Advertisement
ಮಳೆ-ಬಿಸಿಲು-ಚಳಿ ಅನ್ನದೇ ವ್ಯಾಪಾರ ಸಾಗಿ ಬಂದಿದ್ದು, ಇದೀಗ ಪರಿಸ್ಥಿತಿ ಬದಲಾಗಿದೆ. ಬಿಸಿಲು-ಮಳೆಯಿಂದ ರಕ್ಷಣೆ ಪಡೆಯಲು 200 ಜಾನುವಾರು ಕಟ್ಟಲು ಮುಚ್ಚು ಹರಾಜು ಕಟ್ಟೆ ನಿರ್ಮಾಣ ಆಗಿದೆ. ಅದರ ಪಕ್ಕದಲ್ಲಿಯೇ ವಾಹನಗಳಿಂದ ಜಾನುವಾರು ಇಳಿಸಲು ಹಾಗೂ ದನಕ್ಕೆ ಕುಡಿಯಲು ನೀರಿನ ತೊಟ್ಟಿಯ ಜೊತೆಗೆ ರೈತರ ಅನುಕೂಲಕ್ಕಾಗಿ ಶೌಚಾಲಯ ಕಟ್ಟಲಾಗಿದೆ. ಇಷ್ಟೆಲ್ಲಾ ನಿರ್ಮಾಣ ಮಾಡಿದ್ದರೂ ಇವೆಲ್ಲವಕ್ಕೂ ಉದ್ಘಾಟನೆ ಭಾಗ್ಯ ಲಭ್ಯವಾಗದೇ ರೈತಾಪಿ ಸಮುದಾಯಕ್ಕೆ ಪ್ರಯೋಜನವಿಲ್ಲದಂತಾಗಿದೆ.
Related Articles
Advertisement
ಕುರಿ ಮಾರುಕಟ್ಟೆ ಆಧುನೀಕರಣ: ಮಾಳಾಪುರ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿಯೇ 2018-19ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾದಂತೆ ಕುರಿ ಮತ್ತು ಮೇಕೆಗಳ ಮಾರುಕಟ್ಟೆ ಆಧುನೀಕರಣ ಮಾಡುವ 10 ಲಕ್ಷ ರೂ.ಕಾಮಗಾರಿಗೆ ಅನುಮೋದನೆ ಲಭಿಸಿದೆ. ಅದಕ್ಕಾಗಿ ಜಾಗವನ್ನೂ ಮೀಸಲಿಟ್ಟು,ನಿರ್ಮಾಣ ಜವಾಬ್ದಾರಿ ಹೊತ್ತಿರುವ ಲ್ಯಾಂಡ್ ಆರ್ಮಿಯವರು ಬಂದು ಜಾಗ ಹಸ್ತಾಂತರ ಮಾಡಿಕೊಂಡು ಕಾಮಗಾರಿಗೆ ಚಾಲನೆ ಕೊಡಬೇಕಿದೆ. ಈ ಮಾರುಕಟ್ಟೆಯಲ್ಲಿ ಕುರಿಗಳನ್ನು ನಿಲ್ಲಿಸಲು ಸೂಕ್ತ ಸ್ಥಳಾವಕಾಶ,
ತೂಕ ಮಾಡುವ ಯಂತ್ರ, ನೀರು ಕುಡಿಸಲು ತೊಟ್ಟಿ ಸೇರಿದಂತೆ ಇನ್ನಿತರ ಸೌಕರ್ಯಗಳು ದೊರೆಯಲಿವೆ ಎಂದು ಧಾರವಾಡ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಎಸ್.ಎಂ. ಮನ್ನೂರ “ಉದಯವಾಣಿ’ಗೆ ತಿಳಿಸಿದರು. ಕುರಿ ಮಾರುಕಟ್ಟೆ ಆಧುನೀಕರಣಕ್ಕೆ ಎಪಿಎಂಸಿ ಜಾಗ ನಿಗದಿ ಮಾಡಿ ನಾಲ್ಕೈದು ತಿಂಗಳಾದರೂ ಲ್ಯಾಂಡ್ ಆರ್ಮಿಯವರು ಬಂದು ಜಾಗ ಹಸ್ತಾಂತರ ಮಾಡಿಕೊಂಡು ಕಾಮಗಾರಿ ಚಾಲನೆ ಆರಂಭಿಸಿಲ್ಲ. ಈ ಭಾಗದ ಶಾಸಕರು ಇತ್ತ ಲಕ್ಷéವಹಿಸಿ ಈ ಕಾಮಗಾರಿಗಳಿಗೆ ಚಾಲನೆ ನೀಡುವುದರ ಜೊತೆಗೆ ನಿರ್ಮಾಣ ಆಗಿರುವ ನಾಲ್ಕು ಮುಚ್ಚು ಹರಾಜು ಕಟ್ಟೆಗಳನ್ನು ರೈತರಿಗೆ ಮುಕ್ತಗೊಳಿಸುವ ಕಾರ್ಯ ಮಾಡಬೇಕಿದೆ.
ಎಲೆ ವ್ಯಾಪಾರವೂ ಆರಂಭವಾಗಲಿ : ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿಯೇ ಹೋಲ್‌ಸೇಲ್ ಎಲೆ ವ್ಯಾಪಾರಕ್ಕಾಗಿಯೇ 2017-18ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಅಂದಾಜು 55 ಲಕ್ಷ ರೂ.ಗಳಲ್ಲಿ ಮೂರು ಮುಚ್ಚು ಹರಾಜು ಕಟ್ಟೆ ನಿರ್ಮಾಣ ಮಾಡಲಾಗಿದೆ. ಈಗ ಹಳೇ ಎಪಿಎಂಸಿಯಲ್ಲಿ ನಡೆಯುತ್ತಿರುವ ಹೋಲ್ ಸೇಲ್ ಎಲೆ ವ್ಯಾಪಾರ ಈ ಕಟ್ಟೆಗೆ ಸ್ಥಳಾಂತರ ಆಗಬೇಕಿದೆ. ಇದಲ್ಲದೇ 11 ಎಕರೆ 23 ಗುಂಟೆಯ ಪ್ರಾಂಗಣದಲ್ಲಿಯೇ ಈಗಾಗಲೇ 2 ಎಕರೆಯಲ್ಲಿ ಆಗ್ನಿಶಾಮಕದಳ ಕಚೇರಿ ಇದ್ದು, ಒಟ್ಟು ಈ ಜಾಗಕ್ಕೆ ಕಟ್ಟಿರುವ ಕಾಂಪೌಂಡ್ ಒಂದೆರಡು ಕಡೆ ಹೊಡೆದು ಹೋಗಿದೆ. ಹೀಗಾಗಿ ರಾತ್ರಿ ಅಕ್ರಮ ಚಟುವಟಿಕೆಗಳಿಗೆ ತಾಣ ಆಗುತ್ತಿದ್ದು, ಕಾಂಪೌಂಡ್ ದುರಸ್ತಿ ಜೊತೆಗೆ ಕಾವಲುಗಾರರನ್ನೂ ನೇಮಿಸುವ ಕಾರ್ಯ ಮಾಡಬೇಕಿದೆ.
ರೈತರ ಅನುಕೂಲಕ್ಕಾಗಿ ಮುಚ್ಚು ಹರಾಜು ಕಟ್ಟೆಗಳನ್ನು ನಿರ್ಮಿಸಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ಶಾಸಕರ ಜೊತೆಗೂಡಿ ಉದ್ಘಾಟನೆ ಮಾಡುತ್ತೇವೆ. ಇದರ ಜೊತೆಗೆ ಹಳೆ ಎಪಿಎಂಸಿಯಲ್ಲಿ ನಡೆಯುವ ಹೋಲ್‌ಸೇಲ್ ಎಲೆ ಮಾರುಕಟ್ಟೆಯನ್ನೂ ಈ ಮುಚ್ಚು ಹರಾಜು ಕಟ್ಟೆಗೆ ಸ್ಥಳಾಂತರ ಮಾಡುತ್ತೇವೆ. –ಮಹಾವೀರ ಜೈನ್, ಅಧ್ಯಕ್ಷ, ಎಪಿಎಂಸಿ, ಧಾರವಾಡ
–ಶಶಿಧರ್ ಬುದ್ನಿ