Advertisement

ಜ್ಞಾನಕ್ಕೆ ಪ್ರಪಂಚದ ಎಲ್ಲೆಡೆ ಮಾನ್ಯತೆ: ಮಂತ್ರಾಲಯ ಶ್ರೀ ಸಂದೇಶ

04:23 PM Jun 03, 2024 | Team Udayavani |

ಮೈಸೂರು: ಶಾಸ್ತ್ರ ಜ್ಞಾನಕ್ಕೆ ಪ್ರಪಂಚದ ಎಲ್ಲೆಡೆ ಮಾನ್ಯತೆ ಇದೆ. ಹಾಗಾಗಿ ವಿದ್ಯಾರ್ಥಿಗಳು ವೇದ ವಿದ್ಯೆ ಸಂಪಾದನೆಗೆ ಶ್ರಮಿಸಬೇಕು ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

Advertisement

ಕೃಷ್ಣಮೂರ್ತಿಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಸೋಸಲೆ ಶ್ರೀ ವ್ಯಾಸರಾಜ ಮಠ ಹಮ್ಮಿಕೊಂಡಿರುವ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವಕ್ಕೆ ಭಾನುವಾರ ಸಂಜೆ ಚಾಲನೆ ನೀಡಿದ ನಂತರ ಅವರು ಆಶೀರ್ವಚನ ನೀಡಿದರು. ಸೋಸಲೆ ವಿದ್ಯಾಪೀಠದ ವಿದ್ಯಾರ್ಥಿಗಳು ಸಮರ್ಥವಾಗಿ ಅಧ್ಯಯನ ನಡೆಸಿ ಶ್ರೀ ಜಯತೀರ್ಥರು ರಚಿಸಿದ ಸುಧಾ ಗ್ರಂಥದ ಬಗ್ಗೆ ಉತ್ತಮ ವ್ಯಾಖ್ಯಾನ ನೀಡಿದ್ದಾರೆ.

ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಈ ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಮಾಡಿ ವಿದ್ಯಾರ್ಜನೆಗೆ ಶ್ರಮಿಸಿದ್ದಾರೆ. ಇದು ಯತಿಗಳು ಮುಂದಿನ ಪೀಳಿಗೆಗೆ ಮಾಡುವ ಮಾದರಿ ಕಾರ್ಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ನಿರ್ಭೀತಿಯಿಂದ, ಸಂಸ್ಕೃತದಲ್ಲಿ ಸುಲಲಿತವಾಗಿ ವಿಷಯದ ಅನುವಾದ, ವ್ಯಾಖ್ಯಾನ ಮತ್ತು ಮಂಡನೆ ಮಾಡುವ ಶೈಲಿಯನ್ನು ಕರಗತ ಮಾಡಿಕೊಂಡರೆ ಮುಂಬರುವ ದಿನಗಳಲ್ಲಿ ನಾಡಿನ ಖ್ಯಾತ ವಿದ್ವಾಂಸರಾಗಬಹುದು. ಇಂದು ಸುಧಾ ಪರೀಕ್ಷೆ ನೀಡಿದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಸಾಧನಾ ಮಾರ್ಗದಲ್ಲಿ ಇದ್ದಾರೆ. ಪುಸ್ತಕ ನಿರಪೇಕ್ಷವಾಗಿ ವಿದ್ಯಾರ್ಥಿಗಳು ಮುಕ್ತ ಸಭೆಯಲ್ಲಿ
ಪಂಡಿತರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದ್ದಾರೆ.

Advertisement

ಇದು ಅವರ ಕೌಶಲ ಮತ್ತು ಜ್ಞಾನದ ಉತ್ತಮ ಹಂತದ ದರ್ಶನ ಮಾಡಿಸಿದೆ ಎಂದು ಮಂತ್ರಾಲಯ ಶ್ರೀಗಳು ನುಡಿದರು. ಸೋಸಲೆ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ವಿದ್ವತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಗುರುಕುಲ ಪದ್ಧತಿ ಅಧ್ಯಯನ ಮಾಡಿದ ಹಿರಿಯ ವಿದ್ಯಾರ್ಥಿಗಳಾದ ಸುಘೋಷ ಆಚಾರ್ಯ ಮತ್ತು ಪ್ರಣವ ಆಚಾರ್ಯ ಅವರು ಶ್ರೀಮನ್ ನ್ಯಾಯಸುಧಾ ಗ್ರಂಥದ ನವಿ ಲಕ್ಷಣತ್ವಾಧಿಕರಣದ ಮೌಖಿಕ ಪರೀಕ್ಷೆಯನ್ನು ಎದುರಿಸಿ ಪಂಡಿತರ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ನೀಡಿದರು.

ಪಂಡಿತ, ವಿದ್ವಾಂಸರ ಉಪಸ್ಥಿತಿ:
ಮಂತ್ರಾಲಯದ ಹಿರಿಯ ವಿದ್ವಾಂಸರಾದ ಮಹಾಮಹೋಪಾಧ್ಯಾಯ ರಾಜಾ ಎಸ್. ಗಿರಿ ಆಚಾರ್ಯ, ಗುರುಸಾರ್ವಭೌಮ ವಿದ್ಯಾಪೀಠದ ಪ್ರಾಚಾರ್ಯ ವಾದಿರಾಜ ಆಚಾರ್ಯ, ಶ್ರೀನಿವಾಸಮೂರ್ತಿ ಆಚಾರ್ಯ, ಬೆಂಗಳೂರಿನ ಪೇಜಾವರ ವಿದ್ಯಾಪೀಠದ ಪ್ರಾಧ್ಯಾಪಕ ಪಂಡಿತ ಮಾತರಿಶ್ವಾಚಾರ್ಯ, ವ್ಯಾಸತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಶ್ರೀನಿಧಿ ಆಚಾರ್ಯ ಪ್ಯಾಟಿ, ಹಿರಿಯರಾದ ವಿದ್ವಾಂಸ ಶೇಷಗಿರಿ ಆಚಾರ್ಯ, ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ.ಡಿ.ಪಿ. ಧುಸೂದನಾಚಾರ್ಯ ಇತರರು ಹಾಜರಿದ್ದರು.

ರಂಜಿಸಲಿದೆ ದಾಸವಾಣಿ:
ಸೋಮವಾರ ಸಂಜೆ 6ಕ್ಕೆ ವಿದ್ವಾನ್ ಸಮೀರಾಚಾರ್ಯರಿಂದ ದಾಸವಾಣಿ ಸಂಗೀತ ಕಚೇರಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next