Advertisement

ಗ್ರಾಮಗಳಲ್ಲಿ ಉರಿಯದ ಸೋಲಾರ್‌ ದೀಪಗಳು

11:05 PM Feb 05, 2020 | Sriram |

ಗ್ರಾಮಾಂತರ ಪ್ರದೇಶಗಳಲ್ಲಿ ಸೋಲಾರ್‌ ದೀಪಗಳನ್ನು ಅಳವಡಿಸಿದ್ದೇನೋ ಸರಿ. ಆದರೆ ನಿರ್ವಹಣೆ ಕಾಣದೆ ಇವುಗಳು ಪ್ರಯೋಜನಕ್ಕೆ ಇಲ್ಲದಂತಾಗಿದೆ. ಇದರಿಂದ ಯೋಜನೆಯ ಮೂಲ ಆಶಯಕ್ಕೇ ಧಕ್ಕೆಯಾದಂತಾಗಿದೆ.

Advertisement

ಬೆಳ್ಮಣ್‌‌: ತಾಲೂಕಿನ ವಿವಿಧ ಗ್ರಾ. ಪಂ.ಗಳಲ್ಲಿ ತಾ. ಪಂಚಾಯತ್‌ ವತಿಯಿಂದ ಅಳವಡಿಸಿದ ಸೋಲಾರ್‌ ಬೀದಿ ದೀಪಗಳಲ್ಲಿ ಬಹುತೇಕ ಉರಿಯುತ್ತಿಲ್ಲ. ಎರಡು ವರ್ಷಗಳಿಗೆ ನಿರ್ವಹಣೆ ಗುತ್ತಿಗೆ ಪಡೆದವರು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ.

ಪರಿಸರ ಸ್ನೇಹಿ
ಪರಿಸರಸ್ನೇಹಿ, ಪುನರುತ್ಪಾದಿತ ಇಂಧನಗಳ ಬಳಕೆಗಾಗಿ ಪ್ರೋತ್ಸಾಹ ನೀಡಲು ಸೋಲಾರ್‌ ಬೀದಿ ದೀಪಗಳನ್ನು ಬಳಸಲಾಗುತ್ತಿದೆ. ಗ್ರಾ.ಪಂ.ಗಳು ಬೀದಿ ದೀಪಗಳನ್ನು ತಮ್ಮ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳುತ್ತವೆ. ಜತೆಗೆ ತಾ.ಪಂ.ಕೂಡ ತನ್ನ ನಿಧಿಯಿಂದ ಕಳೆದ ಮೂರು ವರ್ಷಗಳಿಂದ ಎಲ್‌ಇಡಿ ಸೋಲಾರ್‌ ಬೀದಿ ದೀಪಗಳನ್ನು ವಿವಿಧ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಅಳವಡಿಸುತ್ತಿದೆ.

ಕಬ್ಬಿಣದ ಕಂಬ ಮಾತ್ರ ಇದೆ
ಕಾರ್ಕಳ ತಾಲೂಕಿನ ಎಲ್ಲ ಗ್ರಾ. ಪಂ. ವ್ಯಾಪ್ತಿಗಳಲ್ಲಿ ಪ.ಜಾತಿ, ಪಂಗಡದ ಕಾಲನಿಗಳಿಗೆ ಹಾಗೂ ಸಾರ್ವಜನಿಕ ಪ್ರದೇಶಗಳಿಗೆ ಅಳವಡಿಸಲಾದ ಸೋಲಾರ್‌ ದೀಪಗಳ ಪೈಕಿ
ಕೆಲವೊಂದು ಉರಿದು ಬೆಳಕು ನೀಡಿದರೆ ಇನ್ನೂ ಹಲವು ಬ್ಯಾಟರಿ ಸಮಸ್ಯೆ ಸಹಿತ ಇತರ ಕಾರಣಗ‌ಳಿಂದ‌ ಕೆಟ್ಟಿವೆ ಕೆಲವು ಕಡೆಗಳಲ್ಲಿ ಬ್ಯಾಟರಿ ಕಳವು ನಡೆದಿದ್ದು ಬರೀ ದೀಪ ಅಳವಡಿಸಲು ಹಾಕಿದ ಕಬ್ಬಿಣದ ಕಂಬ ಮಾತ್ರ ಇದೆ.

ನಿರ್ವಹಣೆ ಕೊರತೆ
ಪ.ಜಾತಿ, ಹಾಗೂ ಪಂಗಡದ ಕಾಲನಿಗೆ ವಿವಿಧ ಇಲಾಖೆಯ ಅನುದಾನದಿಂದ ಅಳವಡಿಸಿದ ದೀಪಗಳು ಸರಿಯಾದ ನಿರ್ವಹಣೆ ಕೊರತೆಯಿಂದ ಕೆಲವೊಂದು ದೀಪ
ಗಳು ಬೆಳಕು ನೀಡುತ್ತಿಲ್ಲವಾದರೆ ತಾ.ಪಂ. ಅನುದಾನ , ಸುವರ್ಣ ಗ್ರಾಮ ಯೋಜನೆ ಸಹಿತ ವಿವಿಧ ಮೂಲ ಗಳಿಂದ ಅಳವಡಿಸಲಾದ ದೀಪಗಳು ಒಂದು ವರ್ಷ ಕಳೆಯುವುದರೊಳಗೆ ಬೆಳಕು ನೀಡುವುದನ್ನು ನಿಲ್ಲಿಸಿವೆ.

Advertisement

ನಿರ್ಲಕ್ಷé ಆರೋಪ
ಸೋಲಾರ್‌ ದೀಪ ಅಳವಡಿಸುವ ಗುತ್ತಿಗೆ ಪಡೆದವರಿಗೆ 1ರಿಂದ 2 ವರ್ಷದ ನಿರ್ವಹಣೆಯ ಒಡಂಬಡಿಕೆಗಳಿದ್ದರೂ ಹಲವೆಡೆ ಇದನ್ನು ಪಾಲಿಸದೆ ಅನ್ಯಾಯ ಎಸಗಲಾಗುತ್ತಿ¤ದೆ ಎಂಬ ಆರೋಪ ಕೇಳಿಬಂದಿದೆ.

ಸೋಲಾರ್‌ ದೀಪಗಳ ಅಳವಡಿಕೆ-ನಿರ್ವಹಣೆಗೆ ಗುತ್ತಿಗೆ ವಹಿಸಿಕೊಂಡವರು ಕೂಡಲೇ ಗ್ರಾಮಾಂತರ ಪ್ರದೇಶದ ದೀಪಗಳನ್ನು ಸರಿಪಡಿಸಿ ಜನಸಾಮಾನ್ಯರ ಸಮಸ್ಯೆಗೆ ಮುಕ್ತಿ ಒದಗಿಸಬೇಕಿದೆ.

ಬದಲಾದ ವಿನ್ಯಾಸ
ಕೆಲವು ವರ್ಷಗಳ ಮೊದಲು ಅಳವಡಿಸುತ್ತಿದ್ದ ಬೀದಿದೀಪಗಳಲ್ಲಿ ಬ್ಯಾಟರಿ ಕಳವು ದೊಡ್ಡ ಸಮಸ್ಯೆಯಾಗಿತ್ತು. ರಾತೋರಾತ್ರಿ ಕಳ್ಳರು ಬೀದಿದೀಪಗಳ ಬ್ಯಾಟರಿಗಳನ್ನು ಸಾರಾಸಗಟಾಗಿ ಕದಿಯುತ್ತಿದ್ದರು. ಪೊಲೀಸ್‌ ಠಾಣೆಗಳಲ್ಲೂ ಪ್ರಕರಣ ದಾಖಲಾಗಿತ್ತು. ಆದರೆ ಈಗ ವಿನ್ಯಾಸ ಬದಲಾಗಿದ್ದು ಬ್ಯಾಟರಿಯನ್ನು ಪ್ಯಾನೆಲ್‌ನ ಅಡಿಭಾಗದಲ್ಲಿ ಅಳವಡಿಸಿ ಸುಲಭದಲ್ಲಿ ಕೈಗೆ ಎಟುಕದಂತೆ ಇರಿಸಲಾಗುತ್ತಿದೆ.

ಪಂಚಾಯತ್‌ನಿಂದ ನಿರ್ವಹಣೆ
ತಾ.ಪಂ. ಸಹಿತ ವಿವಿಧ ಅನುದಾನಗಳಿಂದ ಅಳವಡಿಸುವ ಸೋಲಾರ್‌ ದೀಪಗಳ ನಿರ್ವಹಣೆ ಎರಡು ವರ್ಷ ಗುತ್ತಿಗೆ ಪಡೆದ ಸಂಸ್ಥೆಯದ್ದಾಗಿರುತ್ತದೆ. ಆದರೆ ಬಳಿಕ ಸೋಲಾರ್‌ ದೀಪಗಳ ನಿರ್ವಹಣೆ ಪಂಚಾಯತ್‌ ಅನುದಾನದಲ್ಲೇ ನಿರ್ವಹಿಸಬೇಕಾಗಿದೆ. ಇದೀಗ ಕಾರ್ಕಳ ತಾಲೂಕಿನಾದ್ಯಂತ ಪ್ರತಿ ಗ್ರಾ. ಪಂ. ವ್ಯಾಪ್ತಿಯಲ್ಲಿ 5ರಿಂದ 10 ದಾರಿ ದೀಪಗಳು ಕೆಟ್ಟುಹೋಗಿವೆ. ಕೆಟ್ಟುಹೋಗಿರುವ ಸೋಲಾರ್‌ ದಾರಿದೀಪಗಳ ನಿರ್ವಹಣೆಯಾಗಬೇಕಾಗಿರುವುದರ ಜತೆಗೆ ಬ್ಯಾಟರಿ ಕಳವು ಪ್ರಕರಣಗಳಿಗೂ ಕಡಿವಾಣ ಹಾಕಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಿರಂತರ ಬ್ಯಾಟರಿ ಕಳವು
ಸೋಲಾರ್‌ ದೀಪ ಅಳವಡಿಸಿ ಒಂದು ತಿಂಗಳು ಚೆನ್ನಾಗಿ ಉರಿದರೆ ಕಿಡಿಗೇಡಿಗಳು ಅದರ ಬ್ಯಾಟರಿ ಕಳವು ಮಾಡುವುದು ಬಹುತೇಕ ಗ್ರಾ. ಪಂ. ವ್ಯಾಪ್ತಿಯಲ್ಲಿ ಮಾಮೂಲಾಗಿದೆ. ಆದರೆ ನಿರ್ವಹಣೆಯನ್ನು ಮಾಡುವವರು ಮತ್ತೆ ಬ್ಯಾಟರಿ ತಂದು ಹಾಕಿದರೂ ಅದು ಉಳಿಯುವ ಸಾಧ್ಯತೆ ಬಹುತೇಕ ಕಡಿಮೆ. ಕೆಲವು ಕಡೆ ಬ್ಯಾಟರಿ ಸಹಿತ ಸೋಲಾರ್‌ ದೀಪವನ್ನು ಕದ್ದ ನಿದರ್ಶನಗಳಿವೆ.

ಎರಡು ವರ್ಷದ ನಿರ್ವಹಣೆ
ಸೋಲಾರ್‌ ಅಳವಡಿಸಿದ ಗುತ್ತಿಗೆದಾರರಿಗೆ 2 ವರ್ಷದ ನಿರ್ವಹಣೆ ಇರುತ್ತದೆ. ಆ ಬಳಿಕ ಆಯಾ ಪಂಚಾಯತ್‌ಗಳೇ ಸೋಲಾರ್‌ ದೀಪ ನಿರ್ವಹಣೆ ಮಾಡಲಾಗುತ್ತದೆ. ನಮ್ಮ ಪಂಚಾಯತ್‌ ವ್ಯಾಪ್ತಿಯಲ್ಲೂ ಕೆಟ್ಟು ಹೋಗಿರುವ ದೀಪಗಳನ್ನು ಶೀಘ್ರ ರಿಪೇರಿ ಮಾಡಲಾಗುವುದು.
– ಶಂಕರ್‌, ಪಳ್ಳಿ ಗ್ರಾ.ಪಂ. ಅಭಿವೃದ್ದಿ ಅಧಿ ಕಾರಿ

ಬಾಳ್ವಿಕೆ ಇರದ ಬ್ಯಾಟರಿ
ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ಸೋಲಾರ್‌ ದೀಪಗಳ ಬ್ಯಾಟರಿ ಕಳವಾಗಿತ್ತು . ಬಳಿಕ ನಿರ್ವಹಣೆ ಮಾಡಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಬ್ಯಾಟರಿಗಳ ಬಾಳ್ವಿಕೆ ಇಲ್ಲದೆ ದೀಪಗಳು ಉರಿಯುತ್ತಿಲ್ಲ.
– ಕುಶಾ ಆರ್‌. ಮೂಲ್ಯ, ಇನ್ನ ಗ್ರಾ.ಪಂ. ಉಪಾಧ್ಯಕ್ಷ

ತುಕ್ಕು ಹಿಡಿದ ಸೋಲಾರ್‌ ದೀಪ
ಅಳವಡಿಸಲಾದ ಸೋಲಾರ್‌ ದೀಪಗಳಲ್ಲಿ ಕೆಲವು ದಿನಗಳಲ್ಲಿ ಅದು ಕೆಟ್ಟು ಹೋಗುತ್ತದೆ. ಮತ್ತೆ ಅದರ ರಿಪೇರಿಯೇ ಮಾಡುವುದಿಲ್ಲ. ಕೆಲವೊಂದು ಕಡೆಯಲ್ಲಿ ಸಂಪೂರ್ಣ ತುಕ್ಕು ಹಿಡಿದಿವೆ.
-ರಾಬರ್ಟ್‌,ಬೋಳ

ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next