Advertisement

ತಂತ್ರಗಾರಿಕೆ ಬದಲಿಸಿದ ಬಿಜೆಪಿ! ಉತ್ತರ ಪ್ರದೇಶ ಚುನಾವಣೆಗೆ ಹೊಸ ಕಾರ್ಯತಂತ್ರ

09:15 PM Jan 18, 2022 | Team Udayavani |

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳು ಉಳಿದಿದ್ದು, ಈ ಹಿನ್ನೆಲೆಯಲ್ಲಿ ಶತಾಯ ಗತಾಯ ಅಧಿಕಾರದಲ್ಲಿ ಮುಂದುವರಿಯಲು ಸಿದ್ಧತೆ ನಡೆಸಿರುವ ಬಿಜೆಪಿ, ತನ್ನ ಕಾರ್ಯತಂತ್ರದಲ್ಲೂ ಕೊಂಚ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಿದೆ. ಅಂಗಪಕ್ಷಗಳ ಜೊತೆಗಿನ ಸ್ಥಾನ ಹೊಂದಾಣಿಕೆ ಸೂತ್ರವನ್ನು ಕೊಂಚ ಸಡಿಲಗೊಳಿಸಲು ಹಾಗೂ ಹಾಲಿ ಶಾಸಕರಲ್ಲೇ ಹೆಚ್ಚಿನ ಮಂದಿಗೆ ಟಿಕೆಟ್‌ ನೀಡುವ ಬಗ್ಗೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

Advertisement

ಈ ಮೊದಲು, ಹಾಲಿ ಶಾಸಕರಲ್ಲಿ 100-150 ಶಾಸಕರನ್ನು ಕೈಬಿಟ್ಟು ಹೊಸಬರಿಗೆ ಟಿಕೆಟ್‌ ಕೊಡಲು ಬಿಜೆಪಿ ಚಿಂತನೆ ನಡೆಸಿತ್ತು. ಅದೇ ಸೂತ್ರದಡಿ, ತನ್ನ 107 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅದರ ಬೆನ್ನಲ್ಲೇ ಪಕ್ಷದ ಹಲವಾರು ನಾಯಕರು ಬಿಜೆಪಿ ತೊರೆದಿದ್ದರು. ಇದು, ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ ತನ್ನ ನಿಲುವುಗಳನ್ನು ಬದಲಿಸಿಕೊಳ್ಳಲು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದೆ ಎನ್ನಲಾಗಿದೆ.

2ನೇ ಪಟ್ಟಿಯಲ್ಲಿ ಸುಮಾರು 50 ಶಾಸಕರಿಗೆ ಕೊಕ್‌ ಕೊಡಲು ನಿರ್ಧರಿಸಲಾಗಿತ್ತು. ಆ ಶಾಸಕರ ಕ್ಷೇತ್ರವಾರು ಸಮೀಕ್ಷೆಗಳೂ ಅಲ್ಲಿ ಆಡಳಿತ ವಿರೋಧಿ ಅಲೆ ಇರುವುದನ್ನು, ಹೊಸಬರಿಗೆ ಅವಕಾಶ ಕೊಟ್ಟರೆ ಮಾತ್ರ ಅಲ್ಲಿ ಬಿಜೆಪಿ ಗೆಲ್ಲುವ ಅವಕಾಶ ಹೆಚ್ಚಿದೆ ಎಂಬುದನ್ನು ಒತ್ತಿ ಹೇಳಿದ್ದವು. ಆದರೆ, ಅದರ ಹೊರತಾಗಿಯೂ ಈ 50 ಮಂದಿಗೇ ಟಿಕೆಟ್‌ ಕೊಡಬೇಕಾದ ಅನಿವಾರ್ಯತೆಗೆ ಬಿಜೆಪಿ ಸಿಲುಕಿದೆ.

ಸೀಟು ಹಂಚಿಕೆ:
ಮತ್ತೊಂದೆಡೆ ಸೀಟು ಹಂಚಿಕೆ ಬಗ್ಗೆ ಮಿತ್ರ ಪಕ್ಷಗಳಾದ ನಿಶಾದ್‌ ಪಾರ್ಟಿ ಹಾಗೂ ಅಪ್ನಾ ದಳ್‌ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ಈ ಬಾರಿ ಆ ಎರಡೂ ಪಕ್ಷಗಳು ಹೆಚ್ಚಿನ ಸೀಟುಗಳ ಆಗ್ರಹ ಮುಂದಿಟ್ಟಿದ್ದರೂ, ಬಿಜೆಪಿ ಮಾತ್ರ ಅವರೆಡಕ್ಕೆ ತಲಾ 15 ಸೀಟುಗಳನ್ನು ಮಾತ್ರ ನೀಡಲು ನಿರ್ಧರಿಸಿದೆ.

ಅಪರಾಧ ಹಿನ್ನೆಲೆ ಘೋಷಣೆ:
ಈ ನಡುವೆ ಮತದಾರರ ವಿಶ್ವಾಸವನ್ನು ಗೆಲ್ಲುವ ಸಲುವಾಗಿ ಬಿಜೆಪಿಯು ತಾನು ಇತ್ತೀಚೆಗೆ ಬಿಡುಗಡೆ ಮಾಡಿರುವ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿರುವ 25 ನಾಯಕರ ಅಪರಾಧ ಹಿನ್ನೆಲೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿರುವ ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌, ಬಿಜೆಪಿಯು ಚುನಾವಣೆಗೆ ಅಪರಾಧ ಹಿನ್ನೆಲೆಯುಳ್ಳವರನ್ನು ಕಣಕ್ಕಿಳಿಸಿದೆ ಎಂದಿದ್ದಾರೆ.

Advertisement

ಇದನ್ನೂ ಓದಿ:ಶ್ರೀರಾಮ, ಶ್ರೀಕೃಷ್ಣರಂತೆ ಪಿಎಂ ಮೋದಿ ದೇವರ ಅವತಾರ: ಸಚಿವ ಕಮಲ್‌ ಪಟೇಲ್‌

ಹೊಸ ಕಾಲಂ ಸೇರ್ಪಡೆ
ಈ ಬಾರಿಯ ಪಂಚರಾಜ್ಯ ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಚುನಾವಣಾ ವೆತ್ಛದ ಪಟ್ಟಿಯಲ್ಲಿ ಡಿಜಿಟಲ್‌ ಮಾಧ್ಯಮಗಳಲ್ಲಿನ ಪ್ರಚಾರಕ್ಕಾಗಿ ವ್ಯಯಿಸಿದ ಹಣದ ಮೊತ್ತವನ್ನೂ ತಿಳಿಸಬೇಕೆಂದು ಚುನಾವಣಾ ಆಯೋಗ ಸೂಚಿಸಿದೆ. ಇದಕ್ಕಾಗಿ, ಅಭ್ಯರ್ಥಿಗಳಿಗೆ ನೀಡಲಾಗುವ ಚುನಾವಣಾ ವೆಚ್ಚ ರಿಟರ್ನ್ ಅರ್ಜಿ ನಮೂನೆಯಲ್ಲಿ ಡಿಜಿಟಲ್‌ ಪ್ರಚಾರದ ಖರ್ಚು ಎಂಬ ಕಾಲಂ ಸೇರ್ಪಡೆಗೊಳಿಸುವುದಾಗಿ ತಿಳಿಸಿದೆ.
ಮತ್ತೊಂದೆಡೆ ಅಭ್ಯರ್ಥಿಗಳ ಅಪರಾಧದ ಹಿನ್ನೆಲೆಯ ವಿವರಗಳನ್ನು ಪ್ರಕಟಿಸಲು ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಒಪ್ಪಿಕೊಂಡಿದೆ.

ಪಂಜಾಬ್‌ನಲ್ಲಿ ಇ.ಡಿ. ದಾಳಿ
ಪಂಜಾಬ್‌ನಲ್ಲಿ ನಡೆದಿದೆಯೆನ್ನಲಾಗಿರುವ ಅಕ್ರಮ ಮರಳುಗಾರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಂಡೀಗಢದ ಕೆಲವು ನಿವಾಸಗಳು, ಕಚೇರಿಗಳ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ. ದಾಳಿಗೊಳಗಾದ ಕೆಲವರು ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಸಂಬಂಧಿಕರೆಂದು ಹೇಳಲಾಗಿದೆ.

ಇದರ ಬೆನ್ನಲ್ಲೇ ಆಪ್‌ ನಾಯಕ ಕೇಜ್ರಿವಾಲ್‌, ಸಿಎಂ ಚನ್ನಿ ವಿರುದ್ಧ ಹರಿಹಾಯ್ದಿದ್ದಾರೆ. “”ಅಕ್ರಮ ಮರಳುಗಾರಿಕೆ ಸಂಬಂಧಿಸಿ ಸಿಎಂ ಸಂಬಂಧಿಕರ ಮನೆಗಳ ಮೇಲೆ ಇ.ಡಿ. ದಾಳಿ ಆಗಿರುವುದು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ” ಎಂದು ಹೇಳಿದ್ದಾರೆ.

– ಪ್ರಧಾನಿ ಸಂವಾದ
ವಾರಾಣಸಿಯಲ್ಲಿರುವ ಬಿಜೆಪಿ ಕಾರ್ಯಕರ್ತರ ಜೊತೆಗೆ, ಪ್ರಧಾನಿ ನರೇಂದ್ರ ಮೋದಿಯವರು ನಮೋ ಆ್ಯಪ್‌ ಮೂಲಕ ಬುಧವಾರ ಸಂವಾದ ನಡೆಸಿದರು. ಕಾಶಿ ವಿಶ್ವನಾಥ ಕಾರಿಡಾರ್‌, ಮಹಿಳಾ ಸಬಲೀಕರಣ, ಮೂಲಸೌಕರ್ಯ ಹಾಗೂ ಆರೋಗ್ಯ ಸೇವೆಗಳ ಅಭಿವೃದ್ಧಿ ಮುಂತಾದ ವಿಚಾರಗಳನ್ನು ಚರ್ಚಿಸಲಾಯಿತು.

– ಕಾಂಗ್ರೆಸ್‌ 3ನೇ ಪಟ್ಟಿ ಪ್ರಕಟ
ಗೋವಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನ ಮೂರನೇ ಅಭ್ಯರ್ಥಿಗಳ ಪಟ್ಟಿಯೊಂದನ್ನು ಬುಧವಾರ ಬಿಡುಗಡೆ ಮಾಡಿದೆ. ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡಿರುವ ಮಾಜಿ ಸಚಿವ ಮೈಕಲ್‌ ಲಾಬೂ ಸೇರಿದಂತೆ 9 ಮಂದಿಯ ಹೆಸರುಗಳು ಪಟ್ಟಿಯಲ್ಲಿವೆ.

ಸಂಸದ ಭಗವಂತ ಮನ್‌ ಸಿಎಂ ಅಭ್ಯರ್ಥಿ
ಪಂಜಾಬ್‌ ಚುನಾವಣೆಯಲ್ಲಿ ಆಪ್‌ ಗೆಲ್ಲಲಿದೆ ಎಂಬ ಬಗ್ಗೆ ಹಲವು ಸಮೀಕ್ಷೆಗಳಲ್ಲಿ ವ್ಯಕ್ತವಾಗುತ್ತಿರುವಂತೆಯೇ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪ್ರಕಟಿಸಿದೆ. ಸಂಗ್ರೂರ್‌ ಕ್ಷೇತ್ರದಿಂದ ಸದ್ಯ 2ನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿರುವ ಭಗವಂತ ಮನ್‌° ಮುಂದಿನ ಚುನಾವಣೆಯಲ್ಲಿ ಪಕ್ಷ ಗೆದ್ದರೆ, ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಆಪ್‌ ಸಂಚಾಲಕ ಅರವಿಂದ ಕೇಜ್ರಿವಾಲ್‌ ಪ್ರಕಟಿಸಿದ್ದಾರೆ. ಮನ್‌ ಅವರಿಗೆ ಶೇ.93ರಷ್ಟು ಮತಗಳು ಪ್ರಾಪ್ತವಾಗಿವೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next