Advertisement

ಉಣಕಲ್‌ ಕೆರೆ ಮತ್ತೆ ನಿರ್ಲಕ್ಷ್ಯ!

02:14 PM Apr 22, 2017 | |

ಹುಬ್ಬಳ್ಳಿ: ಉಣಕಲ್‌ ಕೆರೆ ಜಿಲ್ಲಾಡಳಿತದಿಂದ ಮಹಾನಗರ ಪಾಲಿಕೆ ಸುಪರ್ದಿಗೆ ಬಂದಿದ್ದು, ಕೆರೆಯನ್ನು ಅಂತರಗಂಗೆ (ಜಲಕಳೆ) ಮುಕ್ತಗೊಳಿಸಲು ಪಾಲಿಕೆ ಅಗತ್ಯ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ. ಹೊಲ-ಗದ್ದೆಗಳಲ್ಲಿ ಮಳೆ ಇಲ್ಲದೇ ಬೆಳೆ ಒಣಗಿದೆ, ಆದರೆ ಉಣಕಲ್‌ ಕೆರೆಯಲ್ಲಿ ಮಾತ್ರ ಜಲಕಳೆ ಬೆಳೆಯುತ್ತಲೇ ಇದೆ. 

Advertisement

ಅಂತರ್ಜಲ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಉಣಕಲ್‌ ಕೆರೆ ಮತ್ತೆ ನಿರ್ಲಕ್ಷ್ಯಕ್ಕೊಳಗಾಗಿದ್ದು, ಕೆರೆಯಾದ್ಯಂತ ಜಲಕಳೆ ವ್ಯಾಪಿಸುತ್ತಿದೆ. ಗ್ರಾಮಸ್ಥರು ಹಾಗೂ ಪರಿಸರ ಪ್ರೇಮಿಗಳ ಆಗ್ರಹದಿಂದ ಕಳೆದ ವರ್ಷ ಮೇ 18ರಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹಾಗೂ ಅಂದಿನ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್‌ ಉಣಕಲ್‌ ಕೆರೆಗೆ ಭೇಟಿ ನೀಡಿದ್ದರು. 

ಕೆರೆಯಲ್ಲಿನ ಜಲಕಳೆ ತೆಗೆಯುವ ಕಾರ್ಯವನ್ನು ಹೈದರಾಬಾದ್‌ನ ಕ್ಲೀನ್‌ ಟೆಕ್‌ ಸಂಸ್ಥೆಗೆ ವಹಿಸಿಕೊಡಲಾಗಿತ್ತು. 2016 ಜೂನ್‌ 10ರಂದು ನೀರಿನಲ್ಲಿನ ಕಳೆಯನ್ನು ತೆಗೆಯುವ ಕ್ರೇನ್‌ ಹೊಂದಿದ ಬೋಟ್‌ ಯಂತ್ರದಿಂದ ಜಲಕಳೆ ತೆರವು ಕಾರ್ಯ ಆರಂಭಿಸಲಾಯಿತು. ಆದರೆ 5-6 ದಿನಗಳ ನಂತರ ತಾಂತ್ರಿಕ ತೊಂದರೆಯಿಂದ ಯಂತ್ರ ಸ್ಥಗಿತಗೊಂಡಿತು.

ಕೆಲ ದಿನಗಳವರೆಗೆ ಮತ್ತೆ ಪಾಲಿಕೆ ಸಿಬ್ಬಂದಿ ಜಲಕಳೆ ಅಂತರಗಂಗೆಯನ್ನು ತೆಗೆದು ಹಾಕಿದ್ದರು. ಆದರೆ ಈ ಪ್ರಕ್ರಿಯೆ ಹೆಚ್ಚು ದಿನ ನಡೆಯಲಿಲ್ಲ. ಆದರೆ ಮತ್ತೆ ಈಗ ಜಲಕಳೆ ಹಬ್ಬುತ್ತಿದೆ.ಕೆರೆಯ ಸೌಂದರ್ಯಕ್ಕೆ ಹಾನಿ ಮಾಡುತ್ತಿದೆ. ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಉಣಕಲ್‌ ಕೆರೆಯನ್ನು ಮಾದರಿ ಕೆರೆಯಾಗಿ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಕಳೆದ ವರ್ಷ ಹೇಳಿಕೆ ನೀಡಿದ್ದರು. 

ನವನಗರ, ಭೈರಿದೇವರಕೊಪ್ಪ ಭಾಗದಿಂದ ನಿರಂತರ ಕೊಳಚೆ ಹರಿದು ಬಂದು ಉಣಕಲ್‌ ಕೆರೆ ಸೇರುತ್ತಿರುವುದರಿಂದ ಜಲಕಳೆ ಬೆಳೆಯುತ್ತಿದೆ. ಕೊಳಚೆ ನೀರು ಕೆರೆಗೆ ಸೇರದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಂಸ್ಕರಣಾ ಘಟಕ ಆರಂಭಿಸಿ ಸಂಸ್ಕರಿತ ನೀರನ್ನು ಕೆರೆಗೆ ಬಿಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. 

Advertisement

ಆದರೆ ಪ್ರಗತಿಯಾಗಿಲ್ಲ. ಇನ್ನೊಂದು ತಿಂಗಳಲ್ಲಿ ಮಳೆಗಾಲ ಆರಂಭಗೊಳ್ಳಲಿದ್ದು, ಮಳೆ ನೀರಿನೊಂದಿಗೆ ಕೊಳಚೆ ಕೂಡ ಕೆರೆ ಸೇರುತ್ತದೆ. ಆಗ ಜಲಕಳೆ ಇನ್ನಷ್ಟು ವ್ಯಾಪಕ ಪ್ರಮಾಣದಲ್ಲಿ ಕೆರೆಯಲ್ಲಿ ಹರಡುವುದು. ಕೆರೆಯ ನಿರ್ವಹಣೆಯನ್ನು ದೇಶಪಾಂಡೆ ಫೌಂಡೇಶನ್‌ಗೆ 1 ವರ್ಷ ಅವಧಿಗೆ ವಹಿಸಿಕೊಡಲಾಗಿತ್ತು. 

ನ್ಯುವಾಲಿ ರಾಸಾಯನಿಕ ಬಳಕೆ ಮಾಡಿ ಜಲಕಳೆ ಹರಡದಂತೆ ಕ್ರಮ ಕೈಗೊಳ್ಳಲು ಫೌಂಡೇಶನ್‌ ಕ್ರಮ ಕೈಗೊಂಡಿತ್ತು. ಆದರೆ ಅದರಿಂದ ಯಾವುದೇ ಫ‌ಲ ಸಿಕ್ಕಿಲ್ಲ. ಸದ್ಯ ಅಂತರಗಂಗೆ ಕೆರೆಯಲ್ಲಿ ವ್ಯಾಪಿಸುತ್ತಿದೆ. ಹುಬ್ಬಳ್ಳಿಯ ಹಲವಾರು ಕೆರೆಗಳು ಬಡಾವಣೆಗಳು, ಮೈದಾನಗಳಾಗಿ ರೂಪಾಂತರ ಗೊಂಡಿವೆ.

ಹಳೇ ಹುಬ್ಬಳ್ಳಿಯ ಹೆಗ್ಗೇರಿ ಕೆರೆ ಮೈದಾನವಾಗಿದ್ದರೆ, ಇನ್ನೊಂದು ಕೆರೆ ನೆಹರು ಮೈದಾನವಾಗಿದೆ. ತಿರಕಾರಾಮನ ಕೆರೆ ಐಟಿ ಪಾರ್ಕ್‌ ಆಗಿ ರೂಪಾಂತರಗೊಂಡಿದೆ. ನಗರದಲ್ಲಿ ದೊಡ್ಡ ಕೆರೆ ಉಳಿದಿದ್ದೆಂದರೆ ಉಣಕಲ್‌ ಕೆರೆ ಮಾತ್ರ. ಅದರ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಉಣಕಲ್‌ ಕೆರೆಯ ಪಕ್ಕದ ಉದ್ಯಾನ ಬಿಆರ್‌ಟಿಎಸ್‌ ರಸ್ತೆ ಅಗಲೀಕರಣದಿಂದ ಧೂಳು ಮಯವಾಗಿದೆ. ಕೆ

ರೆಯಲ್ಲಿ ದೋಣಿ ವಿಹಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಜಲ ಕಳೆಯಿಂದ ಅದು ಕೂಡ ಪ್ರಯೋಜನಕ್ಕೆ ಬಾರದಂತಾಗಿದೆ. ಜನರು ಮನಸಿಗೆ ಉಲ್ಲಾಸ ಮೂಡಲೆಂದು ಕೆರೆಗೆ ಹೋದರೆ ಅಲ್ಲಿ ಜಲಕಳೆ ನೋಡಬೇಕಾದ ಸ್ಥಿತಿಯಿದೆ. ಇನ್ನಾದರೂ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಕೆರೆ ಉಳಿಸಿಕೊಳ್ಳುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು. ಜಲಕಳೆ ನಿರ್ಮೂಲನೆಗೆ ಪೂರಕ ಕ್ರಮ ತೆಗೆದುಕೊಳ್ಳಬೇಕಿದೆ. 

* ವಿಶ್ವನಾಥ ಕೋಟಿ  

Advertisement

Udayavani is now on Telegram. Click here to join our channel and stay updated with the latest news.

Next