Advertisement

ಅಕಾಲಿಕ ಮಳೆಗೆ ಅನ್ನದಾತ ಕಂಗಾಲು

02:06 PM Nov 17, 2021 | Team Udayavani |
ಕೂಲಿಯವರು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸಾಕಷ್ಟು ಜನ ಹತ್ತಿ ಬಿಡಿಸಿಲ್ಲ. ಮಂಗಳವಾರ ಮಧ್ಯಾಹ್ನ ಸುಮಾರು ಅರ್ಧ ಗಂಟೆ ಮಳೆ ಸುರಿದಿದ್ದು, ಹತ್ತಿ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.ವಾತಾವರಣ ತಂಪಾಗಿರುವ ಕಾರಣ ತೊಗರಿಗೆ ಹಸುರು ಹುಳು ಕಾಟ ಶುರುವಾಗಿದೆ. ಇದರಿಂದ ಮತ್ತೂಮ್ಮೆ ಕ್ರಿಮಿನಾಶಕ ಸಿಂಪಡಣೆ ಮಾಡ ಬೇಕು. ಈಗ ತೊಗರಿ ಕಾಯಿ ಕಟ್ಟಿದ್ದು, ಇಂತಹ ವೇಳೆ ಈ ಕೀಟಗಳು ತೊಗರಿಯನ್ನೆಲ್ಲ ತಿಂದು ಹಾಕುತ್ತವೆ. ಇನ್ನೂ ಹೆಚ್ಚಿನ ಸಮಸ್ಯೆ ಎದುರಾಗಿಲ್ಲ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರಿದರೆ ತೊಗರಿ ಬೆಳೆಗಾರರು ನಷ್ಟಕ್ಕೀಡಾಬೇಕಾಗುತ್ತದೆ...
Now pay only for what you want!
This is Premium Content
Click to unlock
Pay with

ರಾಜ್ಯದ ಹಲವೆಡೆ ನಿರಂತರವಾಗಿ ಸುರಿಯುತ್ತಿರುವ ಅಕಾ ಲಿಕ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಅಪಾರ ಪ್ರಮಾಣದ ಬೆಳೆ ನೆಲಕಚ್ಚಿದೆ. “ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬ ಸ್ಥಿತಿ ಅನ್ನದಾತರದ್ದು…

Advertisement

3.08 ಕೋ. ರೂ. ಮೌಲ್ಯದ ಬೆಳೆ ಹಾನಿ
ದಾವಣಗೆರೆ: ಜಿಲ್ಲೆಯಲ್ಲಿ ಜುಲೈ ಹಾಗೂ ಅಕ್ಟೋಬರ್‌ ಈ ಎರಡು ತಿಂಗಳುಗಳಲ್ಲಿ ಸುರಿದ ಅಧಿಕ ಮಳೆಯಿಂದಾಗಿ 1.22 ಕೋಟಿ ರೂ. ಮೌಲ್ಯದ ಕೃಷಿ ಬೆಳೆ, ಜುಲೈ ದಿಂದ ಇಲ್ಲಿಯವರೆಗೆ ಅಂದಾಜು 1.86 ಕೋಟಿ ರೂ. ಮೌಲ್ಯದ ತೋಟಗಾರಿಕೆ ಬೆಳೆ ಸೇರಿ ಒಟ್ಟು ಅಂದಾಜು 3.08 ಕೋಟಿ ರೂ.ಗಳಷ್ಟು ಬೆಳೆ ಹಾನಿ ಸಂಭವಿಸಿದೆ. ಈಗ ನವೆಂಬರ್‌ನಲ್ಲಿ ಮುಂದುವರಿದ ಮಳೆ ಹಾಗೂ ತಂಪು ವಾತಾವರಣದಿಂದ ಇನ್ನಷ್ಟು ಹಾನಿಯಾಗಿದ್ದು ಸಮೀಕ್ಷೆ ಮುಂದುವರಿದೆ. ಉತ್ತಮ ಮಳೆಯಿಂದ ಸಂತಸಗೊಂಡಿದ್ದ ಕೃಷಿಕರು ಜುಲೈ, ಅಕ್ಟೋಬರ್‌ ತಿಂಗಳಲ್ಲಿ ಮಳೆಯ ಆರ್ಭಟಕ್ಕೆ ಆತಂಕಗೊಳ್ಳುವಂತಾಯಿತು. ಆ ಸಂದರ್ಭದಲ್ಲಿಯೂ ಒಂದಿಷ್ಟು ಬೆಳೆ ಹಾನಿ ಆಯಿತು. ಬಳಿಕ ಉಳಿಸಿಕೊಂಡು ಬರಲಾಗಿದ್ದ ಒಂದಿಷ್ಟು ಬೆಳೆ ಕಟಾವಿಗೆ ಬಂದ ಈ ಸಂದರ್ಭದಲ್ಲಿ ಚಂಡಮಾರುತದ ಪರಿಣಾಮದಿಂದ ಬಂದ ಮಳೆ, ಸಹಜ ಮಳೆ ಹಾಗೂ ಮುಂದುವರಿದ ತಂಪಾದ ವಾತಾವರಣ ರೈತರನ್ನು ಕಂಗಾಲಾಗಿಸಿದೆ.

ನಿರಂತರ ಮಳೆಗೆ ಕುಗ್ಗಿದ ರೈತ
ಮೈಸೂರು: ಅಕಾಲಿಕ ಮಳೆಯಿಂದ ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ರಾಗಿ, ಭತ್ತ, ಮುಸುಕಿನ ಜೋಳ ಬೆಳೆ ಹಾನಿಗೀಡಾಗಿವೆ. ಜೂನ್‌, ಜುಲೈಯಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆದ ಖುಷ್ಕಿ ಬೆಳೆ ಕಟಾವು ಹಂತಕ್ಕೆ ಬಂದಿತ್ತು. ಡಿಸೆಂಬರ್‌ 15ರ ಒಳಗಾಗಿ ಈ ಬೆಳೆ ಕಟಾವು ಆಗಲಿದೆ. ಅಷ್ಟರಲ್ಲಿ ಸುರಿದ ಅಕಾಲಿಕ ಮಳೆಯು ಬೆಳೆಗೆ ಹಾನಿ ತಂದಿದೆ. ಮಳೆಗೆ ರಾಗಿಯು ಬಣ್ಣ ಕಳೆದು ಕೊಳ್ಳುತ್ತಿದೆ. ಭತ್ತದ ಬೆಳೆ ಮಳೆಗೆ ಉದುರಿ ಹೋಗುತ್ತಿವೆ. ಮುಸುಕಿನ ಜೋಳ ಮಳೆಗೆ ನೆಲಕ್ಕೊರಗಿವೆ. ಮೈಸೂರು ಜಿಲ್ಲೆಯಲ್ಲಿ ಅಕ್ಟೋಬರ್‌-ನವೆಂಬರ್‌ನಲ್ಲಿ ಅಕಾಲಿಕ ಮಳೆಯಿಂದಾಗಿ ಮಳೆ ಆಶ್ರಿತ ಪ್ರದೇಶದಲ್ಲಿ 28.55 ಹೆಕ್ಟೇರ್‌, ನೀರಾವರಿ ಪ್ರದೇಶದಲ್ಲಿ 42.7 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಒಟ್ಟು 71.15 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಮೈಸೂರು ಜಿಲ್ಲಾ ಜಂಟಿ ನಿರ್ದೇಶಕ ಡಾ|ಎಂ.ಮಹಾಂತೇಶಪ್ಪ ತಿಳಿಸಿದ್ದಾರೆ.

ಕಟಾವಿಗೆ ಬಂದಿದ್ದ ರಾಗಿ ತೆನೆೆ ನಾಶ
ತುಮಕೂರು: ರಾಜ್ಯದಲ್ಲೇ ಹೆಚ್ಚು ರಾಗಿ ಬೆಳೆಯುವ ಕಲ್ಪತರು ನಾಡಿನಾದ್ಯಂತ ಕಳೆದ 15 ದಿನಗಳಿಂದ ನಿರಂತರ ಸುರಿದ ಮಳೆಗೆ ಬೆಳೆದು ತೆನೆಯಾಗಿದ್ದ ರಾಗಿ ಬೆಳೆ ಹಾಗೂ ಶೇಂಗಾ ಬೆಳೆ ಹಾಳಾಗಿ ರೈತರಿಗೆ ಅಪಾರ ನಷ್ಟವಾಗಿದೆ. ಬಂಪರ್‌ ಬೆಳೆ ನಿರೀಕ್ಷಿಸಿದ್ದ ರಾಗಿ ಬೆಳೆಗಾರರಿಗೆ ನಿರಂತರ ಮಳೆಯಿಂದ ನಿರಾಸೆ ಉಂಟಾಗಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ರಾಗಿ ಬೆಳೆಯುವ ತಾಲೂಕುಗಳಾಗಿರುವ ತುಮಕೂರು, ಗುಬ್ಬಿ, ಕುಣಿಗಲ್‌, ತುರುವೇಕೆರೆ, ತಿಪಟೂರು, ಚಿಕ್ಕನಾಯಕ ನ ಹಳ್ಳಿ ಸೇರಿ ವಿವಿಧ ಕಡೆ ನಿರೀಕ್ಷೆಗೂ ಮೀರಿ ಮಳೆಯಾಗಿರುವುದರಿಂದ ಕೆಲವು ಕಡೆ ಕಟಾವಿಗೆ ಬಂದಿದ್ದ ರಾಗಿ ತೆನೆ ಮಳೆ ರಭಸಕ್ಕೆ ನೆಲಕ್ಕೆ ಬಿದ್ದು ಮಣ್ಣಾಗಿದೆ. ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ ತಾಲೂಕುಗಳಲ್ಲಿ ಕಟಾವು ಮಾಡಿರುವ ಶೇಂಗಾ ಕೂಡಾ ಮಳೆಯಿಂದ ನೆನೆದು ಹಾಳಾಗಿದೆ. ಕೆಲವು ಕಡೆ ಬೇಯಿಸಿ ಒಣಗಿಸಲು ಹಾಕಿದ್ದ ಅಡಿಕೆ ಬಿಸಿಲು ಇಲ್ಲದೇ ಹಾಳಾಗುತ್ತಿದೆ. ಈವರೆಗೆ 2,759ಹೆಕ್ಟೆರ್‌ಗಳಿಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾಳಾಗಿದೆ.

ಮಲೆನಾಡಿನಲ್ಲಿ ಅಧಿಕ ಮಳೆ
ಶಿವಮೊಗ್ಗ: ಮುಂಗಾರು ಅವ ಧಿಯಲ್ಲಿ ಬಿತ್ತನೆ ಮಾಡಿದ್ದ ಫಸಲು ನವೆಂಬರ್‌ ಎರಡನೇ ವಾರದಿಂದ ಕಟಾವಿಗೆ ಬರುತ್ತದೆ. ಜಿಲ್ಲೆಯಾದ್ಯಂತ ಈ ಬಾರಿ 78,616 ಹೆಕ್ಟೇರ್‌ನಲ್ಲಿ ಭತ್ತ, 51,251 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 396 ಹೆಕ್ಟೇರ್‌ ಹತ್ತಿ, 433 ಹೆಕ್ಟೇರ್‌ ತೊಗರಿ, 101 ಹೆಕ್ಟೇರ್‌ ಅಲಸಂಡೆ, 57 ಹೆಕ್ಟೇರ್‌ ಶೇಂಗಾ, 880 ಹೆಕ್ಟೇರ್‌ ಕಬ್ಬು ಬಿತ್ತನೆ ಮಾಡಲಾಗಿದೆ. ಈಗ ಭತ್ತ ಹಾಗೂ ಮೆಕ್ಕೆಜೋಳ ಕಟಾವಿಗೆ ಬಂದಿದ್ದು ರೈತರು ಮಳೆ ನಿಲ್ಲುವುದನ್ನೇ ಕಾಯುತ್ತಿದ್ದಾರೆ. ಈಗಾಗಲೇ ತಮಿಳುನಾಡಿನಿಂದ ನೂರಾರು ಭತ್ತ ಕಟಾವು ಯಂತ್ರಗಳು ಬಂದಿದ್ದು ಕೆಲಸವಿಲ್ಲದೇ ನಿಂತಿವೆ. ಬೆಳಗ್ಗೆ ಬಿಸಿಲು ಸಂಜೆಯಾಗುತ್ತಿದ್ದಂತೆ ಭಾರೀ ಮಳೆಯಾಗುತ್ತಿದ್ದು ಹೊಲ, ಗದ್ದೆಗಳು ಜಲಾವೃತ ಗೊಳ್ಳುತ್ತಿವೆ. ಹೀಗಾಗಿ ಕಟಾವು ಯಂತ್ರ ಇಳಿಸಲು ತೊಂದರೆಯಾಗುತ್ತಿದೆ. ನ.1ರಿಂದ ನ.15ರ ವರೆಗೆ ಜಿಲ್ಲೆಯಲ್ಲಿ ವಾಡಿಕೆಯ 25 ಮಿ.ಮೀ. ಬದಲಾಗಿ 98 ಮಿ.ಮೀ. ಮಳೆಯಾಗಿದೆ. ಮಳೆಯಿಂದ ಭತ್ತ ಹಾಗೂ ಮೆಕ್ಕೆಜೋಳ, ರಾಗಿ ಬೆಳೆಗೆ ನೀರು ನುಗ್ಗಿದ್ದು ಭಾಗಶಃ ಹಾನಿಯಾಗಿದೆ.

Advertisement

ಇದನ್ನೂ ಓದಿ:ರೇಷ್ಮೆ ಮಾರುಕಟ್ಟೆ ವಾರಣಾಸಿಗೆ ವಿಸ್ತರಿಸುವ ಚಿಂತನೆ: ಡಾ| ನಾರಾಯಣ ಗೌಡ

ನಷ್ಟದ ವರದಿ ನೀಡಲು ತಯಾರಿ
ಮಂಡ್ಯ: ಜಿಲ್ಲೆಯಾದ್ಯಂತ ಅಕಾಲಿಕ ಮಳೆಯಿಂದ 403.88 ಎಕ್ರೆ ರೈತರ ಬೆಳೆಗಳು ನಾಶವಾಗಿದೆ. ಇದರಲ್ಲಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆಗೆ ಸಂಬಂಧಿ ಸಿದ ಬೆಳೆಗಳು ಸೇರಿವೆ. ಕಳೆದ ಆಕ್ಟೋಬರ್‌ ತಿಂಗಳಲ್ಲಿ ಭತ್ತ, ಕಬ್ಬು ಸೇರಿ ಇತರ 221 ಎಕ್ರೆ ಬೆಳೆಗಳು ನಾಶವಾಗಿದ್ದವು. ನವೆಂಬರ್‌ ತಿಂಗಳಲ್ಲಿ 373 ಎಕ್ರೆ ಬೆಳೆ ನಾಶವಾಗಿದೆ. ನವೆಂಬರ್‌ನಲ್ಲಿ ತೋಟಗಾರಿಕೆಯ 30.88 ಎಕ್ರೆ ಬೆಳೆಗಳು ನಾಶವಾಗಿವೆ. ಇದರಲ್ಲಿ ತೆಂಗು, ಬಾಳೆ, ಚೆಂಡು ಹೂವು, ಟೊಮೆಟೊ, ಗೆಡ್ಡೆಕೋಸು, ಸೌತೆಕಾಯಿ, ಬದನೆ, ಮಾವು, ಪಡವಲಕಾಯಿ, ಕೊತ್ತಂಬರಿ ಸೊಪ್ಪು, ಅಡಿಕೆ ಸೇರಿ ಇತರ ಬೆಳೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

373 ಎಕ್ರೆ ಪ್ರದೇಶ ಬೆಳೆ ಹಾನಿ: ನ.9ರಿಂದ 15ರ ವರೆಗೆ ಸುರಿದ ಮಳೆಗೆ ಕೆ.ಆರ್‌. ಪೇಟೆ, ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲೂಕುಗಳಲ್ಲಿ ಒಟ್ಟು 373 ಎಕ್ರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು, ಭತ್ತ, ಇತರ ಬೆಳೆಗಳಿಗೆ ಹಾನಿಯುಂಟಾಗಿದೆ. ಕೆ.ಆರ್‌. ಪೇಟೆ 67 ಎಕ್ರೆ, ಶ್ರೀರಂಗಪಟ್ಟಣ 189 ಎಕ್ರೆ ಹಾಗೂ ಪಾಂಡವಪುರದಲ್ಲೂ 117 ಎಕ್ರೆ ಪ್ರದೇಶದ ಬೆಳೆಗಳು ಹಾನಿಗೊಳಗಾಗಿರುವ ಬಗ್ಗೆ ವರದಿಯಾಗಿದೆ. ಜಿಲ್ಲೆಯಾದ್ಯಂತ ಬೆಳೆ ನಷ್ಟ ಹಾಗೂ ಮನೆಗಳ ಕುಸಿತಕ್ಕೆ ಸಂಬಂಧಿ ಸಿದಂತೆ ಸರಕಾರಕ್ಕೆ ನಷ್ಟದ ವರದಿ ನೀಡಲು ಸಿದ್ಧಪಡಿಸಲಾಗುತ್ತಿದೆ.

ದ.ಕ. ಜಿಲ್ಲೆಯಲ್ಲಿ 73 ಹೆಕ್ಟೇರ್‌ ಭತ್ತದ ಬೆಳೆಗೆ ಹಾನಿ
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ (ಎಪ್ರಿಲ್‌ನಿಂದ ನ.10 ರ ತನಕ) 73 ಹೆಕ್ಟೇರ್‌ ಭತ್ತದ ಬೆಳೆಗೆ ಹಾನಿಯಾಗಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಭತ್ತದ ಕಟಾವು ಮುಗಿದಿದ್ದು, ಇನ್ನೂ ಕೆಲವು ಕಡೆ ಕೊಯ್ಲಿಗೆ ಬಾಕಿ ಇದೆ. ಕೆಲವು ಕಡೆ ಕಟಾವು ಮಾಡಿ ಗದ್ದೆಗಳಲ್ಲಿ ಒಣಗಲು ಹಾಕಿದ ಭತ್ತದ ಪೈರು ಮಳೆ ನೀರಿನಲ್ಲಿ ನೆನೆದು ಭತ್ತ ಮತ್ತು ಹುಲ್ಲು ಕೊಳೆತು ಸಂಪೂರ್ಣ ನಾಶವಾಗಿದೆ. ಕಳೆದ 2- 3 ದಿನಗಳಿಂದ ಭತ್ತದ ಕೃಷಿಕರಿಗೆ ಆಗಿರುವ ನಷ್ಟದ ಪ್ರಮಾಣದ ಅಂಕಿ ಅಂಶಗಳು ಇನ್ನಷ್ಟೇ ಲಭಿಸಬೇಕಾಗಿದೆ. ಅಡಿಕೆ ಕೃಷಿಕರಿಗೂ ಮಳೆಯಿಂದ ನಷ್ಟವಾಗಿದೆ. ಕೊಯ್ಲು ಮಾಡಿ ಒಣಗಲು ಹಾಕಿದ ಹಣ್ಣಡಿಕೆ ಮಳೆ ನೀರಿನಿಂದ ತೊಯ್ದು ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಈ ವರ್ಷ ಗಾಳಿ ಮಳೆಗೂ ಅಡಿಕೆ ಮರಗಳು ನೆಲಕ್ಕುರುಳಿ ಬೆಳೆಗಾರರಿಗೆ ನಷ್ಟವಾಗಿದೆ. ಉಡುಪಿ ಜಿಲ್ಲೆ ಯಲ್ಲಿ ಅಕಾಲಿಕ ಮಳೆಯಿಂದ ರೈತರು ಕಂಗೆಟ್ಟಿದ್ದು, ಕಟಾವಿಗೆ ಅಣಿಯಾಗಿದ್ದ 30 ಹೆಕ್ಟೇರ್‌ ಭತ್ತ ಕೃಷಿಗೆ ಹಾನಿಯಾಗಿದೆ.

ನೆಲಕಚ್ಚಿದ ರಾಗಿ, ಮೆಕ್ಕೆಜೋಳ
ಹಾಸನ: ಜಿಲ್ಲೆಯಲ್ಲಿ ರಾಗಿ ಮತ್ತು ಮೆಕ್ಕೆ ಜೋಳಕ್ಕೆ ಭಾರೀ ಹಾನಿಯಾಗಿದೆ. ತೋಟ ಗಾರಿಕೆ ಬೆಳೆಗಳಲ್ಲಿ ಕಾಫಿಗೂ ಹಾನಿ ಸಂಭವಿಸಿದೆ. ಕಟಾವಿಗೆ ಬಂದಿದ್ದ ತೆನೆಭರಿತ ರಾಗಿ ಬೆಳೆ ಧರಾಶಾಯಿಯಾಗಿದ್ದು, ರಾಗಿ ತೆನೆಗಳು ಹೊಲದ ಮಣ್ಣಿಗೆ ಬಿದ್ದು ಮೊಳೆಕೆಯೊಡೆ ಯಲಾರಂಭಿಸಿವೆ. ರಾಗಿಯ ಕಾಂಡ (ಹುಲ್ಲು ) ಕೂಡ ಕೊಳೆಯಲಾರಂಭಿಸಿದೆ. ಇನ್ನೂ ಕಟಾವು ಮಾಡದ ಮೆಕ್ಕೆಜೋಳದ ತೆನೆಗಳು ಫ‌ಂಗಸ್‌ ಆವರಿಸಿದೆ. ವರ್ಷ ಪೂರ್ತಿ ಕಷ್ಟಪಟ್ಟು ಸಾವಿರಾರು ರೂ. ಖರ್ಚು ಮಾಡಿ ಬೆಳೆದ ಬೆಳೆ ಮಣ್ಣುಪಾಲಾಗುತ್ತಿದೆ. ಮಲೆನಾಡು ಭಾಗದ ವಾಣಿಜ್ಯ ಬೆಳೆ ಕಾಫಿ ಕೊಯ್ಲಿಗೆ ಬಂದಿದೆ. ಆದರೆ ತೋಟದೊಳಗೆ ಹೋಗಿ ಕಾರ್ಮಿಕರು ಕಾಫಿ ಗಿಡಗಳಿಂದ ಹಣ್ಣು ಬಿಡಿಸಲಾಗುತ್ತಿಲ್ಲ.

ತೋಟಗಾರಿಕೆ ಬೆಳೆ ಮೇಲೆ ಪರಿಣಾಮ
ಕೋಲಾರ: ಜಡಿಮಳೆಯು ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಜಿಲ್ಲೆಯ ಪ್ರಮುಖ ಕೃಷಿ ಬೆಳೆ ರಾಗಿ. ಜಡಿ ಮಳೆಯಿಂದಾಗಿ ಬಹುತೇಕ ರಾಗಿ ಬೆಳೆ ನಾಶವಾಗುವ ಹಂತ ತಲುಪಿದೆ. ಮುಂಗಾರು ಆರಂಭದಲ್ಲಿಯೇ ರಾಗಿ ಬಿತ್ತನೆ ಮಾಡಿದವರು ಈಗ ಫ‌ಸಲನ್ನು ಕೊಯ್ಲು ಮಾಡಬೇಕಾಗಿತ್ತು. ಆದರೆ ಮಳೆಯಿಂದಾಗಿ ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಾದ್ಯಂತ ರಾಗಿ ಫ‌ಸಲು ನೆಲಕಚ್ಚಿದೆ.

ಈರುಳ್ಳಿ, ದ್ರಾಕ್ಷಿಗೂ ಬಿಡದ ಕಂಟಕ
ಬಾಗಲಕೋಟೆ: ಜಿಲ್ಲೆಯಲ್ಲಿ ಅಕಾಲಿಕ ಮಳೆ ಕೆಲವು ರೈತರಿಗೆ ನಷ್ಟವನ್ನುಂಟು ಮಾಡಿದರೆ, ಜೋಳ-ಕಡಲೆ ಬೆಳೆದ ರೈತರಿಗೆ ಅನುಕೂಲ ಮಾಡಿದೆ. ಜಿಲ್ಲೆಯಾದ್ಯಂತ ಬೆಳೆದ ಸುಮಾರು 32 ಸಾವಿರ ಹೆಕ್ಟೇರ್‌ ಪ್ರದೇಶದ ಈರುಳ್ಳಿ ಬೆಳೆಯಲ್ಲಿ ಬಹುತೇಕ ಈರುಳ್ಳಿ ಕೊಳೆತಿದೆ. 15 ದಿನಗಳಿಂದ ಹಲವೆಡೆ ಈರುಳ್ಳಿ ಬೆಳೆ ಕಟಾವು ನಡೆಯು ತ್ತಿದ್ದು, ಶೇ.40ರಷ್ಟು ಮಾತ್ರ ಕಟಾವು ಮಾಡಲಾಗಿದೆ. ಇನ್ನೂ ಶೇ.60ರಷ್ಟು ಈರುಳ್ಳಿ ಬೆಳೆ ಇನ್ನೂ ಹೊಲದಲ್ಲೇ ಇದ್ದು, ಹಲವೆಡೆ ಕಟಾವು ಮಾಡಿ ರಾಶಿ ಹಾಕಲಾಗಿತ್ತು. ಈಗ ಸುರಿಯುತ್ತಿರುವ ಮಳೆಯಿಂದ ರಾಶಿ ಹಾಕಿದ್ದ ಈರುಳ್ಳಿ ಸಂಪೂರ್ಣ ಕೊಳೆತಿದೆ. ಹಿಂಗಾರು ಹಂಗಾಮಿನಲ್ಲಿ ಸದ್ಯ 32 ಸಾವಿರ ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆದಿದ್ದು, ಕಟಾವು ಮಾಡದೇ ಉಳಿದ ಈರುಳ್ಳಿ ಸಂಪೂರ್ಣ ಹಾನಿಯಾಗಿದೆ. ಬಾಗಲಕೋಟೆ ಮತ್ತು ಜಮಖಂಡಿ ಭಾಗದಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯುತ್ತಿದ್ದು, ವಿಶಾಖಾ ಮಳೆಯಿಂದ ದ್ರಾಕ್ಷಿ ಗೊಂಚಲುಗಳು ಉದುರು ಬೀಳುತ್ತಿವೆ.

ರಾಗಿ, ಶೇಂಗಾ, ಬಾಳೆಗೂ ಕುತ್ತು
ಚಿತ್ರದುರ್ಗ: ನಿರಂತರ ಮಳೆಯಿಂದಾಗಿ ತೋಟಗಾರಿಕೆ ಸೇರಿ ಎಲ್ಲ ರೀತಿಯ ಬೆಳೆಗಳು ಜಮೀನಿನಲ್ಲೇ ಉಳಿದಿವೆ. ಮಳೆ ಹೆಚ್ಚಾದ ಪರಿಣಾಮ ಕೆಲವು ಬೆಳೆಗಳು ಹಾಳಾಗುತ್ತಿವೆ. ಹಲವೆಡೆ ರೈತರ ಜಮೀನುಗಳಲ್ಲಿ ಮೆಕ್ಕೆಜೋಳದ ತೆನೆಗಳಲ್ಲಿ ಮೊಳಕೆ ಕಾಣಿಸಿಕೊಂಡಿದೆ. ರಾಗಿ ಕಟಾವಿಗೆ ಬಂದರೂ ಕಟಾವು ಮಾಡದ ಸ್ಥಿತಿಯಿದ್ದ ರೆ, ಶೇಂಗಾ ಬೆಳೆ ಸಂಪೂರ್ಣ ಹಾಳಾಗಿದೆ. ಈರುಳ್ಳಿ ಕೂಡ ಈ ಹಿಂದೆಯೇ ಅತಿವೃಷ್ಟಿಯಿಂದ ಹಾಳಾಗಿರುವ ಬಗ್ಗೆ ಜಿಲ್ಲಾಡಳಿತ ಸರಕಾರಕ್ಕೆ ವರದಿ ಸಲ್ಲಿಸಿದೆ. ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು ಹಾಗೂ ಚಿತ್ರದುರ್ಗದ ಕೆಲವು ಭಾಗಗಳಲ್ಲಿ 1.40 ಲಕ್ಷ ಹೆಕ್ಟೇರ್‌ನಲ್ಲಿ ಅತೀ ಹೆಚ್ಚು ಬೆಳೆಯುವ ಹಾಗೂ ಈ ಭಾಗದ ಪ್ರಮುಖ ಬೆಳೆಯೂ ಆಗಿರುವ ಶೇಂಗಾ ಜಿಟಿ ಜಿಟಿ ಮಳೆಗೆ ಕೊಳೆಯುತ್ತಿದೆ. ಕಾಯಿ ಬಲಿಯುವ ಮುನ್ನವೇ ಶೇಂಗಾ ಬಳ್ಳಿ ಮಳೆಗೆ ಕೊಳೆಯುತ್ತಿದೆ. ಇದರಿಂದ ರಾಸುಗಳಿಗೆ ಮೇವು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಭಾಗಗಳಲ್ಲಿ ಪಪ್ಪಾಯ ಬೆಳೆ ನಾಶವಾಗಿದೆ.

ಸಮೀಕ್ಷಾ ಕಾರ್ಯ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕಾಲಿಕ ಮಳೆಗೆ ಭತ್ತದ ಬೆಳೆಗೆ ಅತೀ ಹೆಚ್ಚು ಹಾನಿಯಾಗಿದೆ. ಕೊಯ್ಲಿಗೆ ಬಂದಿದ್ದ ಭತ್ತ ಗದ್ದೆಯಲ್ಲಿ ಮಳೆಯ ನೀರಲ್ಲಿ ನಿಂತು ಬಾಗಿ ನೆಲಕಚ್ಚಿದೆ. ಕೊಯ್ಲು ಮಾಡಿದ ಭತ್ತ ಗದ್ದೆಯ ನೀರಲ್ಲಿ ತೆನೆ ಸಹಿತ ಮುಳುಗಿದೆ. ಮಂಗಳವಾರವೂ ಮಧ್ಯಾಹ್ನದ ಅನಂತರ ಮಳೆ ಸುರಿದಿದ್ದು, ಭತ್ತ ಹಾನಿ ಸಮೀಕ್ಷೆಗೆ ಅಡ್ಡಿಯಾಗಿದೆ. ಕೃಷಿ ಅಧಿಕಾರಿಗಳು ಭತ್ತದ ಗದ್ದೆಗಳ ಬಳಿ ಹೋಗಿ ಮಾಹಿತಿ ಸಂಗ್ರಹದಲ್ಲಿ ನಿರತರಾಗಿದ್ದರೆ, ಅತ್ತ ಭತ್ತ ಬೆಳೆದ ರೈತ ಗದ್ದೆಗಳಲ್ಲಿ ಕಣ್ಣೀರು ಸುರಿ ಸುತ್ತಿದ್ದಾರೆ. ಅಕಾಲಿಕ ಮಳೆ ರೈತರ ಪಾಲಿಗೆ ಶಾಪವಾಗಿ ಕಾಡತೊಡಗಿದೆ. ಸಿದ್ದಾಪುರ, ಹೊನ್ನಾವರ ತಾಲೂಕಿನಲ್ಲಿ 3 ದಿನಗಳಿಂದ ಸುರಿದ ಮಳೆಗೆ ಕಟಾವು ಮಾಡಿದ ಭತ್ತ ಮಳೆಯ ಪಾಲಾಗಿದೆ. ಅಂಕೋಲಾ, ಕುಮಟಾ ಅನಂತರದ ಸ್ಥಾನದಲ್ಲಿವೆ. ಯಲ್ಲಾ ಪುರ, ಮುಂಡಗೋಡ, ಹಳಿಯಾಳ, ಜೋಯಿಡಾ, ಕಾರವಾರ, ಭಟ್ಕಳ, ದಾಂಡೇಲಿ ಭಾಗದಲ್ಲಿ ಭತ್ತ ಕಟಾವು ಮಾಡದ ಕಾರಣ ಅಷ್ಟಾಗಿ ಹಾನಿ ಸಂಭವಿಸಿಲ್ಲ. ಶಿರಸಿ, ಯಲ್ಲಾಪುರ ಭಾಗದಲ್ಲಿಯೂ ಅಲ್ಪ ಪ್ರಮಾಣದ ಹಾನಿಯಾಗಿದೆ.

ಈರುಳ್ಳಿ ಬೆಳೆದ ಗದಗ ರೈತರ ಕಣ್ಣೀರು
ಗದಗ: ಬಯಲು ಸೀಮೆ ಗದಗ ಜಿಲ್ಲೆಯ ಮುಂಗಾರಿನ ಪ್ರಮುಖ ಬೆಳೆಯಾದ ಈರುಳ್ಳಿ ಈಗಾಗಲೇ ಬೆಳೆದು ನಿಂತಿದೆ. ಕಟಾವು ಮಾಡುವ ಸಂದರ್ಭದಲ್ಲೇ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಬೆಳೆಗಾರರ ಲೆಕ್ಕಾಚಾರಗಳು ತಲೆ ಕೆಳಗಾಗಿವೆ. ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಜಮೀನಿನಲ್ಲೇ ಕೊಳೆಯಲಾರಂಭಿಸಿರುವುದು ರೈತರಲ್ಲಿ ಕಣ್ಣೀರು ತರಿಸುತ್ತಿದೆ. ಪ್ರಸಕ್ತ ಸಾಲಿನ ಮುಂಗಾರಿಗೆ ಜಿಲ್ಲೆಯಲ್ಲಿ ಒಟ್ಟು 35,500 ಹೆಕ್ಟೇರ್‌ ಪ್ರದೇಶ ದಲ್ಲಿ ಈರುಳ್ಳಿ ಬಿತ್ತನೆ ಮಾಡಲಾ ಗಿದೆ. ಈ ಪೈಕಿ ರೋಣ, ಗದಗ, ಶಿರಹಟ್ಟಿ, ಗಜೇಂದ್ರಗಢ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗಿದ್ದು, ಈಗಾಗಲೇ ಈರುಳ್ಳಿ ಸದ್ಯಕ್ಕೆ ಮಾರುಕಟ್ಟೆಗೆ ಆಗಮಿಸುತ್ತಿದೆ. ಆದರೆ ನಿರೀಕ್ಷಿತ ಬೆಲೆ ಸಿಗದೇ ರೈತರಿಗೆ ದಿಕ್ಕು ತೋಚದಂತಾಗಿದೆ.

ಇದನ್ನೂ ಓದಿ:ಬೆಂಗಳೂರು ಮೆಟ್ರೋ ರೈಲು ಸಂಚಾರ ಅವಧಿ ವಿಸ್ತರಣೆ

ಕೈಗೆ ಬಾರದ ಬೆಳೆ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಳೆಯಿಂದಾಗಿ ಮುಸುಕಿನ ಜೋಳ, ಕಡಲೆ ಕಾಯಿ ಮತ್ತು ರಾಗಿ ಬೆಳೆಗಳು ನಾಶವಾಗಿದ್ದು ರೈತರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ಮಳೆಯನ್ನಾಧರಿಸಿಕೊಂಡು ರೈತರು ಬಿತ್ತನೆ ಕಾರ್ಯ ಚುರುಕುಗೊಳಿಸಿ ಬೆಳೆ ಬೆಳೆದಿದ್ದರು. ಆದರೆ ಜಡಿ ಮಳೆಯ ಪ್ರಭಾವದಿಂದ ಬೆಳೆ ನಷ್ಟ ಉಂಟಾಗಿ ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾ ರ ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 1 ಲಕ್ಷ 45 ಸಾವಿರ 33 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಿ ಈಗಾಗಲೇ 1 ಲಕ್ಷ 40 ಸಾವಿರ 913 ಹೆಕ್ಟೇರ್‌ ವಿಸ್ತೀರ್ಣ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಆ ಪೈಕಿ 5,032 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿ ಸುಮಾರು 266.36 ಲಕ್ಷ ರೂ.ಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಬೆಳೆದ ಬೆಳೆ ಹೊಲದಲ್ಲೇ ಕೊಳೆಯಿತು
ಕೊಪ್ಪಳ: ಜಿಲ್ಲೆಯಲ್ಲಿ ಹಿಂಗಾರು ಹಾಗೂ ಅಕಾಲಿಕ ಮಳೆಯಿಂದಾಗಿ ಭತ್ತ, ಈರುಳ್ಳಿ ಸೇರಿ ಇತರೆ ಒಟ್ಟಾರೆ 870 ಹೆಕ್ಟೇರ್‌ ಬೆಳೆ ಹಾನಿಗೀಡಾಗಿದೆ. ಇದರಿಂದ ರೈತಾಪಿ ವಲಯ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತಲ್ಲ ಎಂದು ರೋದನೆ ವ್ಯಕ್ತಪಡಿಸಿದೆ. ಜಿಲ್ಲಾಡಳಿತ ಬೆಳೆ ಹಾನಿ ಕುರಿತು ಸರ್ವೇ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗಿಂತ ಹಿಂಗಾರು ಹಂಗಾಮಿನಲ್ಲೇ ರೈತರು ಹೆಚ್ಚು ಬೆಳೆ ನಷ್ಟ ಅನುಭವಿಸಿದ್ದಾರೆ. ಈ ಭಾಗದಲ್ಲಿ ಮೆಕ್ಕೆಜೋಳ, ಭತ್ತ, ಸಜ್ಜೆ, ತೊಗರಿ, ಈರುಳ್ಳಿ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ ಉತ್ತಮವಾಗಿದ್ದ ಮಳೆಯು ಹಿಂಗಾರಿನಲ್ಲೂ ಚೆನ್ನಾಗಿ ಆಗಿದೆ. ಆದರೆ ಕೆಲವು ಹೋಬಳಿಯಲ್ಲಿ ಅತಿಯಾದ ಮಳೆಯಿಂದ ರೈತರ ಬೆಳೆ ಹೊಲದಲ್ಲೇ ಕೊಳೆತು
ಹೋಗಿದೆ.

ಕಾಫಿ, ಅಡಿಕೆ ಬೆಳೆಗಾರರಿಗೆ ಹೊಡೆತ
ಚಿಕ್ಕಮಗಳೂರು: ಮಲೆನಾಡು ಸೇರಿ ಬಯಲುಸೀಮೆ ಭಾಗದಲ್ಲಿ ಬೆಳೆ ಕೊಯ್ಲಿಗೆ ಬಂದು ನಿಂತಿದೆ. ಜಿಲ್ಲೆಯಲ್ಲಿ ಅಂದಾಜು 50 ಸಾವಿರ ಹೆಕ್ಟೇರ್‌ಗೂ ಅ ಧಿಕ ಪ್ರದೇಶದಲ್ಲಿ ಕಾಫಿ ಬೆಳೆಯಲಾ ಗುತ್ತಿದೆ. ಆದರೆ ಕೊಯ್ಲು ಮಾಡಲಾಗದೆ ಫಸಲು ಮಣ್ಣು ಪಾಲಾಗುತ್ತಿದೆ. ಅರೇಬಿಕಾ ಕಾಫಿ ಸೇರಿ ಕಾಫಿತೋಟದಲ್ಲಿ ಕಾಫಿ ಹಣ್ಣಾಗಿ ನಿಂತಿದೆ. ಅಕಾಲಿಕ ಮಳೆಯಿಂದ ಕಾಫಿ ಕೊಯ್ಲು ಮಾಡಲು ಸಾಧ್ಯವಾಗದೆ ಉದುರಿ ಕೊಳೆತು ಹೋಗುತ್ತಿದೆ. ಮಳೆಯ ನಡುವೆಯೇ ಕಷ್ಟ ಪಟ್ಟು ಕೊಯ್ಲು ಮಾಡಿದರೆ ಅದನ್ನು ಸಂಸ್ಕರಿಸಲು ಸಾಧ್ಯ ವಾಗುತ್ತಿಲ್ಲ. ಬಿಸಿಲು ಬೀಳದಿರು ವುದರಿಂದ ಕಾಫಿ ಹಣ್ಣು ಒಣಗಿಸಲು ಸಾಧ್ಯವಾಗುತ್ತಿಲ್ಲ, ಬೂಸ್ಟ್‌ ಹಿಡಿದು ಪ್ರಯೋಜನಕ್ಕೆ ಬಾರದಂತಾಗುತ್ತಿದೆ. ಕಪ್ಪು ಬಂಗಾರ ಎಂದೇ ಕರೆಯಲ್ಪ ಡುವ ಕಾಳುಮೆಣಸು ಬೆಳೆದವರ ಸ್ಥಿತಿ ಚಿಂತಾಜನಕವಾಗಿದೆ. ಒಂದು ಕಡೆ ಸರಿಯಾದ ಬೆಲೆ ಇಲ್ಲ. ಮತ್ತೂಂದು ಕಡೆ ಮಳೆಯಿಂದ ಕಾಳುಮೆಣಸು ಸಂಸ್ಕರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಬಯಲುಸೀಮೆ ಭಾಗದಲ್ಲಿ ರಾಗಿ, ಈರುಳ್ಳಿ, ಬಾಳೆ, ಅಡಿಕೆ, ತರಕಾರಿ ಬೆಳೆಯನ್ನು ಅಕಾಲಿಕ ಮಳೆಯಿಂದ ಕೊಯ್ಲು ಮಾಡಲು ಸಾಧ್ಯವಾಗದೆ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಬೆಳೆ ಹಾಳಾಗುತ್ತಿದೆ.

ಹನೂರು: ಹೆಚ್ಚು ಹಾನಿ
ಚಾಮರಾಜನಗರ: ಜಿಲ್ಲೆಯಲ್ಲಿ ಮಳೆಯಿಂದ ಅತಿವೃಷ್ಟಿ ಉಂಟಾಗಿದ್ದು, ಕೃಷಿ ಕ್ಷೇತ್ರಕ್ಕೆ ಸಂಕಷ್ಟ ಎದುರಾಗಿದೆ. 1,335 ಹೆಕ್ಟೇರ್‌ನಲ್ಲಿ ಫ‌ಸಲು ನಷ್ಟವಾಗಿದೆ. ಇದರಲ್ಲಿ 1,100 ಹೆಕ್ಟೇರ್‌ ರಾಗಿ ಹನೂರು ತಾಲೂಕು ಒಂದರಲ್ಲೇ ಹಾನಿಗೀಡಾಗಿದೆ. ಜಿಲ್ಲೆಯಲ್ಲಿ ನವೆಂಬರ್‌ ತಿಂಗಳ ವಾಡಿಕೆ ಮಳೆ 66.8 ಮಿ.ಮೀ. ಆದರೆ ಈ ಬಾರಿ ಈ ತಿಂಗಳಲ್ಲಿ ಕೇವಲ 15 ದಿನದ ಅವಧಿಯಲ್ಲಿ 146.7 ಮಿ.ಮೀ. ಮಳೆಯಾಗಿದೆ. ಚಾಮರಾಜನಗರ ತಾಲೂಕಿನ 205 ಹೆಕ್ಟೇರ್‌, ಗುಂಡ್ಲುಪೇಟೆ ತಾಲೂಕಿನ 18, ಕೊಳ್ಳೇಗಾಲ ತಾಲೂಕಿನ 12 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿಫ‌ಸಲು ಹಾನಿಗೀಡಾಗಿದೆ. ಇನ್ನುಳಿದಂತೆ ಗುಂಡ್ಲು ಪೇಟೆ ತಾಲೂಕಿನಲ್ಲಿ 120 ಹೆಕ್ಟೇರ್‌ ಪ್ರದೇಶದಲ್ಲಿ ಹಸಿಕಡಲೆ ಫ‌ಸಲು ನಷ್ಟವಾಗಿದೆ. ಹಸಿಕಡಲೆ, ಕೊತ್ತಂಬರಿ, ಹುರುಳಿ ಇವು ಜಿಲ್ಲೆಯಲ್ಲಿ ಚಳಿಗಾಲದ ಬೆಳೆಗಳು, ಸತತ ಮಳೆಯಿಂದಾಗಿ ಈ ಫ‌ಸಲುಗಳು ಹಾನಿಗೀಡಾಗಿವೆ.

ನೀರಲ್ಲಿ ಮುಳುಗಿದ ಗೊಬ್ಬರ ಮೂಟೆ
ಚನ್ನಪಟ್ಟಣ: ರೈತರ ಬೆಳೆಗೆ ನೀರು ನುಗ್ಗಿ ಸಾಕಷ್ಟು ನಷ್ಟವುಂಟಾದರೆ, ನದಿಯಲ್ಲಿ ನೀರು ಹೆಚ್ಚಾಗಿ ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ, ಹಾಗೆಯೇ ಕೆರೆ ಕೋಡಿ ಬಳಿ ಭೂಕುಸಿತವುಂಟಾಗಿದ್ದು ಆತಂಕ ಸೃಷ್ಟಿಯಾಗಿದೆ, ಇನ್ನು ರೈತರು ಸಂಗ್ರಹಿಸಿಟ್ಟಿದ್ದ ರಾಗಿ, ಭತ್ತ, ತೆಂಗು ನೀರು ಪಾಲಾಗಿವೆ. ತಾಲೂಕಿನ ಕೆ.ಜಿ.ಮಹಡಿಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಜಮೀನುಗಳಿಗೆ ಮಳೆ ನೀರು ನುಗ್ಗಿದ್ದು, ಸಂಗ್ರಹಿಸಿಟ್ಟಿದ್ದ ತೆಂಗಿನಕಾಯಿ ಹಾಗೂ ರಸಗೊಬ್ಬರದ ಮೂಟೆಗಳು ನೀರು ಪಾಲಾಗಿದೆ. ವಿರೂಪಾಕ್ಷಿಪುರ ಹಾಗೂ ಬಿವಿ ಹಳ್ಳಿ ಕೆರೆ ತುಂಬಿ ಕೋಡಿ ಒಡೆದ ಪರಿಣಾಮ ಜಮೀನಿಗೆ ನೀರು ನುಗ್ಗಿ ರಾಗಿ, ತೆಂಗು, ಭತ್ತ ಸಂಪೂರ್ಣ ನಾಶವಾಗಿವೆ.

ತೊಗರಿಗೆ ಕಂಟಕ
ರಾಯಚೂರು: ಜಿಲ್ಲೆಯಲ್ಲಿ ಎಲ್ಲೆಡೆ ಭತ್ತ ಕಟಾವು ನಡೆದಿದ್ದರೆ, ಕೆಲವೆಡೆ ಇನ್ನೂ ಮಾಡಲಾಗುತ್ತಿದೆ. ಅದರ ಜತೆಗೆ ಹತ್ತಿ ಬಿಡಿಸಲಾಗುತ್ತಿದೆ. ಬಹುತೇಕ ಕಡೆ ಮೊದಲ ಹಂತದ ಹತ್ತಿ ಬಿಡಿಸಿದ್ದು, ಎರಡನೇ ಹಂತ ಬಿಡಿಸಲಾಗುತ್ತಿದೆ. ಇಂತಹ ವೇಳೆ ಮಳೆ ಸುರಿದ ಪರಿಣಾಮ ಹತ್ತಿ ಕೆಂಪಾಗಲಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿಯಲಿದೆ. ಕೂಲಿಯವರು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸಾಕಷ್ಟು ಜನ ಹತ್ತಿ ಬಿಡಿಸಿಲ್ಲ. ಮಂಗಳವಾರ ಮಧ್ಯಾಹ್ನ ಸುಮಾರು ಅರ್ಧ ಗಂಟೆ ಮಳೆ ಸುರಿದಿದ್ದು, ಹತ್ತಿ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.ವಾತಾವರಣ ತಂಪಾಗಿರುವ ಕಾರಣ ತೊಗರಿಗೆ ಹಸುರು ಹುಳು ಕಾಟ ಶುರುವಾಗಿದೆ. ಇದರಿಂದ ಮತ್ತೂಮ್ಮೆ ಕ್ರಿಮಿನಾಶಕ ಸಿಂಪಡಣೆ ಮಾಡ ಬೇಕು. ಈಗ ತೊಗರಿ ಕಾಯಿ ಕಟ್ಟಿದ್ದು, ಇಂತಹ ವೇಳೆ ಈ ಕೀಟಗಳು ತೊಗರಿಯನ್ನೆಲ್ಲ ತಿಂದು ಹಾಕುತ್ತವೆ. ಇನ್ನೂ ಹೆಚ್ಚಿನ ಸಮಸ್ಯೆ ಎದುರಾಗಿಲ್ಲ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರಿದರೆ ತೊಗರಿ ಬೆಳೆಗಾರರು ನಷ್ಟಕ್ಕೀಡಾಬೇಕಾಗುತ್ತದೆ.

ನಷ್ಟದ ಸುಳಿಗೆ ಸಿಲುಕಿದ ಕೃಷಿಕ
ಬಳ್ಳಾರಿ: ಪ್ರಸಕ್ತ ವರ್ಷ ಸಿರುಗುಪ್ಪ, ಹಗರಿ ಬೊಮ್ಮನಹಳ್ಳಿ, ಹಡಗಲಿ, ಹರಪನಹಳ್ಳಿ ತಾಲೂಕುಗಳಲ್ಲಿ ಭತ್ತ, ಕಬ್ಬು ಸೇರಿ ಒಟ್ಟು 1547.18 ಹೆಕ್ಟೇರ್‌ ಪ್ರದೇಶಗಳಲ್ಲಿ ಬೆಳೆ ನಷ್ಟವಾಗಿದೆ. ಬೆಳೆದು ನಿಂತ ಬೆಳೆ ಕೈಗೆಟುಕಲಿದೆ ಎನ್ನುವಷ್ಟರಲ್ಲಿ ಸುರಿದ ಅತಿವೃಷ್ಟಿಯಿಂದಾಗಿ ಬೆಳೆ ನಷ್ಟವಾಗಿದ್ದು, ರೈತರನ್ನು ನಷ್ಟದ ಸುಳಿಗೆ ಸಿಲುಕಿದೆ.

ಎಷ್ಟು ಹೆಕ್ಟೇರ್‌ ನಷ್ಟ?: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ 30,713 ಹೆಕ್ಟೇರ್‌ ಭತ್ತ, ಹಗರಿಬೊಮ್ಮನಹಳ್ಳಿ 11.1 ಹೆಕ್ಟೇರ್‌ ಭತ್ತ, 1.51 ಹೆಕ್ಟೇರ್‌ ಮೆಕ್ಕೆಜೋಳ, 1 ಹೆಕ್ಟೇರ್‌ ಸೂರ್ಯಕಾಂತಿ, 0.4 ಕಬ್ಬು ಸೇರಿ ಒಟ್ಟು 14.01 ಹೆಕ್ಟೇರ್‌, ಹಡಗಲಿ 685.34 ಹೆಕ್ಟೇರ್‌ ಭತ್ತ, 39 ಹೆಕ್ಟೇರ್‌ ಮೆಕ್ಕೆಜೋಳ, 2 ಹೆಕ್ಟೇರ್‌ ಕಬ್ಬು ಸೇರಿ ಒಟ್ಟು 725.34 ಹೆಕ್ಟೇರ್‌, ಹರಪನಹಳ್ಳಿ ತಾಲೂಕಲ್ಲಿ 12.4 ಹೆಕ್ಟೇರ್‌ ಭತ್ತ, 0.4 ಶೇಂಗಾ, 7.2 ಹೆ. ರಾಗಿ, 14.8 ಹೆ. ಕಬ್ಬು ಸೇರಿ ಒಟ್ಟು 1547.18 ಹೆಕ್ಟೇರ್‌ನಷ್ಟು ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.

ನೆಮ್ಮದಿ ಹಾಳು ಮಾಡಿದ ಮಳೆ
ಹಾವೇರಿ: ಮುಂಗಾರು, ಹಿಂಗಾರು ಅವಧಿ  ಮುಗಿದಿದ್ದರೂ ಅಕಾಲಿಕವಾಗಿ ಸುರಿಯುತ್ತಿರುವ ಮಳೆ ರೈತರ ನೆಮ್ಮದಿ ಹಾಳು ಮಾಡುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಅಪಾರ ನಷ್ಟ ಅನುಭವಿಸಿದ್ದ ರೈತರು ಪ್ರಸಕ್ತ ವರ್ಷ ಅಕಾಲಿಕ ಮಳೆಯಿಂದ ಮತ್ತೆ ಸಂಕಷ್ಟಕ್ಕೆ ತುತ್ತಾಗುವಂತೆ ಮಾಡಿದೆ. ಜಿಲ್ಲೆಯಲ್ಲಿ ಗೋವಿನಜೋಳ ಹೆಚ್ಚಾಗಿ ಬೆಳೆಯುತ್ತಿದ್ದು, ಈ ಸಲ 2 ಲಕÒ‌ ಹೆಕ್ಟೇರ್‌ನಲ್ಲಿ ಗೋವಿನಜೋಳ ಬಿತ್ತನೆ ಮಾಡಲಾಗಿತ್ತು.

4-5 ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿ: ಅಕಾಲಿಕ ಮಳೆ ಜಿಲ್ಲೆಯ ಕೆಲವೊಂದು ಪ್ರದೇಶ ಹೊರತುಪಡಿಸಿದರೆ ಅಷ್ಟಾಗಿ ರೈತರಿಗೆ ನಷ್ಟ ಉಂಟು ಮಾಡಿಲ್ಲ. ಜಿಲ್ಲೆಯ ತೋಟಗಾರಿಕೆ ಬೆಳೆಗಳಾದ ಬಾಳೆ, ಈರುಳ್ಳಿ ಸೇರಿ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ 4-5 ಹೆಕ್ಟೇರ್‌ ಪ್ರದೇಶದ ತೋಟಗಾರಿಕಾ ಬೆಳೆ ಹಾನಿಗಿಡಾಗಿದ್ದು, ಸುಮಾರು 1.20 ಲಕ್ಷ ರೂ. ಹಾನಿಯಾಗಿದೆ. ಜಿಲ್ಲೆಯ ರಾಣಿಬೆನ್ನೂರು ಭಾಗದಲ್ಲಿ ಸುರಿದ ಅಕಾಲಿಕ ಮಳೆಯಿಂದ ಸುಮಾರು 73 ಎಕ್ರೆ ಪ್ರದೇಶದ ಭತ್ತದ ಬೆಳೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.