Advertisement

ಇನ್ನೂ ಪಾಲನೆಯಾಗದ ಆದೇಶ: ಬಗೆಹರಿಯದ ರೈಲು ಪ್ಲಾಟ್‌ಫಾರಂ-ರೈಲುಗಳ ನಡುವಿನ ಅಂತರ ಸಮಸ್ಯೆ

12:20 AM May 18, 2022 | Team Udayavani |

ಉಡುಪಿ: ದೇಶದಲ್ಲಿರುವ ಎಲ್ಲ ರೈಲ್ವೇ ಪ್ಲಾಟ್‌ಫಾರಂ ಮತ್ತು ರೈಲುಗಳ ನಡುವಣ ಅಂತರವನ್ನು ಕಡಿಮೆ ಮಾಡುವಂತೆ ಮುಂಬಯಿ ಹೈಕೋರ್ಟ್‌ 2019ರಲ್ಲಿ ಆದೇಶಿಸಿದ್ದರೂ ಮುಂಬಯಿ ಹೊರತುಪಡಿಸಿ ಉಳಿದೆಡೆ ಇನ್ನೂ ಅನುಷ್ಠಾನವಾಗಲಿಲ್ಲ.

Advertisement

ಕಾಲೇಜು ವಿದ್ಯಾರ್ಥಿನಿ ಮೊನಿಕಾ ಮೋರೆ ಹಾಗೂ ಎಲೆಕ್ಟ್ರಿಶಿಯನ್‌ ತನ್ವಿರ್‌ ಅವರು ರೈಲು ಮತ್ತು ಪ್ಲಾಟ್‌ಫಾರಂ ನಡುವಿನ ಅಂತರಕ್ಕೆ ಬಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿ

ಸಿದ ಮುಂಬಯಿ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಾಧೀಶ ಮೋಹಿತ್‌ ಶಾ ಮತ್ತು ನ್ಯಾಯಾಧೀಶ ಎಂ.ಎಸ್‌. ಸಂಕ್ಲೇಚಾ ಸ್ವಯಂ ದಾವೆ ದಾಖಲಿಸಿ ವಿಚಾರಣೆ ನಡೆಸಿ ತೀರ್ಪು ನೀಡಿದ್ದರು. 760 ಎಂಎಂನಿಂದ 840 ಎಂಎಂ ಇರುವ ಪ್ಲಾಟ್‌ಫಾರಂ ಎತ್ತರವನ್ನು 900ರಿಂದ 920 ಎಂಎಂಗೆ ಹೆಚ್ಚಿಸುವಂತೆ ತೀರ್ಪಿನಲ್ಲಿ ಸೂಚಿಸಲಾಗಿದೆ. ಮುಂಬಯಿಯಲ್ಲಿ ಮಾತ್ರ ಇದು ಜಾರಿಯಾಗಿದೆ.

17 ವಿಭಾಗಗಳಲ್ಲಿ ಜಾರಿಯಾಗಿಲ್ಲ
ಕೊಂಕಣ ರೈಲ್ವೇ ಸೇರಿದಂತೆ ದೇಶದ 17 ರೈಲ್ವೇ ವಿಭಾಗಗಳಲ್ಲಿ ಈ ತೀರ್ಪು ಜಾರಿಗೊಳ್ಳಬೇಕಾಗಿದೆ. ಮಂಗಳೂರು ಸೆಂಟ್ರಲ್‌ನಿಂದ ಕೊಂಕಣದ ರೋಹಾ ತನಕ ಕೊಂಕಣ ರೈಲ್ವೇಯಲ್ಲಿರುವ ಎಲ್ಲ ಪ್ಲಾಟ್‌ಫಾರಂಗಳ ಅಂತರ ತೀರಾ ಹೆಚ್ಚಾಗಿದ್ದು ಹಲವಾರು ಮಂದಿ ಅಲ್ಲಿ ಬೀಳುತ್ತಿದ್ದಾರೆ. ರೈಲಿನ ಬಾಗಿಲಿನ ಹೊರಗಡೆ ಇರುವ ಎರಡು ಕಬ್ಬಿಣದ ಹಿಡಿಕೆಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಎಕ್ಸ್‌ಪ್ರೆಸ್‌ ರೈಲಿಗಿರುವ ಕೇವಲ ಎರಡು ನಿಮಿಷಗಳ ಸಮಯಾವಕಾಶದಲ್ಲಿ ಕಬ್ಬಿಣದ ಏಣಿಯ 3 ಮೆಟ್ಟಿಲುಗಳನ್ನು ಲಗೇಜ್‌ ಸಹಿತ ಏರುವುದು ಕೂಡ ಬಲು ಕಷ್ಟ. ಹಿರಿಯ ನಾಗರಿಕರು, ಮಕ್ಕಳು, ಅನಾರೋಗ್ಯ ಪೀಡಿತರು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ.

ಕ್ರಿಯಾಯೋಜನೆ ಅಗತ್ಯ
ಅವಘಡ ಸಂಭವಿಸಿದ ಅನಂತರ ಪರಿಹಾರ ಹುಡುಕುವುದು ತಪ್ಪು. ಪ್ರಯಾಣಿಕರ ಸುರಕ್ಷೆಗಾಗಿ ಇಲಾಖೆಯು ಅಗತ್ಯ ಬದಲಾವಣೆಗಳನ್ನು ತರಲು ಹೊಸ ಪರಿಹಾರಗಳೊಂದಿಗೆ ಕ್ರಿಯಾ ಯೋಜನೆಯನ್ನು ಮೊದಲೇ ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.

Advertisement

ರೈಲು ಪ್ರಯಾಣವನ್ನು ಸುಗಮವಾಗಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಯತ್ನಿಸಬೇಕು. ಅಧಿಕಾರಿಗಳು ಧನಾತ್ಮಕ ನಿಲುವು ತೆಗೆದುಕೊಂಡು ಸಮಸ್ಯೆಯನ್ನು ತ್ವರಿತಗತಿಯಲ್ಲಿ ನಿವಾರಿಸಬೇಕು.
– ಒಲಿವರ್‌ ಡಿ’ಸೋಜಾ, ಕಾರ್ಯಕಾರಿ ಕಾರ್ಯದರ್ಶಿ, ರೈಲು ಯಾತ್ರಿ ಸಂಘ, ಮುಂಬಯಿ

ಮುಂಬಯಿ ಹೈಕೋರ್ಟ್‌ ನೀಡಿರುವ ಆದೇಶದಂತೆ ಮುಂಬಯಿಯಲ್ಲಿ ಮಾತ್ರ ಪ್ಲಾಟ್‌ಫಾರಂ ಅಂತರವನ್ನು ಹೆಚ್ಚಿಸಲಾಗಿದೆ. ಉಳಿದ ರೈಲ್ವೇ ಪ್ಲಾಟ್‌ಫಾರಂಗಳನ್ನು ಎತ್ತರಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
– ಗೋಪೀನಾಥ್‌, ಪಿಆರ್‌ಒ, ನೈಋತ್ಯ ರೈಲ್ವೇ

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next