ಕುಮಟಾ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ಗೋಕರ್ಣದಲ್ಲಿ ದಿನದಿಂದ ದಿನಕ್ಕೆ ಅನಧಿಕೃತ ಟ್ಯಾಟೋ (ಹಚ್ಚೆ) ಅಂಗಡಿಗಳು ಅಧಿಕಗೊಳ್ಳುತ್ತಿದ್ದು, ಇದರಿಂದ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ತಾಲೂಕಿನ ಗೋಕರ್ಣದಲ್ಲಿ ಒಂದು ವರ್ಷಕ್ಕೆ 10 ಸಾವಿರಕ್ಕೂ ಅಧಿಕ ಜನರು ಟ್ಯಾಟೋ ಹಾಕಿಸಿಕೊಳ್ಳುತ್ತಿದ್ದಾರೆ. ದಿನನಿತ್ಯ ಒಂದು ಅಂಗಡಿಯಲ್ಲಿ 15 ಜನರಿಗೆ ಹಚ್ಚೆ ಹಾಕಲಾಗುತ್ತದೆ. ಎಲ್ಲ ಸೇರಿ ನಿತ್ಯ ಸುಮಾರು 50ರಿಂದ 100 ಜನರು ಟ್ಯಾಟೋ ಹಾಕಿಸಿಕೊಳ್ಳುತ್ತಾರೆ. ಎಲ್ಲ ಬೀಚ್ ಸೇರಿ ಗೋಕರ್ಣದಲ್ಲಿ 20ಕ್ಕೂ ಅಧಿಕ ಅನಧಿಕೃತವಾಗಿ ಹಚ್ಚೆ ಹಾಕುವ ಅಂಗಡಿಗಳಿವೆ.
ಒಟ್ಟಾರೆಯಾಗಿ ನೂರಕ್ಕೂ ಹೆಚ್ಚಿನ ಜನ ಈ ದಂಧೆಯಲ್ಲಿದ್ದಾರೆ. ಮೊದಲು ವಿದೇಶಿಯರು ಮಾತ್ರ ಇದಕ್ಕೆ ಆಕರ್ಷಿತರಾಗುತ್ತಿದ್ದರು. ಆದರೆ, ಈಗ ದೇಶೀಯ ಪ್ರವಾಸಿಗರು ಅದರಲ್ಲೂ ವಿಶೇಷವಾಗಿ ಯುವಕ-ಯುವತಿಯರು ಟ್ಯಾಟೋದತ್ತ ಮುಗಿಬೀಳುತ್ತಿರುವುದು ಬೇಸರದ ಸಂಗತಿ.
ಈ ದಂಧೆಯಲ್ಲಿ ಸದ್ಯ ಇರುವ ಉತ್ತಮ ಆದಾಯದಿಂದಾಗಿ ವರ್ಷದಿಂದ ವರ್ಷಕ್ಕೆ ಈ ಅಂಗಡಿಗಳ ಸಂಖ್ಯೆಯೂ ಗೋಕರ್ಣದಲ್ಲಿ ಅಧಿಕಗೊಳ್ಳುತ್ತಿದೆ. ಇಂತಹ ವ್ಯವಹಾರ ನಡೆಸಲು ಕಟ್ಟುನಿಟ್ಟಿನ ಕಾನೂನು ಕ್ರಮವಿದೆ. ನಿಯಮದಂತೆ ಒಂದು ಮೆಡಿಕಲ್ ಲ್ಯಾಬ್ ತರದಲ್ಲಿ ಟ್ಯಾಟೋ ಶಾಪ್‌ಗ್ಳು ಕಾರ್ಯ ನಿರ್ವಹಿಸಬೇಕು. ಈ ದಂಧೆಗೆ ಸ್ಥಳೀಯ ಗ್ರಾಮ ಪಂಚಾಯಿತಿಯ ಜೊತೆಗೆ ಆರೋಗ್ಯ ಇಲಾಖೆಯ ಪರವಾನಗಿ ಕಡ್ಡಾಯ. ಆದರೆ, ಗೋಕರ್ಣದಲ್ಲಿ ಇವ್ಯಾವುದನ್ನೂ ಅನುಸರಿಸದೇ ಅನಧಿಕೃತವಾಗಿ ಅಂಗಡಿಯನ್ನು ನಡೆಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಸಾಂಕ್ರಾಮಿಕ ರೋಗ: ಆಧುನಿಕ ಟ್ಯಾಟೋ ಫ್ಯಾಶನ್ ಹಲವು ಬಗೆಯ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ ಎಂಬ ಆಪಾದನೆ ಎಲ್ಲ ಕಡೆಯಲ್ಲಿಯೂ ಕೇಳಿ ಬರುತ್ತಿದೆ. ಹಚ್ಚೆ ಹಾಕಲು ಬಗೆಬಗೆಯ ಆಕಾರದ ಸೂಜಿಗಳನ್ನು ಬಳಸಲಾಗುತ್ತದೆ. ಇಂತಹ ಸೂಜಿಗಳು ನೇರವಾ ಟ್ಯಾಟೋ ಹಾಕಿಸಿಕೊಳ್ಳುವವರ ರಕ್ತದ ಜೊತೆ ಸಂಪರ್ಕವಾಗುತ್ತದೆ. ಒಬ್ಬರಿಗೆ ಬಳಸಿದ ಸೂಜಿಯನ್ನೇ ಇನ್ನೊಬ್ಬರಿಗೆ ಬಳಸುತ್ತಿರುವುದರಿಂದ ಏಡ್ಸ್ ರೋಗ ಸೇರಿದಂತೆ ಇನ್ನಿತರ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ದಟ್ಟವಾಗಿದೆ. ದಿನದಿಂದ ದಿನಕ್ಕೆ ಅನಧಿಕೃತ ಹಚ್ಚೆ ಅಂಗಡಿಗಳು ಹೆಚ್ಚಾಗ ತೊಡಗಿದ್ದು, ಇದನ್ನು ನಿಯಂತ್ರಿಸುವ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ತಾಲೂಕು ಪಂಚಾಯತ್ ಕೈಚೆಲ್ಲಿ ಕುಳಿತಿರುವುದು ಬೇಸರದ ಸಂಗತಿಯಾಗಿದೆ. ಈ ಕುರಿತು ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು ಅನಧಿಕೃತವಾಗಿ ಹಚ್ಚೆ ಹಾಕುವ ಅಂಗಡಿಗಳನ್ನು ಶಾಶ್ವತವಾಗಿ ಬಂದ್ ಮಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
-ಕೆ. ದಿನೇಶ ಗಾಂವಕರ