Advertisement

ರಸ್ತೆಗಿಂತ ಎತ್ತರವಾದ ತೋಡು; ಮಳೆ ನೀರು ನುಗ್ಗುವ ಆತಂಕ

11:28 AM May 24, 2022 | Team Udayavani |

ಕಾವೂರು: ಕಾವೂರಿನ ಮೈದಾನದ ಬಳಿಯ ಬಸ್‌ ನಿಲ್ದಾಣದಿಂದ ಕುಂಟಿಕಾನ ಹೋಗುವ ರಸ್ತೆ ಎಡಬದಿಗೆ ಮಾಡಿದ ಕಾಂಕ್ರೀಟ್‌ ತೋಡು ರಸ್ತೆಗಿಂತ ಎತ್ತರ ಮಾಡಲಾಗಿದೆ ಎಂಬ ಕಾರಣಕ್ಕಾಗಿ ಅಗೆಯಲಾಗುತ್ತಿದೆ.

Advertisement

ತೋಡು ಆಗಬೇಕಾದಲ್ಲಿ ಸ್ಥಳಾವಕಾಶವೇ ಇಲ್ಲ. ತೋಡ ಬೇಡವಾದ ಕಡೆ ತೋಡು ಮಾಡಿ ನೀರು ನಿಲ್ಲುವಂತೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಕಾಮಗಾರಿ ನಡೆಯುತ್ತಿರುವ ಸ್ಥಳದ ಉದ್ದಕ್ಕೂ ಅಂಗಡಿಗಳಿದ್ದು, ಸರಕು ಲೋಡ್‌ ಮಾಡಲು ವಾಹನ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ತೋಡು ಎತ್ತರವಾದ ಕಾರಣ ತೋಡಿನ ಸುತ್ತಮುತ್ತ ಹರಿಯುವ ಮಳೆ ನೀರು ಅಂಗಡಿಗಳಿಗೆ ನುಗ್ಗುವ ಆತಂಕವೂ ಎದುರಾಗಿದೆ. ಇತ್ತ ಕಾಂಕ್ರೀಟ್‌ ರಸ್ತೆಯ ಎರಡೂ ಬದಿಗಳಲ್ಲಿ ಫುಟ್‌ ಪಾತ್‌ ಕಾಮಗಾರಿ ಇನ್ನಷ್ಟೇ ಆಗಬೇಕಿದ್ದು, ಏಕಕಾಲಕ್ಕೆ ತೋಡು ಮತ್ತು ಅದರ ಮೇಲೆಯೇ ಇಂಟರ್‌ಲಾಕ್‌ ಅಳವಡಿಸಿ ಫುಟ್‌ಪಾತ್‌ ವ್ಯವಸ್ಥೆ ಆಗಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

ಸ್ಮಾರ್ಟ್‌ ಸಿಟಿ ಮಂಗಳೂರಿನಲ್ಲಿ ಸದ್ಬಳಕೆ ಆಗುವ ಬದಲು ಈ ರೀತಿ ಪೋಲಾಗುವುದು ಸರಿಯಲ್ಲ. ಸರಿಯಾದ ಯೋಜನೆಯೊಂದಿಗೆ ಮಾಡಿದಲ್ಲಿ ಹಣ ವ್ಯರ್ಥವಾಗುವುದು ಉಳಿಯುತ್ತದೆ ಎಂದು ಹೇಳುತ್ತಾರೆ ಸಾಮಾಜಿಕ ಕಾರ್ಯಕರ್ತೆ ಫೆಲ್ಸಿ ರೇಗೋ ಅವರು.

ಸಮರ್ಪಕ ಚರಂಡಿ ನಿರ್ಮಿಸಲು ಸೂಚನೆ

ಕಾವೂರು ಜಂಕ್ಷನ್‌ನಲ್ಲಿ ಮಳೆ ನೀರು ಹರಿಯುವ ತೋಡು ಅವೈಜ್ಞಾನಿಕವಾಗಿದೆ ಎಂಬ ದೂರು ನನಗೂ ಬಂದಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳಲ್ಲಿ ತಿಳಿಸಿ ಸೂಕ್ತವಾಗಿ ಮಾಡುವಂತೆ ಒತ್ತಾಯಿಸಿದ್ದೆ. ಮಳೆ ನೀರು ಹರಿಯುವಂತೆ ಸಮರ್ಪಕ ಚರಂಡಿ ಮಾಡುವಂತೆ ಸೂಚಿಸಿದ್ದೇನೆ. ಇಲ್ಲದೇ ಹೋದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಸೂಚಿಸಬೇಕಾಗುತ್ತದೆ. -ಸುಮಂಗಲಾ ರಾವ್‌, ಉಪಮೇಯರ್‌, ಸ್ಥಳೀಯ ಮನಪಾ ಪ್ರತಿನಿಧಿ

Advertisement

ಮರು ಕಾಮಗಾರಿ ನಡೆಸಿ

ಪ್ರೀಮಿಯರ್‌ ಎಫ್‌ಎಆರ್‌ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಭಾಗದಲ್ಲಿ ತೋಡು ಎತ್ತರವಾದ ಕಾರಣ ವ್ಯಾಪಾರಿಗಳಿಗೆ ಹಾಗೂ ವಾಹನ ಓಡಾಟಕ್ಕೆ ಅನಾನುಕೂಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಮರು ಕಾಮಗಾರಿಗೆ ಸೂಚಿಸಲಾಗಿದೆ. ಇದಕ್ಕೆ ಮತ್ತೆ ಪಾಲಿಕೆ ವೆಚ್ಚ ಭರಿಸುವುದಿಲ್ಲ. ಗುತ್ತಿಗೆದಾರರೇ ಹೊಣೆ. -ಅಬ್ದುಲ್‌ ಖಾದರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next