Advertisement

Udupi; ವಿವಿಧತೆಯಲ್ಲಿ ಏಕತೆ ಭಾರತೀಯ ಸಂಸ್ಕೃತಿಯ ಆತ್ಮ: ಆರಿಫ್ ಮೊಹಮ್ಮದ್‌ ಖಾನ್‌

12:47 AM Sep 02, 2024 | Team Udayavani |

ಉಡುಪಿ: ನಮ್ಮ ಧರ್ಮಗಳು ಬೇರೆ ಬೇರೆಯಾಗಿರಬಹುದು. ಆದರೆ ನಾವೆಲ್ಲರೂ ಭಾರತೀಯರು ಮತ್ತು ಒಂದೇ ಸಂಸ್ಕೃತಿಯವರು. ಭಿನ್ನ ಭಿನ್ನ ಹೆಸರಿನಲ್ಲಿ ದೇವರನ್ನು ಪೂಜಿಸಿದರೂ ಕೊನೆಗೆ ನಮ್ಮೆಲ್ಲರ ಪ್ರಾರ್ಥನೆ ಕೃಷ್ಣ(ಕೇಶವ)ನಿಗೆ ಸಲ್ಲುವುದು. ವಿವಿಧತೆಯಲ್ಲಿ ಏಕತೆ ನಮ್ಮ ಸಂಸ್ಕೃತಿಯ ಆತ್ಮ ಎಂದು ಕೇರಳದ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ವಿಶ್ಲೇಷಿಸಿದರು.

Advertisement

ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ರವಿವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಮಾಸೋತ್ಸವದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇವರಿಗೆ ಯಾವ ಭಾಷೆಯಲ್ಲಿ ಪ್ರಾರ್ಥನೆ ಮಾಡುತ್ತೇವೆ ಎನ್ನುವುದಕ್ಕಿಂತ ಯಾವ ಭಾವದಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ ಎನ್ನುವುದು ಅತಿ ಮುಖ್ಯ. ವೈವಿಧ್ಯ ನಮ್ಮ ಪ್ರಕೃತಿ ನಿಯಮವಾಗಿದೆ. ವೈವಿಧ್ಯತೆ ಎಂದಿಗೂ ನಮಗೆ ಸುಖಕರ. ಅದು ನಮ್ಮಲ್ಲಿ ಏಕತೆ ಮೂಡಿಸುತ್ತದೆ ಎಂದು ಭಗದ್ಗೀತೆಯ ಕೆಲವು ಶ್ಲೋಕಗಳೊಂದಿಗೆ ವಿವರಿಸಿದರು.

ಮಾನವೀಯತೆ ಸದ್ಗುಣಗಳನ್ನು ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆಯೇ ನಮಗೆ ನೀಡಿದ್ದಾರೆ. ಆದರೆ ನಾವು ಇಂದಿಗೂ ಆ ಸಂದೇಶವನ್ನು ಮಾನವ ಸಮಾಜಕ್ಕೆ ಪೂರ್ಣ ಪ್ರಮಾಣದಲ್ಲಿ ತುಂಬಲು ಸಾಧ್ಯವಾಗಿಲ್ಲ ಎಂಬ ಕಳವಳ ವ್ಯಕ್ತಪಡಿಸಿದರು.

ಸಂಸ್ಕೃತ ಎಲ್ಲ ಭಾಷೆಗಳ ಮೂಲ
ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಂಸ್ಕೃತದಲ್ಲಿಯೇ ಅನುಗ್ರಹ ಸಂದೇಶ ನೀಡಿ, ಸಂಸ್ಕೃತ ವಿಶ್ವ, ದೇವ ಭಾಷೆ, ಸರ್ವ ಭಾಷೆಗಳ ಮಾತೆಯಾಗಿದ್ದಾಳೆ. ಕನ್ನಡ, ತುಳು, ಹಿಂದಿ, ತಮಿಳು ಹೀಗೆ ರಾಷ್ಟ್ರ, ರಾಜ್ಯ, ಪ್ರಾದೇಶಿಕ ಭಾಷೆಗಳಿಗೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಭಾಷೆಯಾಗಿರುವ ಇಂಗ್ಲಿಷ್‌ ಮೂಲವೂ ಸಂಸ್ಕೃತವಾಗಿದೆ. ಸಂಸ್ಕೃತ ಅಂತರ್‌ಲೋಕೀಯ ಭಾಷೆ ಹಾಗೂ ದೇವ ಭಾಷೆ. ದೇವತೆಗಳು ಮಾತನಾಡುವ ಭಾಷೆ ಎಂದು ಬಣ್ಣಿಸಿದರು. ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

Advertisement

ವೇ| ಮೂ| ಪ್ರಭಾಕರ ಅಡಿಗ, ಹರೀಶ್‌ ಭಟ್‌ ಅವರನ್ನು ಸಮ್ಮಾನಿಸಲಾಯಿತು. ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ| ಎಚ್‌. ಎಸ್‌. ಬಲ್ಲಾಳ್‌, ಶಾಸಕರಾದ ಯಶ್‌ಪಾಲ್‌ ಎ. ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಉಪಸ್ಥಿತರಿದ್ದರು. ಶ್ರೀಮಠದ ರಘೋತ್ತಮ ಆಚಾರ್ಯ ಸ್ವಾಗತಿಸಿ, ಡಾ| ಬಿ. ಗೋಪಾಲಾಚಾರ್ಯ ನಿರೂಪಿಸಿ, ವಂದಿಸಿದರು.

ರಾಜ್ಯಪಾಲರ ಶ್ರೀಕೃಷ್ಣದರ್ಶನ, ಗೀತಾ ಲೇಖನ ಯಜ್ಞ ದೀಕ್ಷೆ
ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿದ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ಅವರನ್ನು ಪರ್ಯಾಯ ಪುತ್ತಿಗೆ ಮಠದಿಂದ ಸ್ವಾಗತಿಸಲಾಯಿತು. ಉಭಯ ಶ್ರೀಪಾದರು ಅವರಿಗೆ ಶ್ರೀಕೃಷ್ಣ ದರ್ಶನ ಮಾಡಿಸಿದರು. ಅನಂತರ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಗೀತಾ ಮಂದಿರದಲ್ಲಿ ಆರಿಫ್ ಖಾನ್‌ ಅವರಿಗೆ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ನೀಡಿ ಅನುಗ್ರಹಿಸಿದರು. ಅನಂತರ ಗೀತಾಮಂದಿರದಿಂದ ವೇದಮಂತ್ರ, ವಾದ್ಯಘೋಷಗಳೊಂದಿಗೆ ರಥಬೀದಿಯಲ್ಲಿ ಮೆರವಣಿಗೆ ಬಂದು ರಾಜಾಂಗಣಕ್ಕೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next