ನಿಜ ಹೇಳ್ಬೇಕು ಅಂದ್ರೆ, ಈಗ ನೀನು ನೆನಪಿಗಿಂತ ಕನಸಿನಲ್ಲೇ ಹೆಚ್ಚು ಜೀವಂತ. ನಿನ್ನ ನೆನಪಾಗದೆ ಇರಲಿ ಅಂತ ಪರ್ಸ್‌ನಲ್ಲಿದ್ದ ಒಂದೇ ಒಂದು ಫೋಟೋ ಕೂಡ ಸುಟ್ಟು ಹಾಕಿದ್ದೀನಿ. ಆದರೆ, ನಿನ್ನನ್ನು ಮರೆಯೋ ಆಟದಲ್ಲಿ ಸೋತು ಸುಣ್ಣವಾಗಿದೀನಿ.
ಕನಸುಗಳು ನನಸಾದಾಗ ಆಗೋ ಖುಷಿ ಅಷ್ಟಿಷ್ಟಲ್ಲ. ಅದೇ ಕನಸುಗಳು ನುಚ್ಚುನೂರಾದಾಗ ಅಷ್ಟೇ ನೋವಾಗುತ್ತೆ. ನಾನೂ ಕೂಡ ಕನಸು ಕಂಡೆ, ಅದು ನನಸಾಗುತ್ತೋ ಇಲ್ಲವೋ ಗೊತ್ತಿಲ್ಲದೆ ಮತ್ತೆ ಮತ್ತೆ ಅದೇ ಕನಸಿಗೆ ಹಂಬಲಿಸ್ತಾ ಇದ್ದೆ. ಆದರೆ ನನಗೆ ಈಗ ಅರಿವಾಗ್ತಾ ಇದೆ, ಕನಸುಗಳೇ ಬೇರೆ, ವಾಸ್ತವವೇ ಬೇರೆ ಅಂತ. ಕನಸು ಅನ್ನೋ ಹುಚ್ಚು ಕುದುರೆಯ ಬೆನ್ನೇರಿ ತುಂಬಾನೇ ದೂರ ಸಾಗಿದ್ದೆ. ನೀನು ನನ್ನ ಜೊತೆಯಲ್ಲಿಯೇ ಇದ್ದೀಯಾ ಅಂದುಕೊಂಡೇ ಬದುಕುತ್ತಿದ್ದೆ. ಈ ಭ್ರಮೆಯ ಜೊತೆಯಲ್ಲೇ ಪಯಣ ಸಾಗ್ತಾ ಇತ್ತು. ಆದರೆ ನೀನು ಜೊತೆ ಇಲ್ಲ ಅನ್ನೋ ಸತ್ಯ ತಿಳಿದ ಮೇಲೆ ಈ ಪಯಣವೇ ವ್ಯರ್ಥ ಅನಿಸತೊಡಗಿದೆ. ಕನಸಿನ ಪಯಣವನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದೇನೆ. ಮರಳಿ ಬರುವಾಗ ದಾರಿಗೂ ಕೂಡ ನನ್ನ ಮೇಲೆ ಮುನಿಸು ಬಂದಿದೆ. ಬರುವ ದಾರಿ ಮರೆತಂತಾಗಿದೆ.
ಹೇಳು, ಯಾಕೆ ನನ್ನನ್ನು ದೂರವಿರಿಸುವ ನಿರ್ಧಾರ ಕೈಗೊಂಡೆ? ಮನೆಯಲ್ಲಿ ತಕರಾರು ತೆಗೆದಿದ್ದರಾ? ಭವಿಷ್ಯದ ಬಗ್ಗೆ ಹೆದರಿಕೆ ಇತ್ತಾ? ಏನಾದರೂ ತೊಂದರೆ ಆಗಿತ್ತಾ? ಇಲ್ಲಾ ಬೇರೆ ಯಾರಾದರೂ ಗುಟ್ಟಾಗಿ ನಿನ್ನ ಮನಸಲ್ಲಿ ಮನೆ ಕಟ್ಟಿದರಾ? ಛೇ ಛೇ ಹಾಗಾಗಿರಲಿಕ್ಕಿಲ್ಲ. ಇದೇ ನನ್ನ ದೊಡ್ಡ ತೊಂದರೆ: ನನ್ನಷ್ಟಕ್ಕೆ ನಾನೇ ಏನೇನೋ ಯೋಚನೆ ಮಾಡ್ತೀನಿ. ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡೋ ಜಾಯಮಾನ ನನ್ನದಲ್ಲ ನೋಡು. ನಿನ್ನ ಬಗ್ಗೆಯೂ ಯಾರ್ಯಾರೋ, ಏನೇನೋ ಹೇಳ್ತಿದಾರೆ. ಆದರೆ, ಅದರ ಬಗ್ಗೆ ನನಗೆ ಯೋಚನೆಯೇ ಇಲ್ಲ. ಯಾಕೆಂದರೆ ನನಗೆ ನಿನ್ನ ಮೇಲೆ ಮೊದಲಿನ ಹಾಗೆ, ಅದೇ ಪ್ರೀತಿ, ನಂಬಿಕೆ ಇದೆ. ಅದು ಒಂಚೂರೂ ಕಡಿಮೆ ಆಗಲ್ಲ. ಅದರ ಬಗ್ಗೆ ನಿನಗೆ ಸಂಶಯ ಬೇಡ.
ಈಗಲೂ ಸಹ ಕನಸಿನಲ್ಲೇ ನಿನ್ನ ಜೊತೆ ಮಾತು, ಮೌನ, ಮುನಿಸು, ಓಡಾಟ, ಚೆಲ್ಲಾಟ ಇತ್ಯಾದಿ. ನಿಜ ಹೇಳ್ಬೇಕು ಅಂದ್ರೆ, ಈಗ ನೀನು ನೆನಪಿಗಿಂತ ಕನಸಿನಲ್ಲೇ ಹೆಚ್ಚು ಜೀವಂತ. ನಿನ್ನ ನೆನಪಾಗದೆ ಇರಲಿ ಅಂತ ಪರ್ಸ್‌ನಲ್ಲಿದ್ದ ಒಂದೇ ಒಂದು ಫೋಟೋ ಕೂಡ ಸುಟ್ಟು ಹಾಕಿದ್ದೀನಿ. ಆದರೆ, ನಿನ್ನನ್ನು ಮರೆಯೋ ಆಟದಲ್ಲಿ ಸೋತು ಸುಣ್ಣವಾಗಿದೀನಿ. ನೀನು ನನ್ನ ಮನದಲ್ಲಿ ಎಂದೂ ಅಳಿಸದ ಹಚ್ಚೆಯಾಗಿದೀಯಾ.
ಸಮಯ ಎಲ್ಲವನ್ನೂ ಅಳಿಸುತ್ತೆ. ದಿನಗಳೆದಂತೆ ಎಲ್ಲವನ್ನೂ ಮರೆಸುತ್ತೆ ಅಂತಾರೆ. ಆದರೆ, ನಿನ್ನ ನೆನಪು ಮಾತ್ರ ದಿನಗಳೆದಂತೆ ಇನ್ನೂ ಸ್ಪಷ್ಟವಾಗ್ತಾ ಇದೆ. ಮನಸಲ್ಲಿ ನಿನ್ನ ಹಚ್ಚೆ ಹಾಕಿಸಿಕೊಂಡಿರುವ ಪ್ರೇಮಿ ಹುಚ್ಚನಾಗುವ ಮುನ್ನ ಬಂದುಬಿಡು. ಕನಸಿನ ಲೋಕದಲ್ಲಿ ಸಂಚರಿಸ್ತಿರೋ ನನ್ನನ್ನು ವಾಸ್ತವ ಪ್ರಪಂಚಕ್ಕೆ ಮರುಪರಿಚಯ ಮಾಡಿಸು. ನಾನೇ ನಿನ್ನೆಡೆಗೆ ಬರಬೇಕೆಂದರೆ, ಎಲ್ಲ ಬಾಗಿಲುಗಳೂ ಮುಚ್ಚಿವೆ. ಆ ಬಾಗಿಲುಗಳ ಬೀಗದ ಕೈ ಎಲ್ಲಿದೆ ಅಂತಾದರೂ ಹೇಳು?
ಈರಯ್ಯ ಉಡೇಜಲ್ಲಿ