ಬೆಂಗಳೂರು: ಶ್ರೀಕಾರ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನಿಂದ ಯಾವುದೇ ಶ್ಯೂರಿಟಿ ಇಲ್ಲದೇ ಸಾಲ ಕೊಡಿಸುವುದಾಗಿ ಧರ್ಮಸ್ಥಳ ಸಂಘದ ಮುಖ್ಯಸ್ಥೆ ಸೇರಿ ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ನಂಬಿಸಿ ಹಣ ಪಡೆದು ವಂಚಿಸಿದ ತಾಯಿ-ಮಗಳು ಸೇರಿ ನಾಲ್ವರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಂಗೇರಿ ನಿವಾಸಿ ಶ್ವೇತಾ ಪಾಂಡ ಎಂಬವರು ನೀಡಿದ ದೂರಿನ ಮೇರೆಗೆ ಲೋಕ ಜನ ಶಕ್ತಿ ಪಕ್ಷದ ರೇಷ್ಮಾ ಬಾನು, ಅವರ ಪುತ್ರಿ ತೌಸಿಯಾ ಅಂಜುಂ ಮತ್ತು ಶ್ರೀಕಾರ್ ಸೊಸೈಟಿ ನಿರ್ದೇಶಕ ಆನಂದ್ ಹಾಗೂ ಇತರರ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಹೈಗ್ರೌಂಡ್ಸ್ ಠಾಣೆ ಪೊಲೀಸರು, ರೇಷ್ಮಾಬಾನುಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜತೆಗೆ ಆಕೆಯ ಪುತ್ರಿ ಸೇರಿ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ದೂರುದಾರ ಮಹಿಳೆ ಸುಮಾರು ವರ್ಷಗಳಿಂದ ಧರ್ಮಸ್ಥಳ ಸಂಘದ ಮುಖ್ಯಸ್ಥೆಯಾಗಿದ್ದು, ಈ ಮಧ್ಯೆ ನಾಲ್ಕು ತಿಂಗಳ ಹಿಂದೆ ಪರಿಚಯಸ್ಥರ ಮೂಲಕ ಕ್ವೀನ್ಸ್ ರಸ್ತೆಯಲ್ಲಿರುವ ಲೋಕಜನ ಶಕ್ತಿ ಪಕ್ಷದ ಕಚೇರಿಗೆ ಭೇಟಿ ನೀಡಿದ್ದರು. ಆಗ ರೇಷ್ಮಾ ಬಾನು, ಯಾವುದೇ ಶ್ಯೂರಿಟಿ ಇಲ್ಲದೇ ಶ್ರೀಕಾರ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನಿಂದ 50 ಸಾವಿರ ರೂ. ಸಾಲ ಕೊಡಿಸುತ್ತೇವೆ ಎಂದು ನಂಬಿಸಿದ್ದಾಳೆ. ಬಳಿಕ ಆಕೆಯ ಪುತ್ರಿ ತೌಸಿಯಾ ಅಂಜುಂ, 2500 ರೂ. ಪಾವತಿಸಿ ಬ್ಯಾಂಕ್ ಖಾತೆ ತೆರೆಯಬೇಕು ಎಂದಿದ್ದಾರೆ. ಅದರಂತೆ ದೂರುದಾರೆ ಸೊಸೈಟಿಯಲ್ಲಿ ಬ್ಯಾಂಕ್ ಖಾತೆ ತೆರೆದಿದ್ದು, ಬಳಿಕ ತಮ್ಮ ಧರ್ಮಸ್ಥಳ ಸಂಘದ 72 ಮಂದಿ ಮಹಿಳೆಯರಿಗೂ ವಿಷಯ ತಿಳಿಸಿದ್ದಾರೆ. ಆನಂತರ ಎಲ್ಲಾ ಮಹಿಳೆಯರು ಆರೋಪಿಗಳ ಸೂಚನೆಯಂತೆ ತಲಾ 2500 ರೂ. ಅನ್ನು ನಗದು ಮತ್ತು ಫೋನ್ ಪೇ ಮೂಲಕ ಹಣ ಪಡೆದುಕೊಂಡಿದ್ದಾರೆ. ನಂತರ ಕೆಲ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಅಲ್ಲದೆ, ದೂರುದಾರ ಮಹಿಳೆಯ ಸ್ನೇಹಿತರಾದ ತರಲುಮ್ ಸುಲ್ತಾನ್ ಹಾಗೂ ಹನಿಯಾ ಎಂಬವರ ಮೂಲಕ 24 ಮಹಿಳೆಯರಿಂದ ತಲಾ 3000 ರೂ. ನಂತೆ 72 ಸಾವಿರ ರೂ. ಪಡೆದುಕೊಂಡಿದ್ದಾರೆ. ಬಳಿಕ ರಿಜ್ವಾನಾ ಎಂಬವರ ಮೂಲಕ 40 ಮಹಿಳೆಯರಿಂದ ತಲಾ 5 ಸಾವಿರ ರೂ. ನಂತೆ 42 ಸಾವಿರ ರೂ. ಪಡೆದುಕೊಂಡಿದ್ದಾರೆ.
ಅಲ್ಲದೆ, ರೇಷ್ಮಾ ಬಾನು ಮತ್ತು ಪುತ್ರಿ ತೌಸಿಯಾ ಅಂಜುಂ 1.58 ಲಕ್ಷ ರೂ. ನಗದು ಪಡೆದುಕೊಂಡಿದ್ದಾರೆ. ಆದರೆ, 15 ದಿನಗಳಾದರೂ ಸಾಲ ಕೊಡಿಸಿಲ್ಲ. ಈ ಬಗ್ಗೆ ಕೇಳಿದಾಗ ಸರಿಯಾಗಿ ಸ್ಪಂದಿಸಲಿಲ್ಲ. ಬಳಿಕ ಎಚ್‌ವಿಎಸ್ ಕೋರ್ಟ್ ಕಟ್ಟಡದ 3ನೇ ಮಹಡಿಗೆ ಕಚೇರಿ ಸ್ಥಳಾಂತರ ಮಾಡಿರುವ ವಿಚಾರ ತಿಳಿದು ನ.9ರಂದು ಅಲ್ಲಿಗೆ ಹೋದಾಗಲೂ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಜತೆಗೆ ಯಾವುದೇ ಸಾಲ ಕೊಡಿಸುವುದಿಲ್ಲ ಎಂದು ಏರು ಧ್ವನಿಯಲ್ಲಿ ಬೆದರಿಕೆ ಹಾಕಿದ್ದಾರೆ.
ಆಗ ಕೂಡಲೇ ದೂರುದಾರ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಇತರೆ ಆರೋಪಿಗಳು ಪರಾರಿಯಾಗಿದ್ದು, ಸ್ಥಳದಲ್ಲಿದ್ದ ರೇಷ್ಮಾಬಾನುಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಲ ಕೊಡಿಸುವುದಾಗಿ ಸಾವಿರಾರು ಮಹಿಳೆಯರಿಂದ 4.52 ಲಕ್ಷ ರೂ. ವಂಚಿಸಿದ ರೇಷ್ಮಾಬಾನು ಮತ್ತು ಆಕೆಯ ಪುತ್ರಿ ತೌಸಿಯಾ ಅಂಜುಂ ಹಾಗೂ ಶ್ರೀಕಾರ್ ಸೊಸೈಟಿಯ ನಿರ್ದೇಶಕ ಆನಂದ್ ಹಾಗೂ ಇತರರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ದೂರು ನೀಡಲಾಗಿದೆ ಎಂದು ಪೊಲೀಸರು ಹೇಳಿದರು.
ವಂಚಿಸಿದ ಹಣ ಬ್ಯಾಂಕ್‌ನಲ್ಲಿ ಡೆಪಾಸಿಟ್:
ಪ್ರಕರಣದಲ್ಲಿ ಕಿಂಗ್‌ಪಿನ್ ರೇಷ್ಮಾಬಾನುಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಅಂದಾಜು ಒಂದೂವರೆ ಸಾವಿರಕ್ಕೂ ಅಧಿಕ ಮಂದಿಗೆ ವಂಚಿಸಿದ್ದಾರೆ ಎಂಬುದುಗೊತ್ತಾಗಿದೆ. ಇನ್ನು ಆರೋಪಿಗಳು ಸಾರ್ವಜನಿಕರಿಂದ ಪಡೆದುಕೊಂಡ ಲಕ್ಷಾಂತರ ರೂ. ಅನ್ನು ಬ್ಯಾಂಕ್‌ನಲ್ಲಿ ಡೆಪಾಸಿಟ್ ಇರಿಸಿದ್ದಾರೆ ಎಂಬುದು ಗೊತ್ತಾಗಿದೆ. ಇತರೆ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ಹೇಳಿಕೆ ದಾಖಲಿಸಿಕೊಳ್ಳಬೇಕಿದೆ ಎಂದು ಪೊಲೀಸರು ಹೇಳಿದರು.