Advertisement
ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿದ್ದು, ಅದಕ್ಕೆ ಪರ್ಯಾಯ ಜಲಾಶಯ ನಿರ್ಮಿಸುವ ಕುರಿತು ಈ ಹಿಂದೆಯೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ್ದು, ಅಂದಾಜು 6500 ಕೋಟಿ ವೆಚ್ಚವಾಗಲಿದೆ ಎಂದು ತಿಳಿಸಲಾಗಿತ್ತು. ಆದರೆ, ಹಿಂದಿನ ಸಿಎಂ ಸಿದ್ದರಾಮಯ್ಯ ಮಂಡಿಸಿದ ಕೊನೆ ಬಜೆಟ್‌ನಲ್ಲಿ ಯೋಜನಾ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಮತ್ತೂಮ್ಮೆ ಡಿಪಿಆರ್ ಸಿದ್ಧಪಡಿಸಲು ಸಮಿತಿ ರಚಿಸಿದ್ದರು. ಆದರೆ, ಈ ಬಾರಿ ಆ ಬಗ್ಗೆ ಪ್ರಸ್ತಾವಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಒಂದು ವೇಳೆ ಈ ಯೋಜನೆ ಜಾರಿಯಾಗಿದ್ದೇ ಆದಲ್ಲಿ ಜಿಲ್ಲೆಯ ನೀರಾವರಿ ವಲಯಕ್ಕೆ ನೀರಿನ ಸಮಸ್ಯೆಯನ್ನು ಬಹುತೇಕ ನೀಗಿಸಬಹುದಾಗಿತ್ತು. ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಸಿಎಂ ಗಮನಕ್ಕೆ ತಂದಿದ್ದರಾದರೂ ಉಪಯೋಗವಾಗಿಲ್ಲ.
Related Articles
Advertisement
ರೈತ ಪ್ರಾತ್ಯಕ್ಷಿಕೆ ಕೇಂದ್ರ: ಸಿಂಧನೂರಿನಲ್ಲಿ ರೈತ ಪ್ರಾತ್ಯಕ್ಷಿಕೆ ಕೇಂದ್ರ ಮಂಜೂರು ಮಾಡಲಾಗಿದೆ. ಗ್ರಾಮೀಣ ಕ್ಷೇತ್ರದ ಬಸಪ್ಪ ಕೆರೆ ತುಂಬಿಸಲು 70 ಕೋಟಿ ನೀಡಲಾಗಿದೆ.
ಗಣೇಕಲ್ ಜಲಾಶಯಕ್ಕೆ ನೀರು: ಇನ್ನು ಗಣೇಕಲ್ ಜಲಾಶಯಕ್ಕೆ ಕೃಷ್ಣಾ ನದಿಯಿಂದ ನೀರು ತುಂಬಿಸಲು 140 ಕೋಟಿ ನೀಡಲಾಗಿದೆ. ಇದರಿಂದ ಬೇಸಿಗೆಯಲ್ಲಿ ನಗರ ಸೇರಿ ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು. ಕೇವಲ ತುಂಗಭದ್ರಾ ಜಲಾಶಯವನ್ನು ಮಾತ್ರ ನೆಚ್ಚಿಕೊಳ್ಳದೆ ನಾರಾಯಣಪುರ ಜಲಾಶಯದಿಂದಲೂ ನೀರು ಪೂರೈಸಲು ಅನುಕೂಲವಾಗಲಿದೆ. ಅಲ್ಲದೇ, ಇದರಿಂದ ಕೃಷಿಗೂ ಸಂಕಷ್ಟ ಕಾಲದಲ್ಲಿ ನೀರುಣಿಸಬಹುದು.
ಬ್ರಿಡ್ಜ್ ಕಂ ಬ್ಯಾರೇಜ್: ಚಿಕ್ಕಮಂಚಾಲಿಯಿಂದ ಮಂತ್ರಾಲಯಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು 50 ಕೋಟಿ ನೀಡಲಾಗಿದೆ. ಇದರಿಂದ ಮಂತ್ರಾಲಯಕ್ಕೆ ತೆರಳುವ ಭಕ್ತರಿಗೆ ಅನುಕೂಲವಾಗಬಹುದು. ಆದರೆ ಬ್ಯಾರೇಜ್‌ನಿಂದ ಆಂಧ್ರ ಜನ ಕೂಡ ನೀರು ಬಳಸಿಕೊಳ್ಳುವ ಸಾಧ್ಯತೆ ಅಲ್ಲಗಳೆಯಲಾಗದು.
ಹೇಳಿಕೊಳ್ಳುವಂಥ ಕೊಡುಗೆ ಸಿಕ್ಕಿಲ್ಲಬಜೆಟ್ನಲ್ಲಿ ಕುಡಿಯುವ ನೀರಿಗೆ ಬಿಟ್ಟರೆ ಹೇಳಿಕೊಳ್ಳುವಂಥ ಕೊಡುಗೆ ಸಿಕ್ಕಿಲ್ಲ. ಹಳೇ ಯೋಜನೆಗಳಲ್ಲಿ ಕೆಲವಾದರೂ ಹಂತ ಹಂತವಾಗಿ ಈಡೇರಿಸಲಿ ಎಂಬುದು ರೈತರ ಹಕ್ಕೊತ್ತಾಯ. ಇನ್ನು ಕೈಗಾರಿಕೆ ವಲಯವೂ ಸಂಪೂರ್ಣ ಕಡೆಗಣನೆಗೆ ಒಳಪಟ್ಟಿದೆ. ಕೈಗಾರಿಕೆ ವೃದ್ಧಿಯಲ್ಲಿ ಜಿಲ್ಲೆಯಲ್ಲಿ ವಿಪುಲ ಅವಕಾಶಗಳಿದ್ದರೂ ಸರ್ಕಾರ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎನ್ನುವುದು ವಾಣಿಜ್ಯೋದ್ಯಮಿಗಳ ಆಕ್ಷೇಪ. ಹೈಕ ಅನುದಾನಕ್ಕೇ ಕೊಕ್ಕೆ
ನಂಜುಂಡಪ್ಪ ವರದಿಯನ್ವಯ ಅತಿ ಹಿಂದುಳಿದ ಹೈದರಾಬಾದ್-ಕರ್ನಾಟಕ ಭಾಗದ ಜಿಲ್ಲೆಗಳ ಪ್ರಗತಿಗೆ ವಿಶೇಷ ಸ್ಥಾನಮಾನ ಸಿಕ್ಕಿದೆ. ಇಲ್ಲಿಗೆ ನೀಡುವ ವಿಶೇಷ ಅನುದಾನ ಕೇವಲ ಮೂಲ ಸೌಕರ್ಯಗಳನ್ನು ಕಲ್ಪಿಸಲು ಬಳಸಬೇಕು ಎಂಬ ನಿಯಮವಿದೆ. ಆದರೆ, ಸರ್ಕಾರ ಪ್ರತಿ ವರ್ಷ 1500 ಕೋಟಿ ಅನುದಾನ ಮೀಸಲಿಡುತ್ತದೆ. ಅದೇ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸುತ್ತಿದೆ. ಈ ಬಾರಿಯೂ 150 ಕೋಟಿ ಹಣವನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ನೀಡುವುದಾಗಿ ಸಿಎಂ ಘೋಷಿಸಿದ್ದು, ಪ್ರತ್ಯೇಕ ನೀಡಿ ಏನು ಪ್ರಯೋಜನ ಎಂಬ ಪ್ರಶ್ನೆ ಮೂಡಿದೆ. ಒಟ್ಟಾರೆ ಮೂಗಿಗೆ ತುಪ್ಪ ಸವರಿದಂತೆ ಸಿಎಂ ಪದೇ ಪದೇ ರಾಯಚೂರು ಹೆಸರು ಉಲ್ಲೇಖೀಸಿದರಾದರೂ ಹೇಳಿಕೊಳ್ಳುವಂಥ ಯೋಜನೆಗಳನ್ನೇನು ಕೊಟ್ಟಿಲ್ಲ.