ವಾಷಿಂಗ್ಟನ್: ವಿಶ್ವದ ಅತಿ ದೊಡ್ಡ ಸಾಫ್ಟವೇರ್ ಕಂಪನಿ ಮೈಕ್ರೋಸಾಫ್ಟ್ ತನ್ನ ಉದ್ಯೋಗಿಗಳಿಗೆ ವಾರದಲ್ಲಿ ನಾಲ್ಕು ದಿನಗಳ ಕೆಲಸದ ಜತೆಗೆ ಅನಿಯಮಿತ ಪಾವತಿಸಹಿತ ರಜೆ ನೀಡುತ್ತಿದೆ.
ಈ ಕುರಿತು ಕಂಪನಿ ಉದ್ಯೋಗಿಗಳಿಗೆ ಈಮೇಲ್ ಕಳುಹಿಸಿರುವ ಮೈಕ್ರೋಸಾಫ್ಟ್ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಕ್ಯಾಥ್ಲೀನ್ ಹೂಗನ್, “ಕಂಪನಿಯ ಧ್ಯೇಯ, ಉದ್ದೇಶ ಮತ್ತು ಗುರಿ ಸಾಧನೆಗೆ ಗಮನಾರ್ಹ ಕೊಡುಗೆ ನೀಡಿದ ಅಥವಾ ಸಾಧನೆ ಮಾಡಿದ ಉದ್ಯೋಗಿಗಳಿಗೆ ಪಾವತಿಸಹಿತ ರಜೆ ನೀಡಲಾಗುತ್ತದೆ. ಜ.16ರಿಂದ ಈ ನೂತನ ಬದಲಾವಣೆ ಜಾರಿಗೆ ಬರಲಿದೆ,’ ಎಂದು ತಿಳಿಸಿದ್ದಾರೆ.
“ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ 10 ಕಾರ್ಪೊರೇಟ್ ರಜೆ, ಅನುಪಸ್ಥಿತಿ, ಅನಾರೋಗ್ಯ ಮತ್ತು ಮಾನಸಿಕ ಅನಾರೋಗ್ಯ ರಜೆ, ಕರ್ತವ್ಯದ ರಜೆ ಹಾಗೂ ಅನಿಯಮಿತ ಪಾವತಿ ರಜೆ ನೀಡಲಾಗುತ್ತದೆ,’ ಎಂದು ವಿವರಿಸಿದ್ದಾರೆ.
ಒರಾಕಲ್, ನೆಟ್‌ಫ್ಲಿಕ್ಸ್, ಸೇಲ್ಸ್‌ಫೋರ್ಸ್ ಮತ್ತು ಲಿಂಕ್ಡ್ಇನ್ ಕಂಪನಿಗಳು ಕೂಡ ತಮ್ಮ ಉದ್ಯೋಗಿಗಳಿಗೆ ಈಗಾಗಲೇ ಅನಿಯಮಿತ ರಜೆಯನ್ನು ನೀಡುತ್ತಿವೆ.