Advertisement

ಸ್ಪಂದಿಸದ ಕಂದಾಯ ಅಧಿಕಾರಿಗಳು

12:41 PM Jul 04, 2017 | |

ಎಚ್‌.ಡಿ.ಕೋಟೆ: ಸರ್ಕಾರದ ನಿಯಮದಂತೆ ಓರ್ವ ಅಧಿಕಾರಿ ಅಥವಾ ಯಾವುದೇ ನೌಕರ ಕನಿಷ್ಠ ಮೂರುದಿಂದ ಗರಿಷ್ಠ ಐದು ವರ್ಷ ಕಾಲ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ. ಆದರೆ ತಾಲೂಕಿನ ಕಂದಾಯ ಇಲಾಖೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕುರ್ಚಿಗೆ ಅಂಟಿಕೊಂಡಂತೆ ಒಂದೇ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸುತ್ತಿರುವುದು ತಿಳಿದು ಬಂದಿದೆ.

Advertisement

ಇದರಿಂದಾಗಿ ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಎಚ್‌.ಡಿ.ಕೋಟೆ ಕ್ಷೇತ್ರದಲ್ಲಿ ಸರ್ಕಾರದ ನಿಯಮಗಳು ಸಮರ್ಪಕವಾಗಿ ಜಾರಿಯಾಗದೆ, ಇಲ್ಲಿನ ಕಂದಾಯ ಅಧಿಕಾರಿಗಳು ಮತ್ತು ನೌಕರರ ಅಕ್ರಮಕ್ಕೆ ತಾಲೂಕಿನ ರೈತರು, ಬಡವರು ತತ್ತರಿಸಿ ಹೋಗಿದ್ದಾರೆ.

ತಾಲೂಕಿನಲ್ಲಿ ಯಾವುದೇ ಕಾರ್ಖಾನೆ, ವಿವಿಧ ಕಂಪನಿಗಳು ಇಲ್ಲದಿರುವುದರಿಂದ ಎಲ್ಲರೂ ಕೃಷಿಯನ್ನೇ ಅವಲಂಬಿಸಿರುವುದರಿಂದ ತಮ್ಮ ಭೂಮಿಯ ಕೆಲಸ ಕಾರ್ಯ ಮಾಡಿಸಿಕೊಳ್ಳಲು ನಿತ್ಯವೂ ಇಲ್ಲಿನ ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರ ಬಳಿ ಅಲೆದಾಡಿದರೂ ಕೆಲಸಗಳು ಆಗುವುದು ಕಷ್ಟಕರವಾಗುತ್ತಿದೆ.

ತಾಲೂಕಿನ ಕಂದಾಯ ಇಲಾಖೆಯಲ್ಲಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಂದಾಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ಮತ್ತು ಆಡಳಿತ ವರ್ಗದ ಕೆಲ ಅಧಿಕಾರಿಗಳು ಶ್ರೀಮಂತರು ಮತ್ತು ಪ್ರಭಾವಿಗಳಿಗೆ ಮಾತ್ರ ಆದ್ಯತೆ ನೀಡುತ್ತಿರುವುದರಿಂದ ಇಂಥ ಸಮಸ್ಯೆ ಉದ್ಬವಾಗಿದ್ದು, ಉಳ್ಳವರ ಪರ ಕೆಲಸ ಮಾಡುವರೇ ಅಧಿಕಾರಿಗಳು ಇಲ್ಲಿ ಭೂ ಸುಧಾರಣೆ ಕಾಯ್ದೆ ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಅಕ್ರಮ ಖಾತೆಗಳನ್ನು ಮಾಡಿರುವುದು ಉಪವಿಭಾಗಾಧಿಕಾ ರಿಗಳ ಪ್ರಾಥಮಿಕ ತನಿಖೆಯಲ್ಲೇ ಕಂಡು ಬಂದು ಈ ಅಧಿಕಾರಿಗಳಿಗೆ ಷೋಕಾಸ್‌ ನೋಟಿಸ್‌ ಕೂಡ ನೀಡಿರುವುದನ್ನು ಸ್ಮರಿಸಬಹುದು.

ಜೊತೆಗೆ ಇಲ್ಲಿನ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ಸೇರಿಕೊಂಡು ಕಬಿನಿ ಹಿನ್ನೀರಿನ ಮುಳುಗಡೆ ಪ್ರದೇಶಗಳು ಕೆಲ ಪ್ರಭಾವಿ ವ್ಯಕ್ತಿಗಳ ಹಾಗೂ ಖಾಸಗಿ ರೆಸಾರ್ಟ್‌ ಮಾಲೀಕರ ಪಾಲಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಕಂಡು ಬಂದಿದ್ದರೂ ಯಾರ ವಿರುದ್ಧವು ಕ್ರಮ ಕೈಗೊಳ್ಳಲು ಯಾರಿಂದಲು ಸಾಧ್ಯವಾಗುತ್ತಿಲ್ಲ.

Advertisement

ಮೇಲಾಧಿಕಾರಿಗಳು ತಪಾಸಣೆಗೆ ತಾಲೂಕಿಗೆ ಬಂದ ವೇಳೆ ಅಧಿಕಾರಿಗಳನ್ನೆಲ್ಲಾ ಈ ಅಕ್ರಮ ರೆಸಾರ್ಟ್‌ಗಳಿಗೆ ಕರೆದೊಯ್ದು ಪಾರ್ಟಿ ಮಾಡಿಸಿ ಜೇಬು ತುಂಬ ಹಣವನ್ನು ಕೊಡಿಸಿ ತಮ್ಮ ಬುಟ್ಟಿಗೆ ಹಾಕಿಕೊಂಡು ಮೇಲಾಧಿಕಾರಿಗಳನ್ನು ಬಳಸಿಕೊಂಡು ಮತ್ತಷ್ಟು ಅಕ್ರಮ ಖಾತೆಗಳನ್ನು ಮಾಡುತ್ತಿದ್ದಾರೆ.

ಈ ವಿಚಾರವಾಗಿ ಇಲ್ಲಿನ ಮಾಧ್ಯಮ ಪ್ರತಿನಿಧಿಗಳು ಹಲವು ಬಾರಿ ಈ ಅಕ್ರಮ ಖಾತೆಗಳ ಕುರಿತು ಸುದ್ದಿ ಪ್ರಕಟವಾದರೂ ಇದುವರೆಗೂ ಕಂದಾಯ ಇಲಾಖೆ ಮೇಲಾಧಿಕಾರಿಗಳಾಗಲಿ ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ ಯಾವುದೇ ಕ್ರಮಕೈಗೊಂಡಿಲ್ಲ, ಹಾಗಾಗಿ ಸಾರ್ವಜನಿಕ ವಲಯದಲ್ಲೂ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಒಟ್ಟಿನಲ್ಲಿ ಸರ್ಕಾರದ ನಿಯಮಗಳು ಯಾವುದೇ ಕ್ಷೇತ್ರದಲ್ಲಾಗಲೀ ಯಾವುದೇ ವಿಭಾಗದಲ್ಲಾಗಲೀ ಸಕ್ರಿಯವಾಗಿ ಜಾರಿಗೊಂಡಾಗ ಮಾತ್ರ ಇಂತಹ ಯಾವುದೇ ಸಮಸ್ಯೆ ಮತ್ತು ಅಕ್ರಮಗಳು ಅಧಿಕಾರಿಗಳಿಂದ ನಡೆಯದಿರಲು ಸಾಧ್ಯವಾಗಲಿದೆ. ಆದ್ದರಿಂದ ತಾಲೂಕಿನ ಸಂಸದ ಆರ್‌.ಧೃವನಾರಾಯಣ್‌ ಹಾಗೂ ಕ್ಷೇತ್ರದ ಶಾಸಕ ಎಸ್‌.ಚಿಕ್ಕಮಾದು ಇತ್ತ ಗಮನಹರಿಸಬೇಕಾಗಿರುವುದು ಅನಿವಾರ್ಯವಾಗಿದೆ.

ಷೋಕಾಸ್‌ ನೋಟಿಸ್‌
ಇತ್ತೀಚಿಗೆ ಭೂ ಸುಧಾರಣೆ ಕಾಯ್ದೆಯನ್ನು 69ಎ ಹಾಗೂ 69ಬಿ ಉಲ್ಲಂಘಸಿರುವುದರಿಂದ ನಾಲ್ಕು ಮಂದಿ ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರು ಸೇರಿ 35ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ನೌಕರರಿಗೆ ಹುಣಸೂರು ಉಪವಿಭಾಗಾಧಿಕಾರಿ ಡಾ.ಸೌಜನ್ಯ ಷೋಕಾಸ್‌ ನೋಟಿಸ್‌ ನೀಡುವ ಮೂಲಕ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ.

* ನಿಂಗಣ್ಣಕೋಟೆ

Advertisement

Udayavani is now on Telegram. Click here to join our channel and stay updated with the latest news.

Next