Advertisement

ಮಾವನ ಕ್ಷೇತ್ರದಲ್ಲಿ ಸೊಸೆಗೆ ಭಾರಿ ಗೆಲುವು; ಮೈನ್‌ಪುರಿಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲು

07:42 PM Dec 08, 2022 | Team Udayavani |

ಮೈನ್ ಪುರಿ : ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರ,ರಾಂಪುರ ಮತ್ತು ಖತೌಲಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಪ್ರಕಟವಾಗಿದ್ದು,ಮೈನ್‌ಪುರಿ ಲೋಕಸಭಾ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಡಿಂಪಲ್ ಯಾದವ್ ಅವರು ಬಿಜೆಪಿ ಅಭ್ಯರ್ಥಿ ರಘುರಾಜ್ ಸಿಂಗ್ ಶಾಕ್ಯಾ ಅವರನ್ನು 2,88,461 ಮತಗಳಿಂದ ಸೋಲಿಸುವ ಮೂಲಕ ಭರ್ಜರಿ ಜಯ ದಾಖಲಿಸಿದ್ದಾರೆ. ಇದೇ ವೇಳೆ ಬಿಜೆಪಿ ಅಭ್ಯರ್ಥಿ ಆಕಾಶ್ ಸಕ್ಸೇನಾ ಅವರು ಅಜಂ ಖಾನ್ ಭದ್ರಕೋಟೆ ರಾಂಪುರ ಸದರ್‌ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.

Advertisement

ಮುಲಾಯಂ ಸಿಂಗ್ ಯಾದವ್ ಅವರ ಹಿರಿಯ ಸೊಸೆ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ 6,18,120 ಮತಗಳನ್ನು ಪಡೆದರೆ, ಶಾಕ್ಯಾ 3,29,659 ಮತಗಳನ್ನು ಪಡೆದರು.

ಆಕಾಶ್ ಸಕ್ಸೇನಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಎಸ್‌ಪಿ ಅಭ್ಯರ್ಥಿ ಅಸೀಮ್ ರಾಜಾ ಅವರನ್ನು 33,702 ಮತಗಳ ಅಂತರದಿಂದ ಮೊದಲ ಬಾರಿಗೆ ಸೋಲಿಸಿದ್ದಾರೆ.

ಖತೌಲಿ ವಿಧಾನಸಭಾ ಉಪಚುನಾವಣೆಯಲ್ಲಿ ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟದ ಮದನ್ ಭಯ್ಯಾ 22,054 ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರು ಬಿಜೆಪಿ ಅಭ್ಯರ್ಥಿ ರಾಜಕುಮಾರಿ ಸೈನಿ ಅವರನ್ನು ಸೋಲಿಸಿದರು. ಮದನ್ 97,139 ಮತಗಳನ್ನು ಪಡೆದರೆ, ಸೈನಿ 74,996 ಮತಗಳನ್ನು ಗಳಿಸಿದರು. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ), ಅದರ ಮಿತ್ರಪಕ್ಷ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ನಡುವೆ ನೇರ ಹಣಾಹಣಿ ನಡೆದಿದೆ.

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ವಿಧಿವಶರಾದುದರಿಂದ ಉಪಚುನಾವಣೆ ಅಗತ್ಯವಾಗಿದ್ದ ಮೈನ್‌ಪುರಿ ಕ್ಷೇತ್ರದಲ್ಲಿ ಹೆಚ್ಚಿನ ಪೈಪೋಟಿ ಏರ್ಪಟ್ಟಿತ್ತು. ಹಿರಿಯ ಎಸ್‌ಪಿ ನಾಯಕ ಅಜಂ ಖಾನ್ ಅನರ್ಹತೆಯಿಂದಾಗಿ ರಾಂಪುರ ಸದರ್ ಸ್ಥಾನ ತೆರವಾಗಿತ್ತು. ಖತೌಲಿಯಲ್ಲಿ ಬಿಜೆಪಿಯ ವಿಕ್ರಮ್ ಸಿಂಗ್ ಸೈನಿ ಅವರನ್ನು 2013 ರ ಗಲಭೆ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಿದ ನಂತರ ವಿಧಾನಸಭೆಯಿಂದ ಅನರ್ಹಗೊಳಿಸಿದ್ದರಿಂದ ಉಪಚುನಾವಣೆ ಅಗತ್ಯವಾಗಿತ್ತು.

Advertisement

ಗುಜರಾತ್‌ನಲ್ಲಿ ಖಾತೆ ತೆರೆದ ಎಸ್‌ಪಿ

ಗುಜರಾತ್‌ನಲ್ಲಿ ಮೊದಲ ಬಾರಿಗೆ ಸಮಾಜವಾದಿ ಪಕ್ಷ ಖಾತೆ ತೆರೆದಿದೆ. ಮಹಾತ್ಮ ಗಾಂಧಿ ಅವರ ಹುಟ್ಟೂರು ಪೋರಬಂದರ್‌ ಜಿಲ್ಲೆಯ ಕುಟಿಯಾನ ಕ್ಷೇತ್ರದಲ್ಲಿ ಎಸ್‌ಪಿಯಿಂದ ಸ್ಪರ್ಧಿಸಿದ್ದ ಕಂಧಲ್‌ಭಾಯ್‌ ಜಡೇಜ ಜಯಗಳಿಸಿದ್ದಾರೆ.

ಮುಖ್ಯವಾಗಿ ಇವರು ಈ ಪ್ರದೇಶದ ಮಾಫಿಯಾ ರಾಣಿ ಸಂತೋಕ್‌ ಬೆನ್‌ ಜಡೇಜ ಅವರ ಪುತ್ರರಾಗಿದ್ದಾರೆ. ಸಮೀಪದ ಸ್ಪರ್ಧಿ ಬಿಜೆಪಿಯ ಧೆಲೆಬೆನ್‌ ಒಡೆದರಾ ಅವರನ್ನು 26,702 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿದ್ದಾರೆ.

ಈ ಹಿಂದೆ ಎರಡು ಬಾರಿ ಎನ್‌ಸಿಪಿಯಿಂದ ಗೆದ್ದಿದ್ದ ಇವರಿಗೆ, ಈ ಬಾರಿ ಪಕ್ಷ ಟಿಕೆಟ್‌ ನಿರಾಕರಿಸಿತ್ತು. ನಂತರ ಇವರಿಗೆ ಸಮಾಜವಾದಿ ಪಕ್ಷ ಟಿಕೆಟ್‌ ನೀಡಿತು. ಇವರು ಮಾರ್‌ ಸಮುದಾಯದವರಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next