ಸುಬ್ರಹ್ಮಣ್ಯ: ಉತ್ತರ ಪ್ರದೇಶ ಹಾಗೂ ಇತರ ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಹಾಕಿಕೊಂಡ ಪ್ರಚಾರ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸಿಕೊಂಡು ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುವಂತೆ ಮಾಡಲಾಗುವುದು ಎಂದು ಉತ್ತರ ಪ್ರದೇಶದ ಗ್ರಾಮೀಣಾಭಿವೃದ್ಧಿ ಸಚಿವ, ಲಕ್ನೋ ಶಾಸಕ ಡಾ| ಮಹೇಂದ್ರ ಸಿಂಗ್ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಶನಿವಾರ ಆಗಮಿಸಿ ಶ್ರೀ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಗುರಿ ಸಾಧನೆಗೆ ತಂತ್ರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ 150 ಪ್ಲಸ್ ಯೋಜನೆ ಯನ್ನು ರಾಜ್ಯದಲ್ಲಿ ಯಶಸ್ವಿಗೊಳಿಸುವುದು ನಮ್ಮ ಗುರಿ. ಅನ್ಯ ರಾಜ್ಯಗಳ ನಾಯಕರು ರಾಜ್ಯಕ್ಕೆ ಆಗಮಿಸಿ ಚುನಾವಣೆ ತಂತ್ರ ರಚಿಸಲಾಗುತ್ತಿದೆ. ಆದರಂತೆ ನಾನು ರಾಜ್ಯಕ್ಕೆ ಬಂದಿದ್ದೇನೆ ಎಂದರು.
ದ.ಕ., ಉಡುಪಿ, ಕೊಡಗು ಹಾಗೂ ಉ.ಕ. ಭಾಗದಲ್ಲಿ ಚುನಾವಣೆಗೆ ಸಂಬಂಧಿಸಿ ಸ್ಥಳೀಯ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಲಾಗುತ್ತಿದೆ. ಚುನಾವಣೆ ಗೆಲ್ಲಲು ಕಾರ್ಯತಂತ್ರ ಮತ್ತು ಯೋಜನೆ, ಮಾರ್ಗದರ್ಶನ ನೀಡಲಾಗುತ್ತದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ಮತ್ತು ನೆಲ್ಯಾಡಿ ಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರನ್ನು, ಸ್ಥಳಿಯ ಚುನಾವಣ ಸಮಿತಿಯನ್ನು ಭೇಟಿಯಾಗಿ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ರಾಜ್ಯದಲ್ಲಿ ಹಿಂದೂ ವಿರೋಧಿ, ಕೃಷಿ ವಿರೋಧಿ ಸರಕಾರ ತೊಲಗಬೇಕು. 15 ದಿನಗಳ ಕಾಲ ಇಲ್ಲಿದ್ದು, ಚುನಾವಣೆ ಗೆಲ್ಲಲು ಬೇಕಿರುವ ತಂತ್ರಗಾರಿಕೆ ಕುರಿತು ರಚನಾತ್ಮಕವಾಗಿ ಯೋಜನೆ ರೂಪಿಸಲಾಗುವುದು ಎಂದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್, ಪುತ್ತೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಸಂಚಾಲಕ ಕೃಷ್ಣ ಶೆಟ್ಟಿ, ಬಿಜೆಪಿ ಮುಖಂಡ ರಾಜೇಶ್ ಎನ್.ಎಸ್. ಉಪಸ್ಥಿತರಿದ್ದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಜನವಿರೋಧಿ, ಹಿಂದೂ ವಿರೋಧಿ ಹಾಗೂ ಆಡಳಿತ ಯಂತ್ರದ ವೈಫ ಲ್ಯಗಳನ್ನು ಜನರ ಮುಂದಿರಿಸಿ ಈ ಸರಕಾರವನ್ನು ಕಿತ್ತೆಸೆಯಲು ಸಂಕಲ್ಪ ತೊಟ್ಟಿದ್ದೇವೆ. ಜಿಲ್ಲೆಯ ಎಂಟು ಸ್ಥಾನಗ ಳನ್ನು ಬಿಜೆಪಿ ಗೆಲ್ಲಲಿದೆ. ರಾಜ್ಯದಲ್ಲಿ ನಮ್ಮದೇ ಸರಕಾರ ಬರಲಿದೆ.
– ಡಾ| ಮಹೇಂದ್ರ ಸಿಂಗ್