ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಯುವತಿಯ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಅನಂತರದ ಬೆಳವಣಿಗೆಗಳು ಆಘಾತಕಾರಿ ಮಾತ್ರವಲ್ಲದೆ ಈಗಲೂ ಬಲಾಡ್ಯ ರಾಜಕೀಯ ಶಕ್ತಿಗಳು ಹೇಗೆ ಕಾನೂನಿನ ಮೇಲೆ ಸವಾರಿ ಮಾಡುತ್ತವೆ ಎನ್ನುವುದಕ್ಕೊಂದು ಪ್ರತ್ಯಕ್ಷ ಸಾಕ್ಷಿ.
ಈ ಪ್ರಕರಣದ ಮುಖ್ಯ ಆರೋಪಿ ಬಿಜೆಪಿ ಶಾಸಕ ಕುದೀಪ್ ಸಿಂಗ್ ಸೇನ್‌ಗರ್ ಪ್ರಬಲ ಠಾಕೂರ್ ಸಮುದಾಯಕ್ಕೆ ಸೇರಿದವನು. ಹಣಬಲ, ಜಾತಿ ಬಲ ಮತ್ತು ತೋಳ್ಬಲಗಳಿಂದಲೇ ರಾಜಕೀಯ ಮಾಡುತ್ತಾ ಬಂದಿರುವ ಅವನು ನಾಲ್ಕು ಸಲ ಶಾಸಕನಾಗಿ ಆಯ್ಕೆಯಾಗಿದ್ದಾನೆ. ಬಿಜೆಪಿಗೆ ಸೇರುವ ಮೊದಲು ಬಹುಜನ ಸಮಾಜ ಪಾರ್ಟಿ ಮತ್ತು ಸಮಾಜವಾದಿ ಪಾರ್ಟಿಯಲ್ಲಿದ್ದವನು. ಬಾಲಿವುಡ್‌ನ ಮಸಾಲೆ ಚಿತ್ರಗಳಲ್ಲಿ ತೋರಿಸುವಂತೆ ಸೇನ್‌ಗರ್, ಅವನ ಸಹೋದರ ಸೇರಿದಂತೆ ಇಡೀ ಕುಟುಂಬ ಪುಂಡಾಟಿಕೆ, ದಬ್ಟಾಳಿಕೆಗಳಂಥ ಕೃತ್ಯಗಳಿಂದ ಜನರನ್ನು ಭೀತಿಯಲ್ಲಿಟ್ಟು ದರ್ಬಾರು ನಡೆಸುತ್ತಿತ್ತು.
2 ವರ್ಷದ ಹಿಂದೆ ನೌಕರಿ ಕೊಡಿಸುವ ಆಮಿಷವೊಡ್ಡಿ ಸೇನ್‌ಗರ್ ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಯುವತಿ ಈ ಕುರಿತು ದೂರು ನೀಡಿದರೂ ಪೊಲೀಸರು ದಾಖಲಿಸಿಕೊಳ್ಳುವುದಿಲ್ಲ. ಕೊನೆಗೆ ಆಕೆ ಮುಖ್ಯಮಂತ್ರಿ ಆದಿತ್ಯನಾಥ್ ಮನೆಯೆದುರು ಆತ್ಮಾಹುತಿ ಮಾಡಿಕೊಳ್ಳಲು ಮುಂದಾದಾಗ ಪೊಲೀಸರು ಅರೆ ಮನಸ್ಸಿನಿಂದ ದೂರು ಸ್ವೀಕರಿಸಿ ಎಫ್ಐಆರ್ ದಾಖಲಿಸಿಕೊಳ್ಳುತ್ತಾರೆ. ಇದಾದ ಬಳಿಕ ಪೊಲೀಸರು ಆಕೆಯ ತಂದೆಯನ್ನು ಶಸ್ತ್ರಾಸ್ತ್ರ ಕಾಯಿದೆಯಡಿ ಬಂಧಿಸುತ್ತಾರೆ. ಅವರು ಲಾಕಪ್‌ನಲ್ಲಿ ಸಾವನ್ನಪ್ಪುತ್ತಾರೆ. ಆಕೆಯ ಚಿಕ್ಕಪ್ಪನ್ನು ಇನ್ನೊಂದು ಪ್ರಕರಣದಲ್ಲಿ ಬಂಧಿಸಿ ಜೈಲಿಗೆ ತಳ್ಳಲಾಗುತ್ತದೆ. ಆಕೆಯ ಕುಟುಂಬಕ್ಕೆ ಸೇನ್‌ಗರ್‌ನ ಗೂಂಡಾಗಳು ನೀಡುತ್ತಿರುವ ಕಿರುಕುಳಗಳಿಗೆ ಪೊಲೀಸರು ಕಿವುಡಾಗುತ್ತಾರೆ. ತನಿಖೆ ಸಿಬಿಐಗೆ ವರ್ಗಾವಣೆಯಾದರೂ ಆಮೆಗತಿಯಲ್ಲಿ ಸಾಗುತ್ತದೆ. ಇದೀಗ ಕಳೆದ ವಾರ ಆಕೆ ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಢಿಕ್ಕಿ ಹೊಡೆದ ಪ್ರಕರಣದ ಪ್ರಮುಖ ಸಾಕ್ಷಿದಾರರಾಗಿದ್ದ ಆಕೆಯ ಇಬ್ಬರು ಚಿಕ್ಕಮಂದಿರು ಸಾವನ್ನಪ್ಪಿದ್ದಾರೆ. ಸಂತ್ರಸ್ತ ಯುವತಿ ಮತ್ತು ಆಕೆಯ ವಕೀಲ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಈ ಅಪಘಾತ ನೈಜವೋ ಅಥವಾ ಸಾಕ್ಷಿ ನಾಶ ಮಾಡುವ ಸಲುವಾಗಿ ಮಾಡಿಧ್ದೋ ಎನ್ನುವುದು ತನಿಖೆಯಿಂದಷ್ಟೇ ತಿಳಿಯಬಹುದು. ಆದರೆ ಯುವತಿ ಮತ್ತು ಆಕೆಯ ಕುಟುಂಬದ ಜೊತೆಗೆ ಇಡೀ ವ್ಯವಸ್ಥೆ ನಡೆದುಕೊಂಡ ರೀತಿ ಮಾತ್ರ ಅಕ್ಷಮ್ಯ. ಧನಾಡ್ಯ ರಾಜಕೀಯ ವ್ಯಕ್ತಿಗಳು ಇನ್ನೂ ಪಾಳೇಗಾರಿಕೆ ಮನಃಸ್ಥಿತಿಯನ್ನು ಹೊಂದಿರುವುದನ್ನು ಈ ಘಟನೆ ತೋರಿಸುತ್ತದೆ.
ಸೇನ್‌ಗರ್ ಬಂಧನವಾಗಿ ಒಂದು ವರ್ಷವಾಗಿದ್ದರೂ ಜೈಲಿನಿಂದಲೇ ಅವನು ಎಲ್ಲವನ್ನೂ ನಿಯಂತ್ರಿಸುತ್ತಿದ್ದಾನೆ. ಓರ್ವ ಅಮಾಯಕ ಯುವತಿಗೆ ಹೇಗೆ ಇಡೀ ವ್ಯವಸ್ಥೆ ನ್ಯಾಯ ನಿರಾಕರಿಸಲು ಟೊಂಕಕಟ್ಟಿ ನಿಂತಿದೆ ಎನ್ನುವುದಕ್ಕೆ ಈ ಪ್ರಕರಣ ಒಂದು ಉದಾಹರಣೆಯಾಗಬಲ್ಲದು.
ಇದೀಗ ಸೇನ್‌ಗರ್ ವಿರುದ್ಧ ಕೊಲೆ ಮತ್ತು ಕೊಲೆಯತ್ನದ ಪ್ರಕರಣವೂ ದಾಖಲಾಗಿದೆ. ಸುಪ್ರೀಂ ಕೋರ್ಟ್ ವಿಚಾರಣೆಯನ್ನು ದಿಲ್ಲಿಗೆ ವರ್ಗಾಯಿಸಿ , ಯುವತಿಗೆ 25 ಲ. ರೂ. ಪರಿಹಾರವನ್ನು ನೀಡಲು ಆದೇಶಿಸಿದೆ. ಆದರೆ ಇಷ್ಟಕ್ಕೆ ಯುವತಿಗೆ ನ್ಯಾಯ ಸಿಕ್ಕಿದಂತಾಗುವುದಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಈ ಪ್ರಕರಣದಲ್ಲಿ ಉದ್ಭವವಾಗಿರುವ ಹಲವು ಪ್ರಶ್ನೆಗಳಿಗೆ ಉತ್ತರಿಸುವ ಉತ್ತರದಾಯಿತ್ವವನ್ನು ಹೊಂದಿದೆ. ರಾಜ್ಯಸರಕಾರ ಈ ಪ್ರಕರಣವನ್ನು ಹಗುರವಾಗಿ ಪರಿಗಣಿಸಿದ್ದೇಕೆ? ಯಾವ ಶಕ್ತಿ ಪೊಲೀಸರ ಕೈ ಕಟ್ಟಿ ಹಾಕಿತ್ತು?
ದಿಲ್ಲಿಯಲ್ಲಿ ಏಳು ವರ್ಷದ ಹಿಂದೆ ಸಂಭವಿಸಿದ ನಿರ್ಭಯಾ ಪ್ರಕರಣ ಇಡೀ ದೇಶದ ಅಂತಃಕರಣವನ್ನು ಕಲಕಿತ್ತು. ಇದರ ಪರಿಣಾಮವಾಗಿ ಕಠಿಣ ಕಾನೂನು ಜಾರಿಗೆ ಬಂದಿದ್ದರೂ ಹೆಣ್ಣು ಮಕ್ಕಳು ಇನ್ನೂ ಸುರಕ್ಷಿತರಾಗಿಲ್ಲ. ವಿಪರ್ಯಾಸವೆಂದರೆ ನಿನ್ನೆಯಷ್ಟೇ ಸಂಸತ್ತಿನಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವವರಿಗೆ ಗಲ್ಲು ಶಿಕ್ಷೆ ವಿಧಿಸಲು ಅವಕಾಶವಿರುವ ಮಸೂದೆ ಮಂಜೂರಾಗಿದೆ. ಆದರೆ ಎಷ್ಟೇ ಕಾನೂನುಗಳು ರಚನೆಯಾದರೂ ಅಪರಾಧಗಳು ನಡೆಯುತ್ತಲೇ ಇರುತ್ತವೆ. ಕಾನೂನುಗಳ ಮೇಲೆ ಕಾನೂನುಗಳನ್ನು ರಚಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಅವುಗಳು ಪರಿಣಾಮಕಾರಿಯಾಗಿ ಅನುಷ್ಠಾನ ವಾಗುವಂತೆ ನೋಡಿಕೊಳ್ಳುವ ಬದ್ಧತೆಯನ್ನೂ ತೋರಿಸಬೇಕು. ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ರಕ್ಷಣೆ ಕೊಡಲು ಅಸಮರ್ಥವಾದರೆ ಅದು ಆಳುವವರ ವೈಫಲ್ಯವಲ್ಲದೆ ಮತ್ತೇನೂ ಅಲ್ಲ.