ಹಾವೇರಿ: ಪಂಚಾಯಿತಿಗಳಲ್ಲಿ ಅತ್ಯಂತ ಕಡಿಮೆ ಸಂಬಳ ಪಡೆಯುತ್ತಿದ್ದ ಸಿಬ್ಬಂದಿಗಳು ಸಿಐಟಿಯು ಸಂಯೋಜಿತ ಪಂಚಾಯಿತಿ ನೌಕರರ ಸಂಘಟನೆಯು ಐಕ್ಯ ಹೋರಾಟ ನಡೆಸಿರುವ ಫಲವಾಗಿ ಇಂದು ಹತ್ತಾರು ಸಾವಿರ ವೇತನ ಪಡೆಯಲು ಸಾಧ್ಯವಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಜಿ. ರಾಮಕೃಷ್ಣ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವಿಭಾಗ ಮಟ್ಟದ ಸಿಐಟಿಯು ರಾಜ್ಯ ಸಮಿತಿಯ ವಿಸ್ತೃತ ಸಭೆಯಲ್ಲಿ ಅವರು ಮಾತನಾಡಿದರು.
ಶಾಸಕರ ವೇತನ ಶೇ. 50ರಿಂದ 60ರಷ್ಟು ಹೆಚ್ಚಾಯಿತು. ಆದರೆ ಗ್ರಾಪಂ ನೌಕರರ ವೇತನ ಹೆಚ್ಚಾಗಲಿಲ್ಲ. ಸಿಪಾಯಿ, ನೀರಗಂಟಿ ಸೇರಿದಂತೆ ಸಿಬ್ಬಂದಿ ವೇತನ ಅತ್ಯಂತ ಕಡಿಮೆಯಿದೆ. ಇದನ್ನು ಕನಿಷ್ಟ ವೇತನ ನೀಡಬೇಕಾಗಿತ್ತು. ಡಿಎ ಹೊರತುಪಡಿಸಿದರೆ ವೇತನ ಹೆಚ್ಚಳವಾಗಲೇ ಇಲ್ಲ. ಪೆಟ್ರೋಲ್ ಡೀಸೆಲ್ ಸೇರಿದಂತೆ ಬದುಕಿಗೆ ಬೇಕಾದ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಬೆಲೆ ಏರಿಕೆಗೆ ತಕ್ಕಂತೆ ಪಂಚಾಯಿತಿ ಸಿಬ್ಬಂದಿ ವೇತನ ಹೆಚ್ಚಿಸದಿರುವ ಪರಿಣಾಮ ಪಂಚಾಯಿತಿ ನೌಕರರು ಅತ್ಯಂತ ದಯನೀಯ ಸ್ಥಿತಿ ತಲುಪಿದ್ದಾರೆ ಎಂದರು.
ರಾಜ್ಯ ಉಪಾಧ್ಯಕ್ಷ ಎಂ.ಬಿ. ನಾಡಗೌಡ ಮಾತನಾಡಿ, ಪಂಚಾಯಿತಿ ಸಿಬ್ಬಂದಿಗೆ ಕನಿಷ್ಟ ವೇತನ ನೀಡಬೇಕಾದ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಜೊತೆಗೆ ಪಂಚಾಯಿತಿಯಡಿ ಹೊರಗುತ್ತಿಗೆ ಕೆಲಸದವರನ್ನು ಸೇರಿಸಿಕೊಂಡು ಹಲವಾರು ವರ್ಷಗಳಿಂದ ದುಡಿದ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗುತ್ತಿದ್ದಾರೆ. ಇದರ ವಿರುದ್ಧ ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬೇಕಿದೆ. ಅನುಮೋದನೆಗೊಂಡ ಸಿಬ್ಬಂದಿಗೆ ಮಾತ್ರ ಪಿಂಚಣಿ ಕೊಡುವುದಾಗಿ ಸರ್ಕಾರ ವಾದ ಹೂಡಿದೆ. ಪಿಂಚಣಿ ಸೌಲಭ್ಯ ಪಂಚಾಯಿತಿಯಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗೂ ದೊರೆಯಲೇಬೇಕು ಎಂಬುದು ನಮ್ಮ ಪ್ರಬಲ ವಾದವಾಗಿದೆ ಎಂದರು.
ರಾಜ್ಯ ಸಮಿತಿ ಖಜಾಂಚಿ ಆರ್.ಎಸ್. ಬಸವರಾಜ, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಉಪಾಧ್ಯಕ್ಷ ಬಿ.ಐ. ಈಳಗೇರ ಮಾತನಾಡಿದರು.
ಜಿಲ್ಲಾ ಸಂಚಾಲಕ ವಿನಾಯಕ ಕುರುಬರ, ಧಾರವಾಡ ಜಿಲ್ಲಾ ನಾಯಕಿ ಪುಷ್ಪಾ ಘಾರ್ಗೆ, ಉತ್ತರ ಕನ್ನಡ ಜಿಲ್ಲಾ ಮುಖಂಡ ಮುತ್ತು ಪೂಜಾರಿ, ಮಲ್ಲೇಶಣ್ಣ ಶಿಗ್ಗಾಂವಿ, ಕುಮಾರ ಬ್ಯಾಡಗಿ, ಆಂಜನೇಯ ರಟ್ಟಿಹಳ್ಳಿ, ಅಜ್ಜಪ್ಪ ಬಾರ್ಕಿ, ಸುಭಾಸ ಹಾವೇರಿ, ಪರಮೇಶ ಪುರದ ಇತರರಿದ್ದರು. ಜಗದೀಶ ಕೋಟಿ ನಿರೂಪಿಸಿದರು.