Advertisement

ಪಾತಕಿಗಳು ಪಾತಾಳದಲ್ಲಿದ್ದರೂ ಬಿಡುತ್ತಿರಲಿಲ್ಲ: ಪ್ರಧಾನಿ ಮೋದಿ ಗುಡುಗು

10:46 PM Feb 20, 2022 | Team Udayavani |

ಹರ್ದೋಯಿ (ಉತ್ತರ ಪ್ರದೇಶ): “ಅಹ್ಮದಾಬಾದ್‌ ಸ್ಫೋಟಕ್ಕೆ ಕಾರಣರಾದ ಇಂಡಿಯನ್‌ ಮುಜಾಹಿದ್ದೀನ್‌ನ ಪಾತಕಿಗಳು ಪಾತಾಳದಲ್ಲೇ ಅಡಗಿದ್ದರೂ ನಾನು ಬಿಡುತ್ತಿರಲಿಲ್ಲ” – ಇದು ಪ್ರಧಾನಿ ನರೇಂದ್ರ ಮೋದಿಯವರ ಗುಡುಗು.

Advertisement

ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಭಾನುವಾರ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, “2008ರಲ್ಲಿ ಈ ಘಟನೆ ನಡೆದಾಗ ಅಹ್ಮದಾಬಾದ್‌ನ ಮಣ್ಣು ಜನರ ರಕ್ತದಲ್ಲಿ ತೊಯ್ದು ಹೋಗಿತ್ತು. ಆಗ ನಾನು ಗುಜರಾತ್‌ ಮುಖ್ಯಮಂತ್ರಿಯಾಗಿದ್ದೆ. ಸ್ಫೋಟ ನಡೆದಾಗ ರಕ್ತಸಿಕ್ತ ಮಣ್ಣನ್ನು ಕೈಯ್ಯಲ್ಲಿ ಹಿಡಿದ ನಾನು, ಈ ದೃಷ್ಕೃತ್ಯದ ಹಿಂದಿನ ಪಾತಕಿಗಳು ಪಾತಾಳದಲ್ಲೇ ಅಡಗಿದ್ದರೂ ನಾನು ಅವರನ್ನು ಬಿಡದೆ ಶಿಕ್ಷಿಸುತ್ತೇನೆಂದು ಶಪಥ ಮಾಡಿದೆ.

ಅಹ್ಮದಾಬಾದ್‌ ಕೋರ್ಟ್‌ನಲ್ಲಿ ಈ ಪ್ರಕರಣ ವಿಚಾರಣೆಯಲ್ಲಿದ್ದಿದ್ದರಿಂದ ಈವರೆಗೆ ನಾನು ಮಾತನಾಡಿರಲಿಲ್ಲ” ಎಂದು ಹೇಳಿದರು.

ಇದೇ ವೇಳೆ, ಸಮಾಜವಾದಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅವರು, “”2007ರಲ್ಲಿ ಅಯೋಧ್ಯೆ ಹಾಗೂ ಲಕ್ನೋದಲ್ಲಿ ಸ್ಫೋಟಗಳಾದವು. 2013ರಲ್ಲಿ ಉತ್ತರ ಪ್ರದೇಶ ಆಳುತ್ತಿದ್ದ ಸಮಾಜವಾದಿ ಪಕ್ಷ ಆ ಸ್ಫೋಟಗಳ ಆರೋಪಿಯಾಗಿª ತಾರೀಖ್‌ ಕಜ್ಮಿ ವಿರುದ್ಧ ಪ್ರಕರಣಗಳನ್ನು ಹಿಂಪಡೆಯಿತು. ಆದರೆ, ನ್ಯಾಯಾಲಯ ಅದಕ್ಕೆ ಅವಕಾಶ ಕೊಡದೆ ಆತನಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತು” ಎಂದರು.

“ಅಷ್ಟೇ ಅಲ್ಲ, ಉತ್ತರ ಪ್ರದೇಶದಲ್ಲಿ ನಡೆದಿದ್ದ ಉಗ್ರರ ದಾಳಿಗಳಿಗೆ ಸಂಬಂಧಿಸಿದ 14 ಪ್ರಕರಣಗಳನ್ನು ಸಮಾಜವಾದಿ ಪಕ್ಷ ಹಿಂಪಡೆದಿತ್ತು. ಆ ಮೂಲಕ ಆ ಪ್ರಕರಣಗಳಲ್ಲಿನ ಆರೋಪಿಗಳು ವಿಚಾರಣೆಗೊಳಪಡಲು ಆ ಪಕ್ಷ ಅವಕಾಶವನ್ನೇ ನೀಡಲಿಲ್ಲ. ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಆ ಪಕ್ಷ ಉಗ್ರರಿಗೆ ರಿಟರ್ನ್ ಗಿಫ್ಟ್ ನೀಡಿದೆ” ಎಂದು ಆರೋಪಿಸಿದರು.

Advertisement

ಇಡೀ ಪ್ರಕರಣದ ಹಿಂದಿನ ಸತ್ಯಾಸತ್ಯಗಳನ್ನು ಮಾಧ್ಯಮಗಳು ಬಯಲು ಮಾಡಬೇಕು ಎಂದು ಅವರು ಕರೆ ನೀಡಿದರು.

“ಅಂದು ಕಿರುಕುಳ, ಇಂದು ಬೇಡಿಕೆ’
ಇದೇ ವೇಳೆ ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ಮೋದಿ, ಈ ಹಿಂದೆ ಇಡೀ ಪಕ್ಷವನ್ನು ತಮ್ಮ ಸ್ವಾಧೀನಕ್ಕೆ ಪಡೆಯಲು ಅಖೀಲೇಶ್‌ ಅವರು ತಮ್ಮ ತಂದೆಯವರಿಗೆ ಮಾನಸಿಕ ಕಿರುಕುಳ ಕೊಟ್ಟಿದ್ದರು. ಈಗ, ತಮ್ಮ ಸ್ಥಾನವನ್ನು ಉಳಿಸುವಂತೆ ತಂದೆಯ ಬೆನ್ನುಬಿದ್ದಿದ್ದಾರೆ ಎಂದರು. ಯಾವ ಕ್ಷೇತ್ರ ಸಮಾಜವಾದಿ ಪಕ್ಷದ ಭದ್ರಕೋಟೆ ಎಂದೆಣಿಸಿ, ಆ ಕ್ಷೇತ್ರದಿಂದ ಅಖೀಲೇಶ್‌ ಚುನಾವಣೆಗೆ ನಿಂತಿದ್ದಾರೋ ಈಗ ಆ ಕ್ಷೇತ್ರವೇ ಅವರ ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೋದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next