Advertisement

ಅರೆ ಶತಮಾನ ಕಳೆದರೂ ಬಾಡದ ಬಯ್ಯಮಲ್ಲಿಗೆ

12:30 AM Mar 08, 2019 | |

ಹಾಸ್ಯ ಪ್ರಧಾನ ನಾಟಕಗಳದ್ದೇ ಪಾರಮ್ಯವಿರುವ ಈ ಕಾಲದಲ್ಲಿ ಸಾಂಸಾರಿಕ ಮತ್ತು ದುರಂತ ನಾಟಕಗಳಿಗೂ ಪ್ರೇಕ್ಷಕರಿದ್ದಾರೆ. ಇಂಥ ನಾಟಕಗಳನ್ನು ಪ್ರದರ್ಶಿಸುವವರ ಕೊರತೆ ಮಾತ್ರವೇ ಇತ್ತು ಹೊರತು ಪ್ರೇಕ್ಷಕರ ಕೊರತೆ ಇಲ್ಲ ಎಂಬುದಕ್ಕೆ ಬಯ್ಯಮಲ್ಲಿಗೆ ಸಾಕ್ಷಿಯಾಯಿತು.

Advertisement

ತುಳು ನಾಟಕ ಎಂದರೆ ನಗಿಸಲಷ್ಟೇ ಸೀಮಿತ ಎಂದು ಭಾವಿಸಲಾಗುವ ಈ ದಿನಗಳಲ್ಲಿ ಹಿಂದಿನ ತುಳು ನಾಟಕದ ಘನತೆಯನ್ನು ಎತ್ತಿ ತೋರಿಸುವಂಥ ಒಂದು ಪ್ರಬುದ್ಧ ಸಾಂಸಾರಿಕ ನಾಟಕವು ಇತ್ತೀಚೆಗೆ ರಂದು ವಿಶ್ವನಾಥ್‌ ಶೆಟ್ಟಿ ನಿರ್ದೇಶನದಲ್ಲಿ ದುಬಾಯಿಯ ಗಮ್ಮತ್‌ ಕಲಾವಿದರಿಂದ ದುಬಾಯಿಯಲ್ಲಿ ಜರಗಿತು. ಪರದೆ ನಾಟಕಗಳು ಬಹುತೇಕ ನೇಪಥ್ಯಕ್ಕೆ ಸರಿದಿರುವ ಈ ದಿನಗಳಲ್ಲಿ 54 ವರ್ಷಗಳ ಹಿಂದೆ ಡಾ| ಸಂಜೀವ ದಂಡೆಕೇರಿ ಅವರು ಬರೆದಿರುವ, ಆ ಬಳಿಕ ಸಿನಿಮಾ ಕೂಡ ಆಗಿರುವ ಬಯ್ಯಮಲ್ಲಿಗೆ ನಾಟಕವನ್ನು ಗಮ್ಮತ್‌ ಕಲಾವಿದರು ಕತೃ ಡಾ| ಸಂಜೀವ ದಂಡೆಕೇರಿ ಅವರ ಉಪಸ್ಥಿತಿಯಲ್ಲಿ ಪ್ರಬುದ್ಧವಾಗಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು. 

ದುಬಾಯಿ ಗಮ್ಮತ್‌ ಕಲಾವಿದೆರ್‌ ಸಂಸ್ಥೆಯ 8ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಒಂದು ಹೊಸ ಆಕರ್ಷಣೆ ಬೇಕು ಮತ್ತು ಹಿಂದಿನ ನಾಟಕದ ಭವ್ಯತೆಯನ್ನು ಈಗಿನ ತಲೆಮಾರಿಗೆ ತೋರಿಸಬೇಕು ಎಂಬ ಕಾರಣಕ್ಕಾಗಿ ಅರ್ಧ ಶತಮಾನದ ಹಿಂದಿನ ನಾಟಕವನ್ನು ಮತ್ತೆ ಅದೇ ಶೈಲಿಯಲ್ಲಿ ಪ್ರದರ್ಶಿಸಲಾಯಿತು. ಐದು ದಶಕಗಳ ಹಿಂದೆ ರಚಿತವಾದ ಕಾರಣದಿಂದ ಕೆಲವು ಅಂಶಗಳು ಈಗಿನ ದಿನಮಾನಕ್ಕೆ ಹೊಂದಿಕೊಳ್ಳುವುದಿಲ್ಲವಾದರೂ ಇಡೀ ನಾಟಕವು ಪ್ರೇಕ್ಷಕರನ್ನು ಸೆಳೆದು ನಿಲ್ಲಿಸುವಲ್ಲಿ ಸಫ‌ಲವಾಯಿತು. ಸುಮಾರು 3 ತಾಸು ಪ್ರದರ್ಶನಗೊಂಡ ಬಯ್ಯಮಲ್ಲಿಗೆಯಲ್ಲಿ ಕಥಾ ನಾಯಕಿ ಶಾಂತಿಯ ಪಾತ್ರದಲ್ಲಿ ದೀಪ್ತಿ ದಿನರಾಜ್‌ ಅವರು ಪ್ರೇಕ್ಷಕರ ಕಣ್ಣು ಒದ್ದೆಯಾಗುವಂತೆ ಮಾಡಿದರು. ರವಿಯ ಪಾತ್ರದಲ್ಲಿ ರೂಪೇಶ್‌ ಶೆಟ್ಟಿ ಅವರು ಉತ್ತಮವಾಗಿ ನಟಿಸಿದರು. ಯಾವ ಕಷ್ಟ ಬಂದರೂ ಹೇಗೆ ಎದೆಯೊಡ್ಡಿ ಎದುರಿಸಬೇಕು ಎಂಬುದನ್ನು ಅವರು ಮನೋಜ್ಞ ಅಭಿನಯ ಮತ್ತು ಅರಳು ಹುರಿದಂಥ ಮಾತುಗಾರಿಕೆಯಿಂದ ಸೊಗಸಾಗಿ ತೋರಿಸಿದರು. ಖಳನಾಯಕ ಸುಂದರನ ಪಾತ್ರದಲ್ಲಿ ಡೊನಾಲ್ಡ್‌ ಕೊರೆಯ ಅವರ ನಟನೆಯೂ ಅದ್ಭುತವಾಗಿತ್ತು. ಪ್ರತಿಯೊಂದು ಸಂಚು ಹೂಡಿದಾಗಲೂ ಮ್ಯಾನರಿಸಂ ಮೂಲಕ ಯಶಸ್ಸಿನ ಸಂಕೇತ ತೋರಿಸುತ್ತಿದ್ದ ಶೈಲಿ ಖುಷಿ ಕೊಟ್ಟಿತು. ಸಣ್ಣ ಪಾತ್ರವಾದರೂ ರಾಮಯ್ಯನ ಪಾತ್ರದಲ್ಲಿ ವಾಸು ಶೆಟ್ಟಿ ಅವರ ಅಭಿನಯ ಮನಸ್ಪರ್ಶಿಯಾಗಿತ್ತು. ಮಲಮಕ್ಕಳು ಶಾಂತಿ ಮತ್ತು ರವಿಗೆ ಕಾಟ ಕೊಡುವ ಸುಮತಿ ಪಾತ್ರದಲ್ಲಿ ಸುವರ್ಣ ಸತೀಶ್‌ ಪೂಜಾರಿ ಅವರು ಕೂಡ ಪಾತ್ರಕ್ಕೆ ಸೂಕ್ತ ನ್ಯಾಯ ನೀಡುವಲ್ಲಿ ಸಫ‌ಲರಾದರು. ವಿಶೇಷವಾಗಿ ಹಾಸ್ಯ ಇಲ್ಲದಿದ್ದರೂ ಹಿಂದಿನ ನಾಟಕದಲ್ಲಿರುತ್ತಿದ್ದ ಮೂರ್‍ನಾಲ್ಕು ಹಾಸ್ಯ ದೃಶ್ಯಗಳಿದ್ದವು. 

ಉಳಿದಂತೆ ಡಾ| ಮಧು ಪಾತ್ರದಲ್ಲಿ ಕಿರಣ್‌ ಶೆಟ್ಟಿ, ಗೋವಿಂದನಾಗಿ ರಮೇಶ್‌ ಸುವರ್ಣ, ಶಂಕ್ರಯ್ಯನಾಗಿ ಚಿದಾನಂದ ವಾಮಂಜೂರು, ಶೀಲಾ ಪಾತ್ರದಲ್ಲಿ ಶಶಿ ಶೆಟ್ಟಿ, ಹಾಗೂ ಆಶಾ, ಪ್ರಶಾಂತ್‌, ದೀಪಕ್‌ ಎಸ್‌.ಪಿ ಜೇಶ್‌ ಬಾಯರ್‌, ಸಂದೀಪ್‌ ಬರ್ಕೆ ಬೇರೆ ಬೇರೆ ಪಾತ್ರಗಳಲ್ಲಿ ಗಮನಸೆಳೆದರು. ಬಾಲ ಕಲಾವಿದರಾಗಿ ಸನ್ನಿಧಿ ಶೆಟ್ಟಿ ಮತ್ತು ದೀಪಕ್‌ ಪೂಜಾರಿ ಪಾತ್ರ ಗಮನಸೆಳೆಯಿತು. ನಾಟಕಕ್ಕೆ ಪೂರಕವಾದ ಕೆಲವು ಹಾಡುಗಳು ಕೂಡ ಮನಸ್ಪರ್ಶಿಯಾಗಿದ್ದವು. ನಾಟಕ ವೀಕ್ಷಿಸುತ್ತಿದ್ದಂತೆ ದಶಕಗಳ ಹಿಂದಿನ ಬಾಲ್ಯದ ನೆನಪಾಯಿತು. ಜಾತ್ರೆ, ಉತ್ಸವಗಳಲ್ಲಿ ಇಂಥದ್ದೇ ನಾಟಕಗಳು ಪ್ರದರ್ಶನವಾಗುತ್ತಿದ್ದ ಕಾಲಕ್ಕೆ ಮನಸ್ಸು ಹೊರಳಿತು. ಶುಭಕರ ಬೆಳಪು ಅವರ ಸಂಗೀತ ನಾಟಕದ ಯಶಸ್ಸಿನಲ್ಲಿ ವಿಶೇಷ ಕೊಡುಗೆ ನೀಡಿದೆ. 

ಗಮನಿಸಬೇಕಾದ ಮುಖ್ಯ ಅಂಶವೆಂದರೆ – ರಂಗಭೂಮಿ ಮತ್ತೆ ಹಿಂದಿನ ವೈಭವಕ್ಕೆ ಮರಳುವ ಸಿದ್ಧತೆಯಲ್ಲಿದೆಯೇ ಎಂಬುದು. ಹಾಸ್ಯ ಪ್ರಧಾನ ನಾಟಕಗಳದ್ದೇ ಪಾರಮ್ಯವಿರುವ ಈ ಕಾಲಘಟ್ಟದಲ್ಲಿ ಇಂಥ ಸಾಂಸಾರಿಕ ಮತ್ತು ದುರಂತ ಕಥೆಯ ನಾಟಕಗಳಿಗೂ ಪ್ರೇಕ್ಷಕರಿದ್ದಾರೆ ಮತ್ತು ಅದನ್ನು ಕುಟುಂಬ ಸಮೇತರಾಗಿ ವೀಕ್ಷಿಸಲು ಬಯಸುವ ಪ್ರೇಕ್ಷಕರ ಸಂಖ್ಯೆ ಈಗಲೂ ಇದೆ. ಇಂಥ ನಾಟಕಗಳನ್ನು ಪ್ರದರ್ಶಿಸುವವರ ಕೊರತೆ ಮಾತ್ರವೇ ಇತ್ತು ಹೊರತು ಪ್ರೇಕ್ಷಕರ ಕೊರತೆ ಇಲ್ಲ ಎಂಬುದಕ್ಕೆ ದುಬಾಯಿಯಲ್ಲಿ ಪ್ರದರ್ಶನಗೊಂಡ ಬಯ್ಯಮಲ್ಲಿಗೆ ಸಾಕ್ಷಿಯಾಯಿತು.

Advertisement

ಜಗನ್ನಾಥ್‌ ಶೆಟ್ಟಿ ಬಾಳ 

Advertisement

Udayavani is now on Telegram. Click here to join our channel and stay updated with the latest news.

Next