Advertisement

ಯಾರಿಗೆ ಒಲಿಯುತ್ತೆ ಉನ್ನಾವ್‌?

11:20 AM May 04, 2019 | Team Udayavani |

ಉತ್ತರ ಪ್ರದೇಶದ ಪ್ರಮುಖ ನಗರಗಳಲ್ಲೊಂದು ಉನ್ನಾವ್‌. ಇದು ಲೋಕಸಭಾ ಕ್ಷೇತ್ರವೂ ಹೌದು. ದೇಶದಲ್ಲಿ ಅತ್ಯಂತ ಗುಣಮಟ್ಟದ ಚರ್ಮೋದ್ದಿಮೆಗೆ ಈ ಸ್ಥಳ ಹೆಸರುವಾಸಿಯಾಗಿದೆ. ನಾಲ್ಕನೇ ಹಂತದಲ್ಲಿ (ಏ.29) ಇಲ್ಲಿ ಚುನಾವಣೆ ನಡೆಯಲಿದೆ.

Advertisement

1952ರಲ್ಲಿ ರಚನೆಯಾಗಿರುವ ಈ ಲೋಕಸಭಾ ಕ್ಷೇತ್ರದಲ್ಲಿ 1971ರವರೆಗೆ ಕಾಂಗ್ರೆಸ್‌ ಅಭ್ಯರ್ಥಿ ಜಯಗಳಿಸಿದ್ದಾರೆ. 1977ರಲ್ಲಿ ಜನತಾ ಪಾರ್ಟಿಯ ಹುರಿಯಾಳು ಗೆದ್ದಿದ್ದರು. 1980 ಮತ್ತು 1984ರಲ್ಲಿ ಮತ್ತೆ ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ ಜಯ ಸಾಧಿಸಿತ್ತು. 1989ರಲ್ಲಿ ಜನತಾ ದಳ ಗೆದ್ದಿತ್ತು. 1991ರಿಂದ 1998ರವರೆಗೆ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. 1999ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಗೆಲುವು ಕಂಡಿತ್ತು. 2004 ರಲ್ಲಿ ಬಿಎಸ್‌ಪಿ ಅಭ್ಯರ್ಥಿ ಲೋಕಸಭೆ ಪ್ರವೇಶ ಮಾಡಿದ್ದರು. 2009ರಲ್ಲಿ ಕಾಂಗ್ರೆಸ್‌ನ ಅನು ಟಂಡನ್‌ ಗೆದ್ದಿದ್ದರು.

ಕುತೂಹಲಕಾರಿ ವಿಚಾರವೆಂದರೆ ಹಿಂದಿನ ಎರಡು ದಶಕಗಳಲ್ಲಿ ಅವಧಿಯಲ್ಲಿ ಯಾವುದೇ ಪಕ್ಷದ ಸಂಸದರು ಎರಡನೇ ಬಾರಿಗೆ ಆಯ್ಕೆಯಾದದ್ದು ಇಲ್ಲ ಎನ್ನುತ್ತಾರೆ ಸ್ಥಳೀಯರು.

ಕ್ಷೇತ್ರದವರಲ್ಲ: ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಬಿಜೆಪಿಯ ಸಾಕ್ಷಿ ಮಹರಾಜ್‌, ಕಾಂಗ್ರೆಸ್‌ನ ಅನು ಟಂಡನ್‌, ಎಸ್‌ಪಿ-ಬಿಎಸ್‌ಪಿಯ ಅರುಣ್‌ ಶಂಕರ್‌ ಶುಕ್ಲಾ ಸೇರಿ ಮೂವರು ಕೂಡ ಉನ್ನಾವ್‌ ಲೋಕಸಭಾ ಕ್ಷೇತ್ರದವರಲ್ಲ. ಹೊರಗಿನವರು. ಇದುವರೆಗೆ ಗೆದ್ದವರಲ್ಲಿ ಯಾರೂ ಕೂಡ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಆರೋಪಿಸುತ್ತಾರೆ ಸ್ಥಳೀಯರು.

ಕೆಲಸಗಳಾಗಿಲ್ಲ: ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಉತ್ತಮ ರಸ್ತೆಗಳು ಇಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅಪಾಯಕಾರಿ ತ್ಯಾಜ್ಯಗಳನ್ನು ಕೆಲ ಕಾರ್ಖಾನೆ ಗಳು ನೀರಿಗೆ ಬಿಡುತ್ತಿರುವುದರಿಂದ ಜಲಮೂಲಗಳೂ ಮಲಿನವಾಗಿವೆ. ಹೀಗಾಗಿ ಅದು ಪ್ರಮುಖ ಸಮಸ್ಯೆಯಾಗಿದೆ. ಈ ಬಾರಿ ಎಸ್‌ಪಿ-ಬಿಎಸ್‌ಪಿ ಮೈತ್ರಿಯಾಗಿ ಮತ್ತು ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಿರುವುದು ಬಿಜೆಪಿಗೆ ಅನುಕೂಲ ವಾಗಲಿದೆ ಎಂದು ಹೇಳಲಾಗುತ್ತಿದೆ.

Advertisement

ಜಾತಿ ಲೆಕ್ಕಾಚಾರ: ಈ ಕ್ಷೇತ್ರ ವ್ಯಾಪ್ತಿಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಹೆಚ್ಚು ಇರುವುದರಿಂದಲೇ ಎಸ್‌ಪಿ-ಬಿಎಸ್‌ಪಿ ಅರುಣ್‌ ಶಂಕರ್‌ ಶುಕ್ಲಾಗೆ ಟಿಕೆಟ್ ನೀಡಿದೆ. ಇದಲ್ಲದೆ ಲೋಧಿ ಸಮುದಾಯದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ್ದ ಬಿಜೆಪಿ ಸಂಸದ ಸಾಕ್ಷಿ ಮಹರಾಜ್‌ ಈ ಬಾರಿ ಟಿಕೆಟ್ ಪಡೆದುಕೊಳ್ಳಲು ಭಾರಿ ಕಸರತ್ತು ಮಾಡಿದ್ದರಂತೆ. ತಾವೂ ಒಬ್ಬ ಇತರ ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಂಡದ್ದು ಮಾತ್ರವಲ್ಲ. 10 ಲಕ್ಷ ಮತಗಳು ತಮ್ಮ ಪರವಾಗಿಯೇ ಇವೆ ಎಂದು ಲಾಬಿ ನಡೆಸಿದ್ದರಂತೆ.

ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಲೋಕಸಭಾ ಕ್ಷೇತ್ರದಲ್ಲಿ ಸಫೀಪುರ್‌ ಮತ್ತು ಮೋಹನ್‌ ಎಂಬ ಎರಡು ಕ್ಷೇತ್ರಗಳು ಮೀಸಲಾಗಿವೆ. ಎರಡು ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಶಾಸಕರು ಮತ್ತು ಒಂದರಲ್ಲಿ ವೈಶ್ಯ ಸಮುದಾಯಕ್ಕೆ ಸೇರಿದ ಶಾಸಕರು ಇದ್ದಾರೆ.

ಈ ಬಾರಿ ಕಣದಲ್ಲಿ
ಸಾಕ್ಷಿ ಮಹರಾಜ್‌ (ಬಿಜೆಪಿ)

ಅರುಣ್‌ ಶುಕ್ಲಾ (ಎಸ್‌ಪಿ-ಬಿಎಸ್‌ಪಿ)
ಅನು ಟಂಡನ್‌ (ಕಾಂಗ್ರೆಸ್‌)

Advertisement

Udayavani is now on Telegram. Click here to join our channel and stay updated with the latest news.

Next