ಬೆಂಗಳೂರು: ಉತ್ತರಪ್ರದೇಶಕ್ಕೆ ಕಳವು ಪ್ರಕರಣದ ಸಂಬಂಧ ಒಡವೆಗಳ ಜಪ್ತಿಗೆ ತೆರಳಿದ್ದಾಗ ಸದಾಶಿವನಗರ ಠಾಣೆ ಪೊಲೀಸರನ್ನು ಯಾಮಾರಿಸಿ ಸಿನಿಮೀಯ ಶೈಲಿಯಲ್ಲಿ ಆರೋಪಿ ತಪ್ಪಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಉತ್ತರಪ್ರದೇಶ ಮೂಲದ ಪಂಕಜ್ ಎಂಬಾತನೇ ಈ ಚಾಲಾಕಿ ಕಳ್ಳನಾಗಿದ್ದು, ವರ್ಷಾಚರಣೆ ವೇಳೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಮೂರ್ಛೆ ರೋಗಿಯಂತೆ ನಟಿಸಿ ಆತ ತಪ್ಪಿಸಿಕೊಂಡಿದ್ದಾನೆ. ಆರೋಪಿ ಪತ್ತೆಗೆ ಸ್ಥಳೀಯ ಪೊಲೀಸರು ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದಾಶಿವನಗರದ ಅನಿತಾ ಕರ್ತೂರಿ ಎಂಬುವರ ಮನೆಯಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಪಂಕಜ್, ಕೆಲ ದಿನಗಳ ಹಿಂದೆ ಆ ಮನೆಯಲ್ಲಿ ಲ್ಯಾಪ್‌ಟಾಪ್, ಮೊಬೈಲ್, ಚಿನ್ನಾಭರಣ ಹಾಗೂ ವಿದೇಶಿ ನೋಟುಗಳನ್ನು ಕದ್ದು ಪರಾರಿಯಾಗಿದ್ದ. ಈ ಸಂಬಂಧ ಅನಿತಾ ಅವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದ್ದ ಸದಾಶಿವನಗರ ಠಾಣೆ ಪೊಲೀಸರು, ಡಿ.28 ರಂದು ಆರೋಪಿಯನ್ನು ಬಂಧಿಸಿದ್ದರು. ಆ ವೇಳೆ ಆತನಿಂದ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿತ್ತು.
ಆದರೆ, ಚಿನ್ನಾಭರಣಗಳನ್ನು ಅಯೋಧ್ಯೆ ನಗರದ ಆಭರಣದ ಅಂಗಡಿಯಲ್ಲಿ ಅಡವಿಟ್ಟಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದ. ಹೀಗಾಗಿ ಎಸ್‌ಐ ಧನಂಜಯ್ ನೇತೃತ್ವದ ತಂಡವು, ಆರೋಪಿಯನ್ನು ಡಿ. 31ರಂದು ರಾತ್ರಿ ಉತ್ತರಪ್ರದೇಶಕ್ಕೆ ಕರೆದುಕೊಂಡು ತೆರಳಿತು. ಆ ವೇಳೆ ಸಿಬ್ಬಂದಿ ಬಳಿ ಮೂರ್ಛೆ ರೋಗಿಯಂತೆ ನಟಿಸಿದ್ದಾನೆ.
ಆದರೆ, ಇದನ್ನರಿಯದ ಪೊಲೀಸರು, ಆರೋಪಿಗೆ ಹಾಕಿದ್ದ ಕೈ ಕೊಳ ಬಿಚ್ಚಿದ್ದಾರೆ. ನಂತರ ಪೊಲೀಸರ ಗಮನ ಬೇರೆಡೆ ಸೆಳೆದು ಕಾಲ್ಕಿತ್ತಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪಂಕಜ್ ಬಾಯಿಯಿಂದ ನೊರೆ ಕಕ್ಕಿ ನಿತ್ರಾಣಗೊಂಡಂತೆ ಕಂಡು ಬಂದನು. ಹಾಗಾಗಿ ನಾವು ಬೇಡಿ ತೆಗೆದು ಕೈ-ಕಾಲು ಉಜ್ಜಿ ಆರೈಕೆ ಮಾಡಿದೆವು. ಇದಾದ ಸ್ವಲ್ಪ ಸಮಯದಲ್ಲೇ ಆತ, ಎದ್ದು ಓಡಿ ಹೋದನು.
ಕೂಡಲೇ ನಾವು ಸುತ್ತಮುತ್ತ ಸ್ಥಳಗಳಲ್ಲಿ ಹುಡುಕಾಡಿದರೂ ಅವನ ಸುಳಿವು ಸಿಗಲಿಲ್ಲ ಎಂದು ಸಿಬ್ಬಂದಿ ವಿವರಣೆ ನೀಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಸ್ಥಳೀಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಈ ಘಟನೆ ಸಂಬಂಧ ಪಿಎಸ್‌ಐ ಹಾಗೂ ನಾಲ್ವರು ಸಿಬ್ಬಂದಿ ನೋಟಿಸ್ ಜಾರಿಗೊಳಿಸಲಾಗಿದ್ದು, ತಪ್ಪಿಸಿಕೊಂಡಿರುವ ಆರೋಪಿಗೆ ಹುಡುಕಾಟ ನಡೆದಿದೆ.