ಚಿಂಚೋಳಿ: ತಾಲೂಕಿನ ನಿಡಗುಂದಾ ಗ್ರಾಮದಲ್ಲಿ ನಡೆಯುತ್ತಿರುವ “ಮನೆ ಮನೆಗೆ ಗಂಗೆ ಶುದ್ಧ ನೀರು’ ಪೂರೈಕೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಪ್ರತಿಯೊಂದು ಮನೆಗಳಿಗೆ ಶುದ್ಧ ನೀರು ಪೂರೈಸಲು ಸೇಡಂ ಶಾಸಕ ರಾಜಕುಮಾರ ಪಾಟೀಲ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಎರಡು ಕೋಟಿ ರೂ. ಮಂಜೂರು ಮಾಡಿಸಿದ್ದು, ತಾಲೂಕು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಕಳೆದ ಮೂರು ತಿಂಗಳಿಂದ ಕಾಮಗಾರಿ ನಡೆಯುತ್ತಿದೆ.
ಗ್ರಾಮದ ಅನುದಾನಿತ ಶಾಲೆ ಹಿಂಭಾಗದಲ್ಲಿ ಒಂದು ಲಕ್ಷ ಗ್ಯಾಲನ್ ಜಲಸಂಗ್ರಹಗಾರ (ಟ್ಯಾಂಕ್) ನಿರ್ಮಿಸಲಾಗುತ್ತಿದೆ. ಆದರೆ ಟ್ಯಾಂಕ್ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಸಿಮೆಂಟ್, ಕಾಂಕ್ರೀಟ್, ಸ್ಟೀಲ್ ಬಳಕೆ ಸರಿಯಾಗಿಲ್ಲ ಎಂದು ಆರೋಪಿಸಿರುವ ಗ್ರಾಮದ ಪ್ರಜ್ಞಾವಂತರು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಪೈಪ್‌ಲೈನ್ ಹಾಕುವುದಕ್ಕಾಗಿ ಹಿಟಾಚಿ ಯಂತ್ರದ ಸಹಾಯದಿಂದ ಸಿಮೆಂಟ್ ರಸ್ತೆಗಳನ್ನು ಅಗೆದು ಹಾಕಿರುವುದರಿಂದ ರಸ್ತೆಯಲ್ಲಿ ಜನರು ನಡೆದಾಡಲೂ ಆಗದ ಸ್ಥಿತಿಯಿದೆ. ಅನೇಕರು ಕತ್ತಲಿನಲ್ಲಿ ಕಲ್ಲುಗಳ ಮೇಲೆ ಬಿದ್ದು ಗಾಯ ಮಾಡಿಕೊಂಡಿದ್ದೂ ಇದೆ. ಹಿಟಾಚಿಯಿಂದ ಕೆಲಸ ನಡೆಯುತ್ತಿರುವುದರಿಂದ ರಸ್ತೆ ಪಕ್ಕದ ಹಳೆಯ ಮನೆಗಳ ಗೋಡೆಗಳಲ್ಲಿ ಬಿರುಕು ಉಂಟಾಗಿವೆ ಎಂದು ಗ್ರಾಮಸ್ಥರಾದ ವಿಲಾಸ ಗೌತಮ್, ರೊಂಪಳ್ಳಿ ಬಸವರಾಜ, ಭೀಮಯ್ಯ ಕುಂಬಾರ ಅವರು ಕಳೆದ ಮೇ27ರಂದು “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಗ್ರಾಮ ವಾಸ್ತವ್ಯದಲ್ಲಿ ಭಾಗವಹಿಸಿದ್ದ ಸೇಡಂ ಶಾಸಕ ರಾಜಕುಮಾರ ಪಾಟೀಲ ಅವರ ಗಮನಕ್ಕೆ ತಂದಿದ್ದಾರೆ.
ಹಿಟಾಚಿ ಯಂತ್ರ ಬಳಸಿ ಕೆಲಸ ನಡೆಸುತ್ತಿರುವುದರಿಂದ ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ. ಬಡವರ ಮನೆಗಳು ಹಾಳಾಗುತ್ತಿವೆ ಎಂದು ಗ್ರಾಮದ ನಿವಾಸಿ ಬಸವರಾಜ ರೊಂಪಳ್ಳಿ ಅಳಲು ತೋಡಿಕೊಂಡಿದ್ದಾರೆ. ಗ್ರಾಮದಲ್ಲಿ ಎಲ್ಲ ಬಡಾವಣೆಯಲ್ಲಿಯೂ ನಲ್ಲಿ ನೀರಿನ ವ್ಯವಸ್ಥೆ ಇದೆ. ಗ್ರಾಮ ಪಂಚಾಯಿತಿ ವತಿಯಿಂದ ಪೈಪ್‌ಲೈನ್ ಮತ್ತು ಬೋರವೆಲ್ ನಿರ್ವಹಣೆ ಸರಿಯಾಗಿ ಇಲ್ಲದ ಕಾರಣ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗಿದೆ. ಜಲ ಜೀವನ ಮಿಷನ್ ಯೋಜನೆಯಿಂದ ಯಾವುದೇ ಉಪಯೋಗ ಆಗಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜಲಜೀವನ ಮಿಷನ್ ಕಾಮಗಾರಿಗಾಗಿ ರಸ್ತೆ ಕಟ್ ಮಾಡಿ ಎರಡು ಫೀಟ್ ತಗ್ಗು ತೋಡಿ ಪೈಪ್‌ಲೈನ್ ಹಾಕಲಾಗುತ್ತಿದೆ. ಜನರ ಮನೆಗಳಿಗೆ ನಳಗಳ ಮೂಲಕ ನೀರು ಸರಬರಾಜು ಮಾಡುವ ಸಂದರ್ಭದಲ್ಲಿ ನೀರು ಸೋರಿಕೆ ಮತ್ತು ವಾಲ್‌ಚೆಕ್ ಮಾಡಲಾಗುತ್ತದೆ. ಎಸ್‌ಡಿಪಿ ಪೈಪ್‌ಗ್ಳಲ್ಲಿ ಮತ್ತು ವಾಲ್ ಸೋರಿಕೆ ಆಗದೇ ಇದ್ದಲ್ಲಿ ಎಲ್ಲ ಕಡೆ ತಗ್ಗುಗಳನ್ನು ಮಣ್ಣಿನಿಂದ ಮುಚ್ಚಿ ಹಾಕಿ, ನಂತರ ಅದರ ಮೇಲೆ ಸಿಮೆಂಟ್ ರಸ್ತೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
-ಪ್ರಕಾಶ ಕುಲಕರ್ಣಿ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ, ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ
ಜಲ ಜೀವನ ಮಿಷನ್ ಕಾಮಗಾರಿ ಸಂಪೂರ್ಣ ವಿಫಲವಾಗಿದೆ. ಈ ಕಾಮಗಾರಿ ಅವೈಜ್ಞಾನಿಕವಾಗಿದೆ. ಇದರಿಂದ ರಸ್ತೆಗಳೆಲ್ಲವೂ ಹಾಳಾಗಿವೆ. ಕೂಡಲೇ ಗುಣಮಟ್ಟದ ಕಾಮಗಾರಿ ಕೈಗೊಂಡು, ಸಮರ್ಪಕ ರಸ್ತೆ ನಿರ್ಮಿಸಿಕೊಡಬೇಕು.
-ವಿಲಾಸ ಗೌತಮ್, ಗ್ರಾಮಸ್ಥ, ನಿಡಗುಂದಾ
-ಶಾಮರಾವ ಚಿಂಚೋಳಿ