಕೆ ದಾಖಲೆಯ ಅಂದರೆ 84 ಬಿಲಿಯನ್‌ ಅಮೆರಿಕನ್‌ ಡಾಲರ್‌ ಮೊತ್ತದ ವಿದೇಶಿ ನೇರ ಬಂಡವಾಳ ಹೂಡಿಕೆ ಬಂದಿತ್ತು. ಜಗತ್ತಿನ 100ಕ್ಕೂ ಅಧಿಕ ದೇಶಗಳ ಕೊಡುಗೆ ಇದರಲ್ಲಿದೆ. ಜತೆಗೆ ಕಳೆದ ವಿತ್ತೀಯ ವರ್ಷ 30 ಲಕ್ಷ ಕೋಟಿ ರೂ.ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದೆ ಎಂದರು. ಜಿ- 20 ರಾಷ್ಟ್ರಗಳ ಪೈಕಿ ನಮ್ಮ ದೇಶವೇ ಅತ್ಯಂತ ವೇಗವಾಗಿ ಬೆಳೆಯುವ ಅರ್ಥ ವ್ಯವಸ್ಥೆ. ಗ್ಲೋಬಲ್‌ ರಿಟೈಲ್‌ ಇಂಡೆಕ್ಸ್‌ನಲ್ಲಿ ದೇಶಕ್ಕೆ 2ನೇ ಸ್ಥಾನ, ಇಂಧನ ಬಳಕೆ ಮಾಡುವ ರಾಷ್ಟ್ರಗಳ ಪೈಕಿ ದೇಶಕ್ಕೆ 3ನೇ ಸ್ಥಾನ ಇದೆ ಎಂದು ಪ್ರಧಾನಿ ವಿವರಿಸಿದ್ದಾರೆ.

ಉತ್ತರ ಪ್ರದೇಶ ದೇಶದ ಒಟ್ಟು ಜನಸಂಖ್ಯೆಯ ಶೇ.16- 20ರಷ್ಟನ್ನು ಹೊಂದಿರುವುದರಿಂದ ದೇಶದ ಅಭಿವೃದ್ಧಿಯನ್ನು ನಿರ್ವಹಿಸಲು ಅದಕ್ಕೆ ಶಕ್ತಿ ಇದೆ. ಸಂಸದನಾಗಿಯೂ ಕೂಡ ರಾಜ್ಯ ಸರಕಾರ ಮತ್ತು ಆಡಳಿತ ಹೊಂದಿರುವ ಶಕ್ತಿಯನ್ನು ತಿಳಿದಿರುವುದಾಗಿ ಹೇಳಿದ್ದಾರೆ ಪ್ರಧಾನಿ.

Advertisement

ಪ್ರಬಲ ವಿಪಕ್ಷ ಬೇಕು: ದೇಶಕ್ಕೆ ಪ್ರಬಲವಾಗಿರುವ ವಿಪಕ್ಷ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಪೂರ್ವಜರ ಗ್ರಾಮ ಪರೌಂಖ್‌ನಲ್ಲಿ ಮಾತನಾಡಿದ ಅವರು, ಕೌಟುಂಬಿಕ ರಾಜಕಾರಣದ ವಿರುದ್ಧ ಪ್ರಬಲವಾಗಿ ಆಕ್ಷೇಪ ಮಾಡಿದ್ದಾರೆ. ಕುಟುಂಬ ರಾಜಕಾರಣಕ್ಕೆ ಬೆಂಬಲ ನೀಡುವವರು ಈಗ ನನ್ನ ವಿರುದ್ಧ ಸಮರ ಸಾರಿದ್ದಾರೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. “ಕೌಟುಂಬಿಕ ರಾಜಕಾರಣ ಸಂಪೂರ್ಣವಾಗಿ ಕೊನೆಗೊಳ್ಳ ಬೇಕು. ಹಾಗಾದಾಗಮಾತ್ರ ಗ್ರಾಮದಲ್ಲಿ ಜನಿಸಿದ ವ್ಯಕ್ತಿ ಪ್ರಧಾನಮಂತ್ರಿ ಅಥವಾ ರಾಷ್ಟ್ರಪತಿಯಾಗಲು ಸಾಧ್ಯ’ ಎಂದು ಹೇಳಿದ್ದಾರೆ.

“ನನಗೆ ಯಾವ ವ್ಯಕ್ತಿಯ ಬಳಿಯೂ ವೈಯಕ್ತಿಕ ದ್ವೇಷ ಇಲ್ಲ. ದೇಶಕ್ಕೆ ಒಂದು ಪ್ರಬಲ ವಿಪಕ್ಷ ಬೇಕು ಎನ್ನುವುದೇ ನನ್ನ ಆಸೆ. ಸ್ವಜನಪಕ್ಷಪಾತದಲ್ಲಿ ತೊಡಗಿಸಿಕೊಂಡಿರುವ ಪಕ್ಷಗಳು ಪ್ರಜಾಪ್ರಭುತ್ವ ನಿಲುವುಗಳನ್ನು ಎತ್ತಿಹಿಡಿಯಬೇಕು’ ಎಂದಿದ್ದಾರೆ. ದೇಶದ ರಾಷ್ಟ್ರಪತಿಯೇ ತಮ್ಮನ್ನು ಸ್ವಾಗತಿಸಲು ಬಂದಾಗ ಮುಜುಗರವಾಯಿತು. ಏಕೆಂದರೆ ನಾವೆಲ್ಲರೂ ಅವರ ಕೈಕೆಳಗೇ ಕೆಲಸ ಮಾಡುತ್ತಿದ್ದೇವೆ ಎಂದರು ಪ್ರಧಾನಿ.

30,000 ಉದ್ಯೋಗ ಸೃಷ್ಟಿಗೆ 70,000 ಕೋಟಿ ರೂ.
ಉತ್ತರ ಪ್ರದೇಶದಲ್ಲಿ 70,000 ಕೋಟಿ ರೂ. ಹೂಡಿಕೆ ಮಾಡಿ, 30,000 ಉದ್ಯೋಗ ಸೃಷ್ಟಿ ಮಾಡುವುದಾಗಿ ಉದ್ಯಮಿ ಗೌತಮ್‌ ಅದಾನಿ ತಿಳಿಸಿದ್ದಾರೆ. ಶುಕ್ರವಾರ ಉತ್ತರ ಪ್ರದೇಶ ಹೂಡಿಕೆದಾರರ ಶೃಂಗಸಭೆಯಲ್ಲಿ ಭಾಗವಹಿಸಿದ ಅವರು ಈ ಮಾತನ್ನಾಡಿದ್ದಾರೆ. ಹಸುರು ವಿದ್ಯುತ್‌, ಪ್ರಸರಣ, ಜಲ, ಕೃಷಿ ಲಾಜಿಸ್ಟಿಕ್ಸ್‌, ದತ್ತಾಂಶ ಕೇಂದ್ರ ವ್ಯವಹಾರಕ್ಕೆಂದು ಈಗಾಗಲೇ 11,000 ಕೋಟಿ ಹೂಡಿಕೆ ಮಾಡಲಾಗಿದೆ. ರಸ್ತೆ ಮತ್ತು ಸಾರಿಗೆ ಕ್ಷೇತ್ರದಲ್ಲಿ 24,000 ಕೋಟಿ ರೂ., ಮಲ್ಟಿ ಮೋಡಲ್‌ ಲಾಜಿಸ್ಟಿಕ್ಸ್‌ ಕ್ಷೇತ್ರ ಮತ್ತು ರಕ್ಷಣ ಕ್ಷೇತ್ರಗಳಲ್ಲಿ 35,000 ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂದು ಅವರು ತಿಳಿಸಿ ದ್ದಾರೆ. ಹಾಗೆಯೇ ದಕ್ಷಿಣ ಏಷ್ಯಾದ ಅತ್ಯಂತ ದೊಡ್ಡ ಯುದ್ಧ ಸಾಮಗ್ರಿ ಸಂಕೀರ್ಣವನ್ನು ಕಾನ್ಪುರದಲ್ಲಿ ನಿರ್ಮಿಸುವುದಾಗಿಯೂ ಅವರು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next