Advertisement

ಸೂಕ್ತ ಸಮಯದಲ್ಲಿ ದೊರೆಯದ ಚಿಕಿತ್ಸೆ: ಬಾಣಂತಿ, ಅವಳಿ ಮಕ್ಕಳು ಬಲಿ

08:08 PM Nov 03, 2022 | Team Udayavani |

ತುಮಕೂರು: ಜಿಲ್ಲಾಸ್ಪತ್ರೆಯ ವೈದ್ಯರ ಎಡವಟ್ಟಿಗೆ ಬಾಣಂತಿ ಹಾಗೂ ಅವಳಿ ಮಕ್ಕಳು ಅಸುನೀಗಿದ ಹೃದಯವಿದ್ರಾವಕ ಘಟನೆ ಇಲ್ಲಿನ ಭಾರತಿನಗರದ ಅಭಯ ಆಂಜನೇಯಸ್ವಾಮಿ ದೇವಾಲಯದ ಬಳಿ ನಡೆದಿದೆ.

Advertisement

ಕಸ್ತೂರಿ (30) ಹಾಗೂ ಈಕೆಯ ಅವಳಿ ಗಂಡು ಮಕ್ಕಳು ಮೃತಪಟ್ಟಿದ್ದಾರೆ. ತಮಿಳುನಾಡು ಮೂಲದ ಕಸ್ತೂರಿ ಇಲ್ಲಿನ ಭಾರತಿನಗರದಲ್ಲಿ ಕಳೆದ 1 ತಿಂಗಳಿಂದ 6 ವರ್ಷದ ಮಗಳ ಜತೆ ವಾಸವಿದ್ದರು. ಮನೆಯಲ್ಲಿ ಕಡುಬಡತನವಿತ್ತು. ತುಂಬು ಗರ್ಭಿಣಿಯಾಗಿದ್ದ ಕಸ್ತೂರಿಗೆ ಹೆರಿಗೆ ನೋವಿನಿಂದ ಬಳಲುತ್ತಿದ್ದಳು. ಈಕೆಯ ಕಷ್ಟಕ್ಕೆ ಮರುಗಿದ ಸ್ಥಳೀಯರು ಸ್ವಲ್ಪ ಹಣ ಕೊಟ್ಟು ಆಟೋ ಮಾಡಿ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು.

ಪಕ್ಕದ ಮನೆಯ ಅಜ್ಜಿ ಜತೆಗೆ ಆಸ್ಪತ್ರೆಗೆ ಬಂದ ಕಸ್ತೂರಿಯನ್ನು ‘ತಾಯಿ ಕಾರ್ಡ್, ಆಧಾರ್ ಕಾರ್ಡ್’ ಇಲ್ಲ ಎಂದು ದಾಖಲಿಸಿಕೊಂಡಿಲ್ಲ ಎನ್ನಲಾಗಿದೆ. ವೈದ್ಯರ ಬಳಿ ಅಂಗಲಾಚಿ ಬೇಡಿದರೂ ಸ್ಪಂದಿಸಿಲ್ಲ. ‘ನಾವು ಚಿಕಿತ್ಸೆ ಕೊಡಲ್ಲ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದು ಕೊಡ್ತೀನಿ ಹೋಗಿ ಎಂದು ವೈದ್ಯೆಯೊಬ್ಬರು ಹೇಳಿದ್ದಾರೆ. ಅಲ್ಲಿಗೆ ಹೋಗಲು ಹಣ ಇಲ್ಲದೆ ಕಸ್ತೂರಿ ನೋವಿನಲ್ಲೇ ವಾಪಸ್ ಮನೆಗೆ ಹಿಂತಿರುಗಿದ್ದರು.

ರಾತ್ರಿಯಿಡೀ ಹೆರಿಗೆ ನೋವಿನಿಂದ ಬಳಲಿದ ಕಸ್ತೂರಿ ಬೆಳಗಿನ ಜಾವ ಜೋರಾಗಿ ಚೀರಾಡಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಹೋಗುವಷ್ಟರಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು, ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾಳೆ. ಅತ್ತ ಮಕ್ಕಳೂ ಮೃತಪಟ್ಟಿವೆ. ಹೆರಿಗೆಯಾದ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ತಾಯಿ ಮತ್ತು ಮಕ್ಕಳ ಮೃತದೇಹಗಳಿದ್ದ ದೃಶ್ಯ ನೋಡಿದರೆ ಎಂತಹವರ ಮನ ಕಲಕುವಂತಿತ್ತು.

ವ್ಯಾಪಕ ಆಕ್ರೋಶ

Advertisement

ಬಾಣಂತಿ ಮತ್ತು ಇಬ್ಬರು ಮಕ್ಕಳ ಸಾವಿಗೆ ತುಮಕೂರು ಜಿಲ್ಲಾಸ್ಪತ್ರೆ ವೈದ್ಯರೇ ಕಾರಣ. ಹೆರಿಗೆ ನೋವೆಂದು ಬಂದಾಗ ದಾಖಲಿಸಿಕೊಂಡಿದ್ದರೆ ತಾಯಿ ಮತ್ತು ಮಕ್ಕಳಿಬ್ಬರು ಬದುಕುತ್ತಿದ್ದರು. ವೈದ್ಯರ ನಿರ್ಲಕ್ಷ್ಯವೇ ಮೂವರ ಸಾವಿಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಗಳು ಮತ್ತು ವೈದ್ಯರು ಇರುವುದು ಜನರ ಜೀವ ಕಾಪಾಡಲು. ಆದರೆ ತುಮಕೂರು ಜಿಲ್ಲಾಸ್ಪತ್ರೆಯ ವೈದ್ಯರು ತಾಯಿ ಕಾರ್ಡ್ ಇಲ್ಲ ಎಂಬ ನೆಪವೊಡ್ಡಿ ಹೆರಿಗೆಗೆ ಬಂದ ಗರ್ಭಿಣಿ ಮಹಿಳೆಯನ್ನು ವಾಪಸ್ ಕಳುಹಿಸಿ ಆಕೆಯ ಸಾವಿಗೆ ಕಾರಣವಾಗಿದ್ದಾರೆ ಎಂದು ಸ್ಥಳೀಯ ಜನತೆ ಆರೋಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ 22ನೇ ವಾರ್ಡಿನ ಸದಸ್ಯ ಶ್ರೀನಿವಾಸ್,ಮೇಯರ್ ಪ್ರಭಾವತಿ,ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಸದಸ್ಯರಾದ ನಯಾಜ್ ಅಹಮದ್ ಅವರುಗಳು ಮೃತರು ವಾಸವಿದ್ದ ಭಾರತಿ ನಗರ ಪ್ರದೇಶಕ್ಕೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ ನಂತರ,ಜಿಲ್ಲಾಸ್ಪತ್ರೆಯ ಸರ್ಜನ್ ಹಾಗೂ ಡಿ.ಹೆಚ್.ಓ ಸ್ಥಳಕ್ಕೆ ಭೇಟಿ ನೀಡುವವರೆಗೂ ಮೃತದೇಹದ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ. ಜಿಲ್ಲಾಸ್ಪತ್ರೆ ಭ್ರಷ್ಟಾಚಾರದ ಕೂಪವಾಗಿದ್ದು, ಹೆರಿಗೆಗೆ ಬರುವ ಬಡವರ ಬಳಿ, ಅಸ್ಪತ್ರೆಯಲ್ಲಿ ಕೆಲಸ ಮಾಡುವ ಆಯಾಗಳ ಮೂಲಕ ವೈದ್ಯರು ಲಂಚಕ್ಕೆ ಬೇಡಿಕೆ ಇಡುವುದು ಸಾಮಾನ್ಯವಾಗಿದೆ. ಇಂದಿನ ಈ ದುರ್ಘಟನೆಗೂ ಲಂಚ ನೀಡದಿರುವುದೇ ಕಾರಣ ಎಂದು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಎಚ್.ವೀಣಾ,ಜನಪ್ರತಿನಿಧಿಗಳ ಆರೋಪವನ್ನು ಆಲಿಸಿದರು. ಈ ವೇಳೆ ಮಾತನಾಡಿದ ಅವರು,ತಾಯಿ ಕಾರ್ಡು ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನೀಡದೆ ನಿರ್ಲಕ್ಷ ಮಾಡಿದ ವೈದ್ಯರು ವಿರುದ್ದ ಕ್ರಮಕ್ಕೆ ಈಗಾಗಲೇ ಶಿಫಾರಸ್ಸು ಮಾಡಲಾಗಿದೆ.ಇನ್ನು ಮುಂದೆ ಜಿಲ್ಲಾಸ್ಪತ್ರೆಯಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ಸಾರ್ವಜನಿಕರಿಗೆ ಹಾಗೂ ಜನಪ್ರತಿನಿಧಿಗಳಿಗೆ ಭರವಸೆ ನೀಡಿದರು.

ತಾಯಿ, ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ದಾಖಲೆಗಳು ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸುವುದು ತಪ್ಪು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದೇನೆ.ದಾಖಲೆಗಾಗಿ ಚಿಕಿತ್ಸೆ ನಿರಾಕರಿಸದಂತೆ ಎಲ್ಲಾ ವೈದ್ಯರುಗಳಿಗೂ ಸೂಚನೆ ನೀಡುವುದಾಗಿ ಡಾ.ಎಚ್.ವೀಣಾ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ಮಾತನಾಡಿ,ಬುಧವಾರ ರಾತ್ರಿ 8:30ರ ಸುಮಾರಿಗೆ ಕಸ್ತೂರಿ ಎನ್ನುವ ಗರ್ಭಿಣಿ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಜಿಲ್ಲಾಸ್ಪತ್ರೆಗೆ ಸೇರಲು ಬಂದಾಗ ಕರ್ತವ್ಯದಲ್ಲಿದ್ದ ವೈದ್ಯೆ ಡಾ.ಉಷಾ ಎಂಬುವವರು ಗರ್ಭೀಣಿ ಮಹಿಳೆಯ ಬಳಿ ತಾಯಿ, ಮಗುವಿನ ಆರೋಗ್ಯದ ಮಾಹಿತಿಯನ್ನು ಒಳಗೊಂಡಿರುವ ತಾಯಿ ಕಾರ್ಡು ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನೀಡಿಲ್ಲ ಎಂದು ತಿಳಿದು ಬಂದಿದೆ.ದಾಖಲೆಗಳಿಲ್ಲವೆಂಬ ಕಾರಣಕ್ಕೆ ಯಾವುದೇ ರೋಗಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ. ಹಾಗಾಗಿ ಸದರಿ ವೈದ್ಯರ ಅಮಾನತ್ತಿಗೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.ಅಲ್ಲದೆ, ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ನರ್ಸ್ಗಳನ್ನು ಸಹ ಪತ್ತೆ ಹಚ್ಚಿ ಅವರ ಅಮಾನತ್ತಿಗೂ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಒಟ್ಟಾರೆ ಇಡೀ ಪ್ರಕರಣ ಜಿಲ್ಲಾಸ್ಪತ್ರೆಗೆ ಕಪ್ಪು ಚುಕ್ಕೆಯಾಗಿದ್ದು,ಸರಕಾರ ಸೂಕ್ತ ಕ್ರಮ ಕೈಗೊಂಡು, ಸಂತ್ರಸ್ಥರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಹಾಗೂ ತಬ್ಬಲಿಯಾದ ಮೃತ ಕಸ್ತೂರಿ ಅವರ ಮಗಳಿಗೆ ಆಶ್ರಯ ನೀಡಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next