ಕುಂದಾಪುರ: ಮೊದಲೆರಡು ದಿನ ಇದ್ದ ಬಿರುಸು ಈಗ ಪೊಲೀಸರಲ್ಲೂ ಇಲ್ಲ. ಅಂತೆಯೇ ಅನವಶ್ಯಕವಾಗಿ ನಗರಕ್ಕೆ ಸುತ್ತಾಡಲು ಬರುವವರ ಸಂಖ್ಯೆಯೂ ಇಲ್ಲ. ಇದಕ್ಕೆ ಕಾರಣ ಮೊದಲೆರಡು ದಿನ ಪೊಲೀಸರ ಕೈಯಲ್ಲಿದ್ದ ಲಾಠಿ. ಆ ದಿನಗಳಲ್ಲಿ ಲಾಠಿ ಮಾತಾಡಿದ್ದೇ ಹೆಚ್ಚು. ಪುಂಡ ಪೋಕರಿಗಳ ಜತೆಗೆ ಕೆಲವು ವಿದ್ಯಾವಂತರೂ, ಅಗತ್ಯ ಕಾರ್ಯಗಳಿಗಾಗಿ ಪೇಟೆಗೆ ಬಂದವರೂ ಲಾಠಿ ರುಚಿ ನೋಡಬೇಕಾಗಿ ಬಂದಿತ್ತು. ಇದು ತೀವ್ರ ಟೀಕೆಗೆ ಕಾರಣವಾಯಿತು.
ಪೊಲೀಸ್ ವ್ಯವಸ್ಥೆ ಮೇಲೆ ಜನರಿಗೆ ಬೇಸರ ಮೂಡಿಸುವಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಬಂದವು. ಆದರೆ ಅವೇ ಲಾಠಿ ಏಟಿನ ವಿಡಿಯೋಗಳು, ಚಿತ್ರಗಳು ಅನವಶ್ಯಕವಾಗಿ ಪೇಟೆಗೆ ಹೋದರೆ ಲಾಠಿ ಏಟು ತಿನ್ನಬೇಕಾಗುತ್ತದೆ ಎಂಬ ಸಂದೇಶವನ್ನೂ ನೀಡಿದವು. ಇದರಿಂದಾಗಿ ಅನಗತ್ಯವಾಗಿ ಬರುವುದೂ ಕಡಿಮೆಯಾಯಿತು.
ಪೊಲೀಸರು ಕೂಡಾ ಮನೆ ಮಂದಿಯನ್ನು ಬಿಟ್ಟು ಕೋವಿಡ್-19 ಭೀತಿಯ ನಡುವೆಯೂ ಬಿಸಿಲಿನಲ್ಲಿ ಜನರಿಗೆ ಏನೂ ಆಗಬಾರದು, ಮನೆಯಲ್ಲೇ ಇರಿ ಎಂದು ಹೇಳುವ ಕಾನೂನು ಪಾಲನೆಯ ಕಾರ್ಯ ಮಾಡುತ್ತಿದ್ದಾರೆ. ಸಾರ್ವಜನಿಕರೇ ಅರ್ಥೈಸಿಕೊಳ್ಳಬೇಕು. ಕಾನೂನು ಪಾಲನೆ ಮಾಡಬೇಕು. ಪೊಲೀಸರ ಸಹನೆ ಪರೀಕ್ಷೆ ಮಾಡಬಾರದು ಎಂಬ ಮಾತುಗಳೂ ಸಾಮಾಜಿಕ ಜಾಲತಾಣದಲ್ಲಿತ್ತು. ಈ ಎರಡೂ ವಿಧದ ಹೇಳಿಕೆಗಳ ಜತೆಗೆ ಹಿರಿಯ ಅಧಿಕಾರಿಗಳು ಲಾಠಿ ಚಾರ್ಜ್ ನಡೆಸದಂತೆ ಸೂಚನೆ ನೀಡಿದ್ದಾರೆ. ಒಂದು ಹಂತದವರೆಗೆ ಮಾತಿನಲ್ಲೇ ಅವಕಾಶ ನೀಡಿ, ತಿಳಿಹೇಳಿ, ಮರಳಿ ಕಳುಹಿಸಿ. ನಂತರವೂ ಕೇಳದಿದ್ದರೆ ಕಾನೂನು ಕ್ರಮ ಜರುಗಿಸಿ ಎಂದು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೇ ಲಾಠಿ ಬದಿಗಿಡಲಾಗಿದೆ. ರವಿವಾರ ಕೂಡಾ ಲಾಠಿಯನ್ನು ಬೈಕಿನಲ್ಲೇ ಇಟ್ಟು ಮಾತಿನಲ್ಲೇ ತಿಳಿಹೇಳುವ ಕಾರ್ಯ ಪೊಲೀಸರಿಂದ ನಡೆಯಿತು.