ಬೆಂಗಳೂರು: ಅನಧಿಕೃತ ಆಫ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ) ವಿರುದ್ಧ ಸಮರ ಸಾರಿರುವ ಬಿಬಿಎಂಪಿ, ನಗರದಲ್ಲಿನ ಅನಧಿಕೃತ ಕೇಬಲ್‌ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವ ಕೆಲಸ ಆರಂಭಿಸಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರು, ಬಿಬಿಎಂಪಿ ಆಯುಕ್ತರು, ಮೇಯರ್ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಹಲವಾರು ಬಾರಿ ಟೆಲಿಕಾಂ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ನಗರದಲ್ಲಿ ಸಂಸ್ಥೆಗಳು ಅಳವಡಿಸಿರುವ ಅನಧಿಕೃತ ಕೇಬಲ್‌ಗಳ ಮಾಹಿತಿ ನೀಡುವಂತೆ ಕೋರಿದ್ದರು. ಜತೆಗೆ ನಿಗದಿತ ಶುಲ್ಕ ಪಾವತಿಸಿ ಕೇಬಲ್‌ಗಳನ್ನು ಅಧಿಕೃತಗೊಳಿಸಿಕೊಳ್ಳುವಂತೆಯೂ ತಿಳಿಸಲಾಗಿತ್ತು.
ಆದರೆ, ಟೆಲಿಕಾಂ ಸಂಸ್ಥೆಗಳು ಮಾತ್ರ ಪಾಲಿಕೆಗೆ ಮಾಹಿತಿ ನೀಡಿಲ್ಲ. ಪರಿಣಾಮ ನಗರದಲ್ಲಿ ಅಳವಡಿಸಿರುವ ಅನಧಿಕೃತ ಕೇಬಲ್‌ಗಳ ತೆರವು ಕಾರ್ಯಾಚರಣೆಯನ್ನು ಪಾಲಿಕೆ ಆರಂಭಿಸಿದ್ದು, ಇಂಟರ್‌ನೆಟ್ ಸೇವೆ ಕಡಿತವಾಗಿ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಟೆಲಿಕಾಂ ಸಂಸ್ಥೆಗಳು ಕಾಲಾವಕಾಶ ಕೋರಿ ಕೇಂದ್ರ ದೂರ ಸಂಪರ್ಕ ನಿಗಮದ ಅಧ್ಯಕ್ಷರು ಹಾಗೂ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ನೀಡಿದ್ದಾರೆ.
ಪಾಲಿಕೆಯಿಂದ ಟೆಲಿಕಾಂ ಸಂಸ್ಥೆಗಳಿಗೆ ಅನಧಿಕೃತ ಕೇಬಲ್‌ಗಳ ಮಾಹಿತಿ ಬಹಿರಂಗಪಡಿಸಲು ಹಲವಾರು ಬಾರಿ ಅವಕಾಶ ನೀಡಲಾಗಿದೆ. ಆದರೆ, ಸಂಸ್ಥೆಗಳು ಮಾಹಿತಿ ನೀಡಲು ಮುಂದಾಗಿಲ್ಲ. ಜತೆಗೆ ಪಾಲಿಕೆಗೆ ನಿಗದಿತ ಶುಲ್ಕ ಪಾವತಿಸದೆ ಅನಧಿಕೃತವಾಗಿ ಭೂಮಿಯಲ್ಲಿ ಹಾಗು ಮರಗಳ ಮೂಲಕ ಕೇಬಲ್‌ಗಳನ್ನು ಅಳವಡಿಸುತ್ತಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.
ಆ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕೇಬಲ್‌ಗಳ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಪಾಲಿಕೆ ವ್ಯಾಪ್ತಿಯ ವಿವಿಧ ರಸ್ತೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ, ಭೂಮಿಯಲ್ಲಿ ಕೇಬಲ್ ಅಳವಡಿಸುತ್ತಿಲ್ಲ. ಬದಲಿಗೆ, ಪಾಲಿಕೆ ಅನುಮತಿ ಪಡೆದುಕೊಂಡೇ ಕಂಬಗಳ ಮೂಲಕ ಕೇಬಲ್ ಅಳವಡಿಸಲಾಗುತ್ತಿದೆ. ಇದೀಗ ಮತ್ತೆ ಶುಲ್ಕ ಪಾವತಿಸಿ ಎಂದು ಹೇಳುತ್ತಿದ್ದಾರೆ.
ಜತೆಗೆ ಕೇಬಲ್‌ಗಳನ್ನು ತುಂಡರಿಸುತ್ತಿರುವುದರಿಂದ ಇಂಟರ್‌ನೆಟ್ ಸೇವೆ ಕಡಿತಗೊಂಡಿದ್ದು, ಜನ ತೊಂದರೆ ಅನುಭವಿಸುವಂತಾಗಿದೆ. ಆ ಹಿನ್ನೆಲೆಯಲ್ಲಿ ದೂರಸಂಪರ್ಕ ಕಾರ್ಯದರ್ಶಿಗಳಿಗೆ ಹಾಗೂ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ನೀಡಿದ್ದು, ಸಮಸ್ಯೆ ಬಗೆಹರಿಸುವಂತೆ ಆಯುಕ್ತರಿಗೆ ಸೂಚಿಸಿದ್ದಾರೆ ಎಂದು ಟೆಲಿಕಾಂ ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.