Advertisement
ಕೆಲವು ದಿನಗಳ ಹಿಂದಷ್ಟೇ ಜಿಲ್ಲೆಯ ಮಾಲೂರು ತಾಲೂಕಿನ ಚನ್ನಕಲ್ಲು ಗ್ರಾಮದಲ್ಲಿ ದಲಿತರಿಗೆ ದೇವಾಲಯ ಪ್ರವೇಶವಿಲ್ಲ, ರಸ್ತೆ ಇಲ್ಲ, ನೀರಿಲ್ಲ ಇತ್ಯಾದಿ ಆರೋಪಗಳೊಂದಿಗೆ ಅಸ್ಪೃಶ್ಯತೆಯ ರೂಪವೊಂದು ಹೊರಬಿದ್ದಿದ್ದು, ಇದಕ್ಕೆ ತಾಜಾ ಉದಾಹರಣೆಯಷ್ಟೇ. ಅಸ್ಪೃಶ್ಯತೆ ಆಚರಣೆಯ ಘಟನೆ ಹೊರ ಬೀಳುತ್ತಿದ್ದಂತೆಯೇ ಅಧಿಕಾರಿಗಳ ದಂಡು ಗ್ರಾಮಕ್ಕೆ ಧಾವಿಸಿ ಬಂದು ಗ್ರಾಮದಲ್ಲಿ ಕೆಲವರ ನಡುವಿನ ಮನಸ್ತಾಪಗಳಿಗೆ ಅಸ್ಪೃಶ್ಯತೆಯ ಲೇಪ ನೀಡಲಾಗಿದೆ. ಅಸ್ಪೃಶ್ಯತೆ ಆಚರಣೆ ಇಲ್ಲವೇ ಇಲ್ಲ ಎನ್ನುವ ಹೇಳಿಕೆ ನೀಡಿ ಪ್ರಕರಣಕ್ಕೆ ಇತಿಶ್ರೀ ಹಾಕಲಾಯಿತು.
Related Articles
Advertisement
ಹಲವಾರು ಗ್ರಾಮಗಳಲ್ಲಿ ಸಹ ಭೋಜನ ಕಾರ್ಯಕ್ರಮವನ್ನು ಆಯೋಜಿಸಿ ಸಕಲ ಜಾತಿ ಜನಾಂಗದವನ್ನು ಒಟ್ಟಿಗೆ ಕೂರಿಸಿ ಊಟ ಮಾಡಿಸುವ ಕೆಲಸವನ್ನು ಹಮ್ಮಿಕೊಂಡಿದ್ದಾರೆ. ಕೇವಲ ಕೋಲಾರ ಜಿಲ್ಲೆ ಮಾತ್ರವಲ್ಲದೆ ಕೋಲಾರ ಜಿಲ್ಲೆಗೆ ಅಂಟಿಕೊಂಡಿರುವ ಆಂಧ್ರಪ್ರದೇಶದ ಚಿತ್ತೂರು ಹಾಗೂ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿಯೂ ಗೃಹಪ್ರವೇಶ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮವನ್ನು ಅರಿವು ಶಿವಪ್ಪ ತಂಡದವರು ವಿಸ್ತರಿಸಿದ್ದಾರೆ. ಇಷ್ಟೆಲ್ಲಾ ಪ್ರಯತ್ನಗಳ ನಂತರವೂ ಅಸ್ಪೃಶ್ಯತೆ ನಿವಾರಣೆಯಾಗಿದೆಯಾ ಎನ್ನುವ ಪ್ರಶ್ನೆಗೆ ಅರಿವು ಶಿವಪ್ಪ, ಶೇ.99 ರಷ್ಟು ಅಸ್ಪೃಶ್ಯತೆ ಇಂದಿಗೂ ವಿವಿಧ ಆಯಾಮಗಳಲ್ಲಿ ಹಾಗೆಯೇ ಉಳಿದುಕೊಂಡಿದೆಯೆಂದು ತಮ್ಮ ವಾಸ್ತವಿಕ ಅನುಭವಗಳ ಮೂಲಕ ಅವರು ವಿವರಿಸುತ್ತಾರೆ.
ಮನೆಗಳಿಗೆ ಪ್ರವೇಶವಿಲ್ಲ: ಸ್ವಾತಂತ್ರ್ಯ ನಂತರ ದಲಿತರು ವಿವಿಧ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸರಕಾರಿ ಕೆಲಸಗಳಲ್ಲಿ ತೊಡಗಿದ್ದರೂ ಆಯಾ ಗ್ರಾಮಗಳಲ್ಲಿ ಅವರು ಇಂದಿಗೂ ಅಸ್ಪೃಶ್ಯರಾಗಿಯೇ ಉಳಿದಿದ್ದಾರೆ. ಏಕೆಂದರೆ, ಪೂರ್ವಿಕರಂತೆಯೇ ದಲಿತರು ಸವರ್ಣೀಯರೊಂದಿಗೆ ಮುಕ್ತವಾಗಿ ಬೆರೆಯುತ್ತಿಲ್ಲ. ಅವರ ಮನೆಯನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.
ದೇವಾಲಯ ಪ್ರವೇಶವಿಲ್ಲ: ಜಿಲ್ಲೆಯೊಂದರಲ್ಲಿಯೇ ಸಾವಿರಾರು ದೇವಾಲಯಗಳಿವೆ. ಈ ದೇವಾಲಯಗಳ ಪೈಕಿ 1300 ದೇವಾಲಯಗಳು ಮುಜರಾಯಿ ಧಾರ್ಮಿಕ ದತ್ತಿ ಇಲಾಖೆಗೆ ಸೇರುತ್ತದೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿರುವ ಇಂತ 1000 ದೇವಾಲಯಗಳಲ್ಲಿ ಇಂದಿಗೂ ದಲಿತರು ಪ್ರವೇಶ ಮಾಡುತ್ತಿಲ್ಲ. ದೇವಾಲಯದ ಮಹಾದ್ವಾರ ದಾಟಿ ಹೋಗಲು ದಲಿತರಿಗೆ ಇಂದಿಗೂ ಸಾಧ್ಯವಾಗಿಲ್ಲ. ಇದನ್ನು ತಾವು ಯಾವುದೇ ಗ್ರಾಮದಲ್ಲಿ ಸಾಬೀತುಪಡಿಸಲು ಸಿದ್ಧವೆನ್ನುತ್ತಾರೆ ಅರಿವು ಶಿವಪ್ಪ.
ಅಸ್ಪೃಶ್ಯತೆ ಬಗ್ಗೆ ಧ್ವನಿ ಎತ್ತುತ್ತಿಲ್ಲವೇಕೆ: ಬಹುತೇಕ ದಲಿತ ಮುಖಂಡರು ಹಿಂದಿನಂತೆ ಗ್ರಾಮಗಳಲ್ಲಿ ವಾಸವಾಗಿಲ್ಲ. ಅಸ್ಪೃಶ್ಯತೆಯ ಭೀಕರತೆ ಅವರಿಗೆ ಈಗ ನಿತ್ಯವೂ ಢಾಳಾಗಿ ಕಾಣಿಸುತ್ತಿಲ್ಲ. ಗ್ರಾಮಗಳಲ್ಲಿ ವಾಸವಾಗಿರುವ ದಲಿತರು ಈ ವ್ಯವಸ್ಥೆಗೆ ಹೊಂದಿಕೊಂಡು ಬಿಟ್ಟಿದ್ದಾರೆ. ಇದನ್ನು ಮೀರುವ ಪ್ರಯತ್ನವನ್ನು ಅವರು ಮಾಡುತ್ತಿಲ್ಲ. ಅಸ್ಪೃಶ್ಯತೆ ಇಲ್ಲವೇ ಎಂದು ವಾದಿಸುವ ಬದಲು ವಾಸ್ತವಾಂಶವನ್ನು ಅರ್ಥಮಾಡಿಕೊಂಡು ಸಮ ಸಮಾಜಕ್ಕೆ ಶ್ರಮಿಸಬೇಕಾಗಿರುವುದು ಪ್ರತಿಯೊಬ್ಬರು ಆಂದೋಲನ ರೂಪದಲ್ಲಿ ಮನಸ್ಸು ಮಾಡಿದರಷ್ಟೇ ಬದಲಾವಣೆ ಸಾಧ್ಯ ಎಂದು ಅರಿವು ಶಿವಪ್ಪ ಅಭಿಪ್ರಾಯಪಡುತ್ತಾರೆ.
ಗಣರಾಜ್ಯೋತ್ಸವ ಸಹ ಭೋಜನ
ಗೃಹ ಪ್ರವೇಶ ಸಮಿತಿಯು 70 ನೇ ಗಣರಾಜ್ಯೋತ್ಸವವನ್ನು ವಿಭಿನ್ನವಾದ ಕಾರ್ಯಕ್ರಮದ ಮೂಲಕ ಆಚರಿಸಲು ಸಿದ್ಧತೆ ನಡೆಸಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪುಲಗೂರಕೋಟೆ ಸಮೀಪದ ಪಿ.ಚನ್ನಯ್ಯವಾರಿಪಲ್ಲಿಯಲ್ಲಿ ಗಣರಾಜ್ಯೋತ್ಸವದ ಸಹ ಭೋಜನ ಕಾರ್ಯಕ್ರಮವನ್ನು ಸ್ಪೀಕರ್ ರಮೇಶ್‌ಕುಮಾರ್ ನೇತೃತ್ವದಲ್ಲಿಯೇ ಹಮ್ಮಿಕೊಂಡಿದೆ.
ಪರಿಸ್ಥಿತಿ ಬದಲಾಗಿದ್ದೆಲ್ಲಿಅಸ್ಪೃಶ್ಯತೆಯ ಆಚರಣೆ ನಗರ ಮತ್ತು ಪಟ್ಟಣ ಪ್ರದೇಶದ ದೇವಾಲಯಗಳನ್ನು ಅಷ್ಟಾಗಿ ಬಾಧಿಸುತ್ತಿಲ್ಲ. ನಗರ, ಪಟ್ಟಣ ಪ್ರದೇಶಗಳಲ್ಲಿ ವಾಸವಾಗಿರುವ ಅಧಿಕಾರಿ, ರಾಜಕಾರಣಿ ದಲಿತರು ಬೇರೆ ಯಾವುದೋ ಗ್ರಾಮಕ್ಕೆ ತೆರಳಿದಾಗ ಅಲ್ಲಿನ ಸವರ್ಣೀಯರು ದೇವಾಲಯ ಮತ್ತು ಮನೆಗಳಿಗೆ ಪ್ರವೇಶ ನೀಡುತ್ತಿದ್ದಾರೆ. ಇದಕ್ಕೆ ಆ ದಲಿತರ ಸ್ಥಾನಮಾನಗಳೇ ಕಾರಣವಾಗುತ್ತದೆ. ಆದರೆ, ಅದೇ ಗ್ರಾಮದ ದಲಿತರು ಎಷ್ಟೇ ಸ್ಥಾನಮಾನ ಹೊಂದಿದ್ದರೂ ದೇಶ ಸ್ವಾತಂತ್ರ್ಯವಾಗಿ ಏಳು ದಶಕಗಳು ಕಳೆದರೂ ತಮ್ಮದೇ ಗ್ರಾಮದ ದೇವಾಲಯಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಕೆ.ಎಸ್.ಗಣೇಶ್