ಕೋಟ: ಚತುಷ್ಪಥ ಕಾಮಗಾರಿಯ ಅವೈಜ್ಞಾನಿಕತೆಯಿಂದಾಗಿ ಸಾಲಿಗ್ರಾಮ ಜಂಕ್ಷನ್ ಖಾಯಂ ಅಪಘಾತ ತಾಣವಾಗಿ ಗುರುತಿಸಿಕೊಂಡಿದ್ದು ದೈಹಿಕ ಹಾನಿ, ಪ್ರಾಣ ಹಾನಿ ಮಾಮೂಲಿಯಾಗಿದೆ. ಈ ಜಂಕ್ಷನ್‌ನ ಅಕ್ಕಪಕ್ಕದಲ್ಲಿ 2022 ಜನವರಿಯಿಂದ ಎಪ್ರಿಲ್ ತಿಂಗಳ ತನಕ ಹತ್ತು ಅಪಘಾತಗಳು ಸಂಭವಿಸಿದ್ದು, ಎರಡು ಜೀವ ಹಾನಿ, ಹನ್ನೆರಡು ಮಂದಿ ಗಾಯಾಳು ಗಳಾಗಿದ್ದಾರೆ. ಅದೇ ರೀತಿ ಹಿಂದಿನ ಎರಡು ವರ್ಷದಲ್ಲಿ ಸುಮಾರು 23ಕ್ಕೂ ಹೆಚ್ಚು ಅಪಘಾತಗಳು ನಡೆದು ಐದಕ್ಕೂ ಹೆಚ್ಚು ಪ್ರಾಣ ಹಾನಿಯಾಗಿದೆ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗದೆ ರಾಜಿಯಲ್ಲಿ ಇತ್ಯರ್ಥಗೊಂಡ ಪ್ರಕರಣಗಳು ಹಲವಾರಿವೆ.
ಮೂಲ ಯೋಜನೆ ಮೀರಿದ್ದರಿಂದ ಸಮಸ್ಯೆ
ಮೂಲ ಯೋಜನೆಯ ಪ್ರಕಾರ ಸಾಲಿಗ್ರಾಮ ಜಂಕ್ಷನ್‌ನ ಡಿವೈಡರ್ ಕಾರ್ಕಡ ತಿರುವಿನ ಬಳಿ ನಿರ್ಮಾಣವಾಗಬೇಕಿತ್ತು. ಅಲ್ಲಿ ಡಿವೈಡರ್ ನಿರ್ಮಾಣವಾಗಿದ್ದರೆ ಕಾರ್ಕಡ ಭಾಗದವರು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಸಮಸ್ಯೆ ದೂರವಾಗುತ್ತಿತ್ತು ಹಾಗೂ ಒಳಪೇಟೆಗೆ ಬರುವವರು ರಾಷ್ಟ್ರೀಯ ಹೆದ್ದಾರಿ ಮೂಲಕ ಸುತ್ತುಬಳಸಿ ಬರುವ ಅಗತ್ಯವಿರಲಿಲ್ಲ. ಮುಂದಾದರೂ ಈಗಿರುವ ಡಿವೈಡರ್ ಅನ್ನು ಕೇವಲ ಗುರುನರಸಿಂಹ ದೇಗುಲದ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿ ಬಳಸಿಕೊಂಡು ಕಾರ್ಕಡ ತಿರುವಿನ ಸಮೀಪ ಹೊಸ ಡಿವೈಡರ್ ನಿರ್ಮಿಸುವುದು ಸೂಕ್ತ ಎನ್ನುವ ಸಲಹೆ ಸಾರ್ವಜನಿಕ ವಲಯದಲ್ಲಿದೆ.
ಸರ್ವಿಸ್ ರಸ್ತೆಯಿಂದ ಸ್ವಲ್ಪ ರಿಲ್ಯಾಕ್ಸ್ ಮುಖ್ಯ ಪೇಟೆಗೆ ಸೇರುವ ಪ್ರಮುಖ ಸ್ಥಳದಲ್ಲೇ ಸಾಲಿಗ್ರಾಮ ಜಂಕ್ಷನ್ ಇದೆ. ಹೀಗಾಗಿ ಈ ಪ್ರದೇಶ ಯಾವಾಗಲೂ ಜನ ಮತ್ತು ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಇದೇ ಕಾರಣಕ್ಕೆ ಹೆಚ್ಚು ಅಪಘಾತಗಳು ನಡೆಯುತ್ತವೆ. ಇದೀಗ ಸರ್ವಿಸ್ ರಸ್ತೆ ಕಾಮಗಾರಿ ಆರಂಭಗೊಂಡಿರುವುದರಿಂದ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಸಿಗುವ ನಿರೀಕ್ಷೆ ಇದೆ.
ಚರ್ಚಿಸಿ ಮನವಿ
ಅವೈಜ್ಞಾನಿಕ ಡಿವೈಡರ್‌ನಿಂದ ಸಮಸ್ಯೆ ಸಾಲಿಗ್ರಾಮ ಜಂಕ್ಷನ್‌ನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಅಗತ್ಯ ವಿದ್ದರೆ ಮುಂದೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಯಾವ ರೀತಿ ಪರಿಹಾರ ಕ್ರಮ ಕೈಗೊಳ್ಳಬಹುದು ಎನ್ನುವುದನ್ನು ತೀರ್ಮಾನಿಸಿ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡ ಲಾಗುವುದು.
-ಸುಲತಾ ಹೆಗ್ಡೆ, ಅಧ್ಯಕ್ಷರು, ಸಾಲಿಗ್ರಾಮ ಪ.ಪಂ.
ಅವೈಜ್ಞಾನಿಕ ಡಿವೈಡರ್‌ನಿಂದ ಸಮಸ್ಯೆ
ಅವೈಜ್ಞಾನಿಕ ಡಿವೈಡರ್‌ನಿಂದಾಗಿ ಸಾಲಿಗ್ರಾಮದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಮೂಲ ಯೋಜನೆಯಂತೆ ಕಾರ್ಕಡ ತಿರುವಿನ ಸಮೀಪ ಡಿವೈಡರ್ ನಿರ್ಮಾಣಗೊಳಿಸಿ;ಈಗಿರುವ ಡಿವೈಡರ್ ದೇಗುಲದ ಧಾರ್ಮಿಕ ಕಾರ್ಯಕ್ಕೆ ಮೀಸಲಿರಿಸಿದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗಬಹುದು. ಮುಂದೆ ಹೆದ್ದಾರಿಯ ಹೆಚ್ಚುವರಿ ಕಾಮಗಾರಿಯ ಸಂದರ್ಭ ಇವೆಲ್ಲದಕ್ಕೆ ಒತ್ತು ನೀಡಬೇಕು.
-ರತ್ನಾ ನಾಗರಾಜ್ ಗಾಣಿಗ, ಪೇಟೆ ವಾರ್ಡ್ ಸದಸ್ಯರು