ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ಜಿಲ್ಲೆ ಗೋರಖ್ ಪುರದಲ್ಲಿ ಮಂಗಳವಾರ(ಸೆಪ್ಟೆಂಬರ್ 29) ತಡರಾತ್ರಿ ಹೋಟೆಲ್ ವೊಂದರ ಮೇಲೆ ದಾಳಿ ನಡೆಸಿದ್ದ ವೇಳೆ ಉದ್ಯಮಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣ; ದೀಪಕ್ ರಾವ್ ಕೊಲೆ ಆರೋಪಿಯ ಬಂಧನ
ಪೊಲೀಸರ ಚಿತ್ರಹಿಂಸೆಯಿಂದ ಉದ್ಯಮಿ ಸಾವನ್ನಪ್ಪಿರುವುದಾಗಿ ಕುಟುಂಬ ಸದಸ್ಯರು ಆರೋಪಿಸಿದ್ದು, ಏತನ್ಮಧ್ಯೆ ಪೊಲೀಸರು ತಮ್ಮ ತಪ್ಪನ್ನು ಮುಚ್ಚಿಹಾಕಲು ಇದೊಂದು ಆಕಸ್ಮಿಕ ಘಟನೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಹೋಟೆಲ್ ಕೋಣೆಯ ಮೇಲಿಂದ ಕೆಳಕ್ಕೆ ಬಿದ್ದ ಪರಿಣಾಮ ಉದ್ಯಮಿ ಸಾವು ಸಂಭವಿಸಿದೆ ಎಂಬುದು ಪೊಲೀಸರ ವಾದವಾಗಿದೆ. ಉದ್ಯಮಿ ಉತ್ತರಪ್ರದೇಶ ಕಾನ್ಪುರದ ಮನೀಶ್ ಕುಮಾರ್ ಗುಪ್ತಾ ಎಂದು ಗುರುತಿಸಲಾಗಿದೆ.
ಘಟನೆ ವಿವರ: ನಾವು ಮೂವರು ಕೋಣೆಯಲ್ಲಿ ನಿದ್ದೆ ಮಾಡುತ್ತಿದ್ದ ವೇಳೆ ಮಧ್ಯರಾತ್ರಿ 12.30ರ ಸುಮಾರಿಗೆ ಕೋಣೆಯ ಬೆಲ್ ಶಬ್ದ ಕೇಳಿ, ಬಾಗಿಲು ತೆರೆದಾಗ 6-7 ಮಂದಿ ಪೊಲೀಸರು, ರಿಸೆಪ್ಶನ್ ಹುಡುಗ ನಿಂತಿದ್ದ. ಪೊಲೀಸರು ಕೋಣೆಯೊಳಗೆ ಬಂದು, ಗುರುತು ಪತ್ರ ಕೇಳಿದ್ದರು. ನಾನು ಗುರುತು ಪತ್ರ ತೋರಿಸಿದ್ದೆ. ಈ ಗಲಾಟೆ ಕೇಳಿ, ಮನೀಶ್ ಗುಪ್ತಾ ಎದ್ದು ಬಂದಿದ್ದರು. ಆಗ ಗುಪ್ತಾ ಅವರು ಪೊಲೀಸರ ಬಳಿ ಯಾಕೆ ಮಧ್ಯರಾತ್ರಿ ತೊಂದರೆ ಕೊಡುತ್ತಿದ್ದೀರಿ ಎಂದು ಪ್ರಶ್ನಿಸಿರುವುದಾಗಿ ಹರ್ವೀರ್ ಸಿಂಗ್ ಎಂಬಾತ ಸುದ್ದಿಗಾರರಿಗೆ ತಿಳಿಸಿದ್ದಾನೆ.
ಪೊಲೀಸರು ಈ ಸಂದರ್ಭದಲ್ಲಿ ಪಾನಮತ್ತರಾಗಿದ್ದು, ಕೋಪದಲ್ಲಿ ನಾನು ಪೊಲೀಸ್ ಗೆ ಹೊಡೆದುಬಿಟ್ಟಿದ್ದೆ. ಕೆಲವರ ಬಳಿ ಗನ್ ಕೂಡಾ ಇತ್ತು. ನನ್ನನ್ನು ಹೊರಗೆ ಒಯ್ದು ಹೊಡೆಯುತ್ತಿದ್ದಾಗ, ಮನೀಶ್ ಗುಪ್ತಾ ಅವರನ್ನು ಪೊಲೀಸರು ಎಳೆದೊಯ್ಯುತ್ತಿದ್ದು, ಅವರ ಮುಖ, ದೇಹದಿಂದ ರಕ್ತ ಒಸರುತ್ತಿತ್ತು ಎಂದು ಹರ್ವೀರ್ ಸಿಂಗ್ ವಿವರಿಸಿರುವುದಾಗಿ ವರದಿ ತಿಳಿಸಿದೆ.