Advertisement

ಮೋದಿ, ಯೋಗಿ ಅಬ್ಬರದ ನಡುವೆ ಅಖಿಲೇಶ್ ಹವಾ

12:43 AM Jan 10, 2022 | Team Udayavani |

2022ರ‌ ಮೊದಲ ಚುನಾವಣ ಹಣಾಹಣಿಗೆ ಮುಹೂರ್ತ ನಿಗದಿಯಾಗಿದೆ. ಉತ್ತರ ಪ್ರದೇಶದ ಸಹಿತ 5 ರಾಜ್ಯಗಳ ವಿಧಾನ ಸಭಾ ಚುನಾವಣೆಗೆ ಕೇಂದ್ರ ಚುನಾವಣ ಆಯೋಗ ವೇಳಾ ಪಟ್ಟಿ ಪ್ರಕಟಿಸಿದೆ.

Advertisement

ಕಳೆದೆರಡು ತಿಂಗಳುಗಳಿಂದೀಚೆಗೆ ಈ ಐದೂ ರಾಜ್ಯಗಳಲ್ಲಿ ಅದರಲ್ಲೂ ಉತ್ತರ ಪ್ರದೇಶದಲ್ಲಿ ಚುನಾವಣ ಹವಾ ಬೀಸಲಾರಂಭಿಸಿತ್ತಾದರೂ ಇದಿನ್ನು ಮತ್ತಷ್ಟು ತೀವ್ರ ಗೊಳ್ಳಲಿದೆ.

ಈ ರಾಜ್ಯ ಎಲ್ಲ ರಾಜಕೀಯ ಪಕ್ಷಗಳಿಗೆ ಅತ್ಯಂತ ಮಹತ್ವದ ಮಾತ್ರವಲ್ಲದೆ ಪ್ರತಿಷ್ಠೆಯ ಕಣ. 2014ರ ಲೋಕಸಭೆ ಚುನಾವಣೆವರೆಗೆ ಈ ರಾಜ್ಯದಲ್ಲಿ ಜಾತಿ ಸಮೀ ಕರಣಗಳೇ ಪ್ರತಿಯೊಂದೂ ಚುನಾವಣೆಯಲ್ಲೂ ಪ್ರಧಾನ ಪಾತ್ರ ವಹಿಸುತ್ತ ಬಂದಿದ್ದರೆ ಆ ಬಳಿಕ ರಾಜ್ಯದ ಜನತೆ ಅಭಿವೃದ್ಧಿ ಮತ್ತು ನಾಯಕರ ವರ್ಚಸ್ಸನ್ನು ಪರಿಗಣಿಸಿ ಮತ ಚಲಾ
ಯಿಸಲಾರಂಭಿಸಿರುವುದು ಕಳೆದ ಮೂರೂ ಪ್ರಮುಖ ಚುನಾವಣೆಗಳಲ್ಲಿ ಸಾಬೀತಾಗಿದೆ.

ಉತ್ತರ ಪ್ರದೇಶ 403 ವಿಧಾನಸಭಾ ಕ್ಷೇತ್ರಗಳು ಮತ್ತು 80 ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವುದರಿಂದ ದೇಶದ ರಾಜ ಕೀಯದಲ್ಲಿ ಅತ್ಯಂತ ಮಹತ್ವದ ರಾಜ್ಯವೆಂದೇ ಪರಿಗಣಿಸಲ್ಪಟ್ಟಿದೆ. 1990 ಮತ್ತು 2000 ದಶಕದಲ್ಲಿ ಈ ರಾಜ್ಯದಲ್ಲಿ ನಡೆದ ಬಹುತೇಕ ಚುನಾವಣೆಗಳಲ್ಲಿ ಅಯೋಧ್ಯೆ ವಿವಾದ, ಮೀಸ ಲಾತಿ ವಿಚಾರಗಳೇ ಪ್ರಮುಖ ಚುನಾವಣ ವಿಷಯಗಳಾಗಿದ್ದರೆ 2010ರ ಬಳಿಕ ಈ ವಿಷಯಗಳು ಒಂದಿಷ್ಟು ಹಿನ್ನೆಲೆಗೆ ಸರಿದು ರಾಜ್ಯದ ಕಾನೂನು-ಸುವ್ಯವಸ್ಥೆ, ಅಭಿವೃದ್ಧಿ ವಿಚಾರಗಳು ಮುನ್ನೆಲೆಗೆ ಬಂದವು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿದ್ದ ನರೇಂದ್ರ ಮೋದಿ ಅವರು ವಾರಾಣಸಿಯಿಂದ ಕಣಕ್ಕಿಳಿಯುವ ಮೂಲಕ ಇಡೀ ರಾಜ್ಯದ ರಾಜಕೀಯ ಚಿತ್ರಣವೇ ಬದಲಾಯಿತು. ಬಿಜೆಪಿಯ ಪ್ರಮುಖ ಚುನಾವಣ ಅಸ್ತ್ರಗಳಾಗಿದ್ದ ಅಯೋಧ್ಯೆ, ಹಿಂದುತ್ವ ಅಜೆಂಡಾದ ಜತೆಯಲ್ಲಿ ಅಭಿವೃದ್ಧಿಯ ಮಂತ್ರವನ್ನು ಪಠಿಸಿದ ಬಿಜೆಪಿಗೆ ಇದು ವರದಾನವಾಗಿ ಪರಿಣಮಿಸಿತು. ಆ ಬಳಿಕ ನಡೆದ 2017ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಗೆಲುವಿನ ನಾಗಾಲೋಟ ಮುಂದುವರಿಸಿತು.

ಕಳೆದ ಬಾರಿ ಅಂದರೆ 2017ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ ರಲಿಲ್ಲ. ಭರ್ಜರಿ ಬಹುಮತ ಪಡೆದ ಬಳಿಕ ಯೋಗಿ ಆದಿತ್ಯ ನಾಥ್‌ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿತ್ತು. ಈಗ ಯೋಗಿ ಅವರ ನೇತೃತ್ವದಲ್ಲಿಯೇ ಈ ಬಾರಿಯ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತಿದೆ. ಹೀಗಾಗಿ ಕೇವಲ ಯೋಗಿ ಅವರಿಗೆ ಮಾತ್ರವಲ್ಲದೆ ರಾಜ್ಯದಲ್ಲಿ ವಿಪಕ್ಷವಾಗಿರುವ ಎಸ್‌ ಪಿಯ ಅಧ್ಯಕ್ಷ ಅಖೀಲೇಶ್‌ ಯಾದವ್‌ ಮತ್ತು ಬಿಎಸ್‌ ಪಿ ಮುಖ್ಯಸ್ಥೆ ಮಾಯಾವತಿ ಅವರಿಗೂ ವೈಯಕ್ತಿಕವಾಗಿ ಅತ್ಯಂತ ಮಹತ್ವದ ಚುನಾವಣೆ ಇದಾಗಿದೆ.

Advertisement

2017ರ ಚುನಾವಣೆ ಸಂದರ್ಭ ರಾಜ್ಯದಲ್ಲಿ ಅಖಿಲೇಶ್ ನೇತೃತ್ವದ ಸಮಾಜವಾದಿ ಪಾರ್ಟಿ ಅಧಿಕಾರದಲ್ಲಿದ್ದರೆ ಬಿಎಸ್‌ಪಿ ವಿಪಕ್ಷವಾಗಿತ್ತು. ಈ ಸಂದರ್ಭದಲ್ಲಿ ಬಿಎಸ್‌ಪಿ, ಕಾನೂನು ಸುವ್ಯವಸ್ಥೆ ವೈಫ‌ಲ್ಯ, ಭ್ರಷ್ಟಾಚಾರ ಮತ್ತಿತರ ವಿಚಾರಗಳನ್ನು ಮುಂದಿಟ್ಟು ಎಸ್‌ಪಿ ವಿರುದ್ಧ ತೊಡೆ ತಟ್ಟಿದರೆ; ಬಿಜೆಪಿ ಎಸ್‌ಪಿ ನೇತೃತ್ವದ ಸರಕಾರದ ಮುಸ್ಲಿಂ ಓಲೈಕೆ ನೀತಿಯ ವಿರುದ್ಧ ದನಿ ಎತ್ತಿತ್ತು. ಅಲ್ಲದೆ ಮುಜಫ‌ರ್‌ನಗರ ಗಲಭೆ, ಕೈರಾನದಿಂದ ಹಿಂದೂಗಳು ವಲಸೆ ಹೋಗುವಂಥ ಅನಿವಾರ್ಯ ಸ್ಥಿತಿ ನಿರ್ಮಿಸಿದ್ದು ಮತ್ತಿತರ ವಿಷಯಗಳನ್ನು ಅಖಿಲೇಶ್ ಸರಕಾರದ ವಿರುದ್ಧ ಪ್ರಧಾನ ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಆದರೆ ಈ ಬಾರಿ ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿನ ತನ್ನ ನೇತೃತ್ವದ ಸರಕಾರದ ಸಾಧನೆ, ಅಭಿವೃದ್ಧಿ ಯೋಜನೆಗಳ ಜತೆಯಲ್ಲಿ ತನ್ನ ಸಾಂಪ್ರದಾಯಿಕ ಅಜೆಂಡಾ ಆಗಿರುವ ಹಿಂದುತ್ವದ ವಿಚಾರ ವನ್ನು ಮುಂದಿಟ್ಟು ವಿಧಾನಸಭೆ ಚುನಾವಣೆ ಎದುರಿಸಲು ಸಜ್ಜಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡಿರುವುದನ್ನು ತನ್ನ ಬಲುದೊಡ್ಡ ಸಾಧನೆ ಎಂದು ಬಿಂಬಿಸಿ ಮತದಾರರನ್ನು ತನ್ನತ್ತ ಸೆಳೆಯುವ ಪ್ರಯತ್ನ ನಡೆಸಿದೆ.

ಉತ್ತರ ಪ್ರದೇಶ ಚುನಾವಣೆಯನ್ನು ಸ್ವತಃ ಪ್ರಧಾನಿ ಮೋದಿ ಅವರೂ ಗಂಭೀರವಾಗಿ ಪರಿಗಣಿಸಿದ್ದು ಕಳೆದ ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿ ರಾಜ್ಯಕ್ಕೆ 12 ಬಾರಿ ಭೇಟಿ ನೀಡಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ್ದಾರೆ. ಇದೇ ವೇಳೆ ಸಾರ್ವಜನಿಕ ರ‍್ಯಾಲಿಗಳನ್ನು ನಡೆಸಿ ಪಕ್ಷದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಜತೆಯಲ್ಲಿ ವಿಪಕ್ಷಗಳು ಅಧಿಕಾರದಲ್ಲಿದ್ದ ವೇಳೆ ಉತ್ತರ ಪ್ರದೇಶದಲ್ಲಿನ ಸ್ಥಿತಿಗತಿಯತ್ತ ಬೆಳಕು ಚೆಲ್ಲಿ ಜನರನ್ನು ಪಕ್ಷದತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಯೋಗಿ ಆದಿತ್ಯನಾಥ್‌ ಅವರು ಅಧಿಕಾರಕ್ಕೇರಿದಾಗಿನಿಂದ ರಾಜ್ಯದ ಪ್ರತೀ ಜಿಲ್ಲೆಗೂ ಭೇಟಿ ನೀಡುವ ಮೂಲಕ ತಮ್ಮ ವರ್ಚಸ್ಸನ್ನು ವೃದ್ಧಿಸಿಕೊಂಡಿದ್ದಾರೆ. ಕಳೆದ ಎರಡು ತಿಂಗಳುಗಳ ಅವಧಿಯಲ್ಲಂತೂ 2017ರ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ ಕ್ಷೇತ್ರಗಳಿಗೆ ಯೋಗಿ ಭೇಟಿ ನೀಡುವ ಮೂಲಕ ಪಕ್ಷದ ಬಲವರ್ಧನೆಗೆ ಪ್ರಯತ್ನಿಸಿದ್ದಾರೆ. 2017ರ ಚುನಾವಣೆಯಲ್ಲಿ 312 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ತನ್ನ ಮಿತ್ರಪಕ್ಷವಾಗಿರುವ ಅಪ್ನಾ ದಳ್‌ ಜತೆಗೂಡಿ 300 ಸ್ಥಾನಗಳ ಗಡಿಯನ್ನು ದಾಟುವ ಗುರಿಯನ್ನು ಹಾಕಿಕೊಂಡಿದೆ.
ಎಸ್‌ಪಿ ಹವಾ: ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್‌ ಅವರು ನಿರುದ್ಯೋಗ, ರೈತರ ಸಮಸ್ಯೆ, ಬೆಲೆ ಏರಿಕೆ, ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಜನಸಾಮಾನ್ಯರು ಮತ್ತು ಬಡವರ ನಿರ್ಲಕ್ಷ್ಯ ಮತ್ತಿತರ ವಿಷಯಗಳನ್ನು ಮುಂದಿಟ್ಟು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಕ್‌ ಪ್ರಹಾರ ನಡೆಸಿದ್ದಾರೆ.

ಈ ಬಾರಿ ಯಾದವೇತರ ಇತರ ಹಿಂದುಳಿದ ವರ್ಗಗಳ ಮತ ಸೆಳೆಯುವ ಪ್ರಯತ್ನದಲ್ಲಿ ಎಸ್‌ಪಿ ನಿರತರಾಗಿದ್ದು ಇದಕ್ಕಾಗಿ ಈ ಜಾತಿಗಳಿಗೆ ಸೇರಿದ ಸಣ್ಣಪುಟ್ಟ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ರಾಷ್ಟ್ರೀಯ ಲೋಕದಳದೊಂದಿಗೂ ಎಸ್‌ಪಿ ಮೈತ್ರಿ ಮಾಡಿಕೊಂಡಿದ್ದು ಪಶ್ಚಿಮ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ. ಅಷ್ಟು ಮಾತ್ರವಲ್ಲದೆ ಬಿಎಸ್‌ಪಿ ಮತ್ತು ಬಿಜೆಪಿಯ ಹಲವು ಹಾಲಿ ಶಾಸಕರನ್ನು ಮತ್ತು ಬಿಎಸ್‌ಪಿಯ ಒಬಿಸಿ ನಾಯಕರನ್ನು ತನ್ನ ತೆಕ್ಕೆಗೆ ಸೆಳೆದು ಕೊಂಡಿದ್ದು ಈ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರುವ ಲೆಕ್ಕಾಚಾರ ಹಾಕಿಕೊಂಡಿದೆ. 2012ರ ಚುನಾವಣೆಯಲ್ಲಿ ತನ್ನ ಸ್ವಂತ ಬಲದಿಂದ ಅಧಿಕಾರಕ್ಕೇರಿದ್ದ ಎಸ್‌ಪಿ 2017ರ ಚುನಾ ವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ಹೊರ ತಾಗಿಯೂ ಕೇವಲ 47 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಿತ್ತು.

ಆನೆ ಅಗೋಚರ: ಮಾಯಾವತಿ ನೇತೃತ್ವದ ಬಿಎಸ್‌ಪಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಚುನಾವಣ ಕಣಕ್ಕೆ ಇಳಿದಿಲ್ಲವಾಗಿದ್ದು ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಯತ್ನದಲ್ಲಿ ನಿರತವಾಗಿದೆ. ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ಮಾಯಾವತಿ ಅವರು ಈ ಬಾರಿ ತಮ್ಮ ಈ ಹಿಂದಿನ “ದಲಿತ-ಬ್ರಾಹ್ಮಣರ ನಡುವೆ ಸಹೋದರತೆ’ಯ ಮಂತ್ರಕ್ಕೇ ಜೋತುಬಿದ್ದಿದ್ದಾರೆ. ಅಷ್ಟು ಮಾತ್ರವಲ್ಲದೆ ದಲಿತರನ್ನು ಜಾಟ್‌, ಮುಸ್ಲಿಂ ಮತ್ತು ಇತರ ಹಿಂದುಳಿದ ವರ್ಗಗಳ ಜನರ ನಡುವೆಯೂ ಜತೆಗೂಡಿ ಸುವ ಪ್ರಯತ್ನ ನಡೆಸಿದ್ದಾರೆ. 2007ರ ಚುನಾವಣೆಯಲ್ಲಿ 206 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಅವರು 2012ರಲ್ಲಿ 80, 2017ರ ಚುನಾವಣೆಯಲ್ಲಿ 17 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು.

ಕಾಂಗ್ರೆಸ್‌ಗೆ ನಾಯಕತ್ವದ್ದೇ ಸಮಸ್ಯೆ: ಕಳೆದ ಮೂರು ದಶಕಗಳಿಗಿಂತಲೂ ಅಧಿಕ ಸಮಯದಿಂದ ರಾಜ್ಯದಲ್ಲಿ ಅಧಿಕಾರದಿಂದ ದೂರವೇ ಉಳಿದಿರುವ ಕಾಂಗ್ರೆಸ್‌ನ ಸ್ಥಿತಿ ಈ ಬಾರಿಯೂ ಅಷ್ಟೇನೂ ಉತ್ತೇಜನಕಾರಿಯಾಗಿಲ್ಲ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರನ್ನು ಮುಂದಿಟ್ಟುಕೊಂಡು ಈ ಬಾರಿಯ ಚುನಾವಣೆ ಯನ್ನು ಎದುರಿಸಲು ಕಾಂಗ್ರೆಸ್‌ ಸನ್ನದ್ಧವಾಗಿದೆ. ಪ್ರಿಯಾಂಕಾ ವಾದ್ರಾ ಅವರಂತೂ ಆರಂಭದಿಂದಲೂ ಮಹಿಳಾ ಮಂತ್ರವನ್ನು ಜಪಿಸುತ್ತಿದ್ದು ಈ ಚುನಾವಣೆಯಲ್ಲಿ ಶೇ.40ರಷ್ಟು ಟಿಕೆಟ್‌ಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ನೀಡುವುದಾಗಿ ಘೋಷಿಸಿ, ಮಹಿಳಾ ಪರ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ ಪಕ್ಷದಲ್ಲಿ ಪ್ರಬಲ ಸಂಘಟನೆಯಾಗಲೀ ನಾಯಕರಾಗಲೀ ಇಲ್ಲದಿರುವುದು ಕಾಂಗ್ರೆಸ್‌ ಪಾಲಿಗೆ ಬಲು ದೊಡ್ಡ ಹಿನ್ನಡೆಯಾಗಿದೆ. ಹೀಗಾಗಿ ಕಾಂಗ್ರೆಸ್‌ ಪಾಲಿಗೆ ಈ ಬಾರಿಯ ಚುನಾವಣೆ ಕೂಡ ಅಷ್ಟೇನೂ ಆಶಾದಾಯಕ ಫ‌ಲಿತಾಂಶ ತಂದುಕೊಡುವ ಸಾಧ್ಯತೆ ಕಡಿಮೆ.

ಒಟ್ಟಾರೆ ಈ ಬಾರಿಯ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಿಜೆಪಿ ಮತ್ತು ಸಮಾಜವಾದಿ ಪಾರ್ಟಿ ನಡುವಣ ನೇರ ಸಮರದಂತೆ ಭಾಸವಾಗುತ್ತಿದ್ದು ಮುಂದಿನ ದಿನಗಳಲ್ಲಿ ಅಂದರೆ ಪ್ರಚಾರದ ವೇಳೆ ಇತರ ಪಕ್ಷಗಳ ಕಾರ್ಯ ವೈಖರಿಯಿಂದಾಗಿ ರಾಜಕೀಯ ಚಿತ್ರಣ ಬದಲಾದರೂ ಅಚ್ಚರಿ ಇಲ್ಲ. ರಾಜ್ಯದಲ್ಲಿ ಈ ಹಿಂದಿನಿಂದಲೂ ಪ್ರಾದೇಶಿಕವಾರು ವಿಷಯಗಳೇ ಚುನಾವಣೆಯ ಸಂದರ್ಭದಲ್ಲಿ ಪ್ರಮುಖ ವಿಷಯಗಳಾಗಿ ಮಾರ್ಪಾಡಾಗುತ್ತಿರುವುದರಿಂದ ಸದ್ಯದ ಒಟ್ಟಾರೆ ರಾಜಕೀಯ ಚಿತ್ರಣ ಏರುಪೇರಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಆದರೆ ಬಿಜೆಪಿ ಮಾತ್ರ ಅಧಿಕಾರವನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ.

-ಹರೀಶ್‌ ಕೆ.

Advertisement

Udayavani is now on Telegram. Click here to join our channel and stay updated with the latest news.

Next