ಲಕ್ನೋ : ಉತ್ತರ ಪ್ರದೇಶದ ಪೊಲೀಸ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸುತ್ತಿರುವ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ ವಂಚನೆ ಎಸಗಿದ ಸುಮಾರು 22 ಮಂದಿಯನ್ನು ಇಂದು ಮಂಗಳವಾರ ಬಂಧಿಸಲಾಗಿದೆ.
ಈ ಬಂಧನಗಳನ್ನು ಉತ್ತರ ಪ್ರದೇಶ ಪೊಲೀಸ್‌ನ ವಿಶೇಷ ಕಾರ್ಯ ಪಡೆ ತಂಡದವರು ಮೀರತ್‌ನಲ್ಲಿ ನಡೆಸಿದರೆಂದು ಎಎನ್‌ಐ ವರದಿಮಾಡಿದೆ.
ಯುಪಿ ಎಸ್‌ಟಿಎಫ್ ನಿಂದ ಬಂಧಿತರಾಗಿರುವವರಿಂದ ಭಾರೀ ಸಂಖ್ಯೆಯ ಮೊಬೈಲ್ ಫೋನ್‌ಗಳು, ನಗದು ಮತ್ತು ಇಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಇತರ ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉತ್ತರ ಪ್ರದೇಶ ಪೊಲೀಸರು ನಿನ್ನೆ ಸೋಮವಾರ ಅಲಹಾಬಾದ್‌ನಲ್ಲಿ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ವೇಳೆ ಅನುಚಿತ ಮತ್ತು ಕಾನೂನು ಬಾಹಿರ ರೀತಿಗಳನ್ನು ಅನುಸರಿಸಿದ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದರು.
ಈ ಮೂವರು ಬಂಧಿತರಿದಂದ ಎಸ್‌ಟಿಎಫ್ 4 ಲಕ್ಷ ನಗದು ಮತ್ತು 12 ಗುರುತು ಪತ್ರಗಳನ್ನು ವಶಪಡಿಸಿಕೊಂಡಿತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇದೇ ವಿಷಯಕ್ಕೆ ಸಂಬಂಧಿಸಿ ಗೋರಖ್‌ಪುರ ದಲ್ಲೂ ಎಸ್‌ಟಿಎಫ್ ನವರು ಇನ್ನೂ ಕೆಲವರನ್ನು ಬಂಧಿಸಿರುವುದಾಗಿ ವರದಿಗಳು ತಿಳಿಸಿವೆ.
ಉತ್ತರ ಪ್ರದೇಶದಲ್ಲಿ ಖಾಲಿ ಇರುವ 41,520 ಕಾನ್ ಸ್ಟೆಬಲ್ ಹುದ್ದೆಗಳಿಗೆ 56 ಜಿಲ್ಲೆಗಳಲ್ಲಿನ 860 ಕೇಂದ್ರಗಳಲ್ಲಿ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಗಳು ನಡೆಯುತ್ತಿವೆ. ಸುಮಾರು 23 ಲಕ್ಷ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ.