Advertisement

ಕೊರಟಗೆರೆಯಲ್ಲಿ ಅವೈಜ್ಞಾನಿಕ ರಸ್ತೆ: ತಪ್ಪಿದ ಭಾರೀ ಅನಾಹುತ

08:17 PM Jul 27, 2022 | Team Udayavani |

ಕೊರಟಗೆರೆ: ಪಟ್ಟಣದ ಪ್ರಮುಖ ರಸ್ತೆಯಲ್ಲಿನ ಊರ್ಡಗೆರೆ ಕ್ರಾಸ್‌ನ ಮಾರ್ಗಗಳ ವೃತ್ತವು ಅವೈಜ್ಞಾನಿಕವಾಗಿದ್ದು  ಸುದೈವವಶಾತ್ ಸ್ವಲ್ಪದರಲ್ಲೇ ಇಲ್ಲಿ ನಡೆಯಬಹುದಾಗಿದ್ದ ಭಾರಿ ಅನಾಹುತ ಹಾಗೂ ಸಾವು ನೋವು ತಪ್ಪಿದೆ.

Advertisement

ಪಟ್ಟಣದ ಊರ್ಡಗೆರೆ ಕ್ರಾಸ್ ನಲ್ಲಿ ತುಮಕೂರು- ಬೆಂಗಳೂರು ಮಾರ್ಗ ರಸ್ತೆಗೆ ಕೊರಟಗೆರೆ ಪಟ್ಟಣದಿಂದ ಪಾವಗಡ-ಮಧುಗಿರಿ-ಗೌರಿಬಿದನೂರು ಮಾರ್ಗದ ರಸ್ತೆಯು ಸೇರುತ್ತವೆ, ಒಟ್ಟು ಮೂರು ರಸ್ತೆಗಳು ಕೂಡುವ ಈ ಸ್ಥಳದಲ್ಲಿ ಕನಕ ವೃತ್ತವಿದೆ, ಈ ಮಾರ್ಗವಾಗಿ ದಿನವೂ ನೂರಾರು ಪ್ರಯಾಣಿಕರ ವಾಹನ ಮತ್ತು ಇತರ ವಾಹನಗಳು ಸಂಚರಿಸುತ್ತಿರುತ್ತವೆ, ವಸ್ತು ಸ್ಥಿತಿ ಏನೆಂದರೆ ಪ್ರಯಾಣಿಸುವ ವಾಹನಗಳಿಗೆ ಈ ರಸ್ತೆಯು ಕೂಡಿಕೊಳ್ಳುವ ಜಾಗದಲ್ಲಿ ಸಂಚರಿಸುವ ವಾಹನಗಳಿಗೆ ಒಂದಕ್ಕೊಂದು ಕಾಣುವುದೇ ಇಲ್ಲ, ವೃತ್ತದ ಸ್ವಲ್ಪ ದೂರದಲ್ಲಿ ಬೆಂಗಳೂರು ರಸ್ತೆಗೆ ಉಬ್ಬನ್ನು ಹಾಕಿದೆಯಾದರೂ ಪ್ರಯೋಜನವಾಗುತ್ತಿಲ್ಲ, ಉಳಿದ ಎರಡು ರಸ್ತೆಗಳಿಗೆ ಉಬ್ಬುಗಳಿಲ್ಲ. ಇತರೆ ಊರುಗಳಿಂದ ಬರುವ ವಾಹನಗಳು ಕನಿಷ್ಠ 80 ರಿಂದ 100 ಕಿ.ಮೀ ವೇಗದಲ್ಲಿ ಚಲಿಸುತ್ತಿರುತ್ತವೆ. ಈ ಜಾಗದಲ್ಲಿ ಈಗಾಗಲೇ ಹಲವು ಅಪಘಾತಗಳು ಮತ್ತು ಪ್ರಾಣ ಹಾನಿಗಳು ಆಗಿವೆ.

ಆದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಈ ಮಾರ್ಗವಾಗಿ ದಿನವೂ ಪ್ರಯಾಣ ಮಾಡುತ್ತಿದ್ದರೂ ಗಂಭೀರವಾಗಿ ಪರಿಗಣಿಸಿಲ್ಲ.ಇದಕ್ಕೆ ಪೂರಕವಾದಂತೆ ಜುಲೈ 27 ಬುಧವಾರ ಬೆಳಗ್ಗೆ 9.45 ರ ಸಮಯದಲ್ಲಿ ಇದೇ ವೃತ್ತದಲ್ಲಿ ಬೆಂಗಳೂರು ಮಾರ್ಗದಿಂದ ಬಂದ ಸರ್ಕಾರಿ ಮತ್ತು ಖಾಸಗಿ ಪ್ರಯಾಣಿಕರ ವಾಹನಗಳು ಮತ್ತು ಕೊರಟಗೆರೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಪ್ರಯಾಣಿಕರ ವಾಹನ ಸೇರಿ ಮೂರು ಬಸ್‌ಗಳು ಕೆಲವೇ ಅಂತರದಲ್ಲಿ ನಿಂತು ದೊಡ್ಡ ಅಪಘಾತ ತಪ್ಪಿದೆ.

ಈ ಸಂಧರ್ಭದಲ್ಲಿ ತುಮಕೂರಿನಿಂದ ವಾಹನ ಬಂದಿದ್ದರೆ ದೇವರೇ ಗತಿ ಎನ್ನುವಂತಾಗಿತ್ತು. ಮುಂದೆ ಅಪಘಾತಗಳು ಆಗುವುದಿಲ್ಲ ಎನ್ನುವ ಯಾವ ಖಾತ್ರಿಯೂ ಇಲ್ಲ. ಆದ್ದರಿಂದ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಅವರೇ ಹೊಣೆಗಾರರಾಗಿರುತ್ತಾರೆ.

ಪ್ರಮುಖವಾಗಿ ಕೊರಟಗೆರೆಯ ಲೋಕೋಪಯೋಗಿ ಇಲಾಖೆ ಮತ್ತು ತುಮಕೂರಿನ ಸಾರಿಗೆ ಇಲಾಖೆಯವರ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಇನ್ನಾದರೂ ಈ ಎರಡೂ ಇಲಾಖಾ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಇವರ ವಿರುದ್ಧ ಕ್ರಮಕ್ಕೆ ಸಂಬಂಧ ಪಟ್ಟ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಬೇಕಾಗುವುದು ಎಂದು ಜನರು ಎಚ್ಚರಿಸಿದ್ದಾರೆ. ಈ ಸಂಬಂಧ ಕೊರಟಗೆರೆ ತಹಶೀಲ್ದಾರ್ ನಾಹಿದಾ ಜಮ್ ಜಮ್ ಹಾಗೂ ಸಿಪಿಐ ಸಿದ್ದರಾಮೇಶ್ವರ ರವರು ಗಮನ ಹರಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next