Advertisement

ಅಮೆರಿಕ : 10 ಲಕ್ಷ‌ ಗಡಿ ದಾಟಿದ ಸೋಂಕಿತರು ; 59,000ಕ್ಕೂ ಹೆಚ್ಚು ಮಂದಿ ಕೋವಿಡ್ ಗೆ ಬಲಿ

08:11 AM May 01, 2020 | Hari Prasad |

ವಾಷಿಂಗ್ಟನ್‌: ಅಮೆರಿಕದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಮಂಗಳವಾರ 10 ಲಕ್ಷ ಗಡಿ ದಾಟಿದೆ. ಇದಲ್ಲದೆ, 59,000ಕ್ಕೂ ಹೆಚ್ಚು ಮಂದಿ ಕೋವಿಡ್ ಗೆ ಬಲಿಯಾಗಿದ್ದು, ಇದು 2 ದಶಕಗಳ ಕಾಲ ನಡೆದ ವಿಯೆಟ್ನಾಂ ವಿರುದ್ಧದ ಯುದ್ಧದಲ್ಲಿ ಮೃತಪಟ್ಟ ಅಮೆರಿಕ ಸೈನಿಕರ ಸಂಖ್ಯೆಗಿಂತಲೂ ಹೆಚ್ಚಾಗಿದೆ.

Advertisement

1955-1975ರವರೆಗೆ ವಿಯೆಟ್ನಾಂ ವಿರುದ್ಧ ನಡೆದಿದ್ದ ಮಿಲಿಟರಿ ಕಾರ್ಯಾಚರಣೆಯಲ್ಲಿ ಅಮೆರಿಕದ 58,220 ಸೈನಿಕರು ಅಸುನೀಗಿದ್ದರು. ಅಮೆರಿಕವೀಗ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ 10 ಲಕ್ಷ ಗಡಿ ದಾಟಿದ ವಿಶ್ವದ ಮೊದಲ ರಾಷ್ಟ್ರವಾಗಿದೆ. ಜಗತ್ತಿನ 3ನೇ ಒಂದರಷ್ಟು ಕೋವಿಡ್ ಸೋಂಕಿತರು ಈಗ ಅಮೆರಿಕದಲ್ಲಿದ್ದಾರೆ. ಅಲ್ಲದೆ, ಜಗತ್ತಿನ 4ನೇ ಒಂದರಷ್ಟು ಮೃತರು ಅಮೆರಿಕನ್ನರಾಗಿದ್ದಾರೆ.

ಈ ಮಧ್ಯೆ, ಶ್ವೇತಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ನೊಂದವರಿಗಾಗಿ ನಾವು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ. ನಾವೆಲ್ಲಾ ಒಂದೇ ಮನಸ್ಸಿನಿಂದ ಈ ಸಂಕಷ್ಟವನ್ನು ಎದುರಿಸಬೇಕಿದೆ.

ಆದರೆ, ಮುಂಬರುವ ದಿನಗಳಲ್ಲಿ ನಾವು ಮತ್ತಷ್ಟು ಬಲಶಾಲಿಗಳಾಗಲಿದ್ದೇವೆ ಎಂಬ ವಿಶ್ವಾಸವಿದೆ. ಸುರಕ್ಷಿತ ಮತ್ತು ಶೀಘ್ರ ಆರ್ಥಿಕ ಚಟುವಟಿಕೆಗಳ ಆರಂಭಕ್ಕೆ ಅಮೆರಿಕನ್ನರು ಎದುರು ನೋಡುತ್ತಿದ್ದಾರೆ’ ಎಂದರು.
ಇದರ ನಡುವೆಯೇ, ಹಲವು ರಾಜ್ಯಗಳಲ್ಲಿ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಪುನರಾರಂಭಗೊಳ್ಳುತ್ತಿವೆ.

ಮತ್ತೆ ಚೀನ ವಿರುದ್ಧ ವಾಗ್ದಾಳಿ: ಇದೇ ವೇಳೆ, ಚೀನ ವಿರುದ್ಧ ಮತ್ತೂಮ್ಮೆ ಹರಿಹಾಯ್ದ ಟ್ರಂಪ್‌, ಆರಂಭದಲ್ಲೇ, ಸೋಂಕಿನ ಮೂಲದಲ್ಲೇ ಇದನ್ನು ಚಿವುಟಿ ಹಾಕಿದ್ದರೆ, ಕೋವಿಡ್ ಮಹಾಮಾರಿ ಇಂದು ವಿಶ್ವದ 184ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸುತ್ತಿರಲಿಲ್ಲ ಎಂದು ಕಿಡಿ ಕಾರಿದರು. ಈ ಬಗ್ಗೆ ತನಿಖೆ ನಡೆಸದೆ ಬಿಡುವುದಿಲ್ಲ ಎಂದು ಪುನರುಚ್ಚರಿಸಿದರು.

Advertisement

ಇದೇ ವೇಳೆ, ಉತ್ಪಾದನಾ ವಸ್ತುಗಳು, ಖನಿಜ ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಚೀನ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು ಎಂದು ಅಮೆರಿಕದ ಸಂಸದರು ಆಗ್ರಹಿಸಿದ್ದಾರೆ.

2 ಲಕ್ಷ ಮಂದಿ ಎಚ್‌-1ಬಿ ವೀಸಾದಾರರ ಸ್ಥಿತಿ ಅತಂತ್ರ
ಅಮೆರಿಕದಲ್ಲಿ ಎಚ್‌-1ಬಿ ವೀಸಾದಡಿ ಕೆಲಸ ಮಾಡುತ್ತಿರುವ 2 ಲಕ್ಷ ಉದ್ಯೋಗಿಗಳ ಪರಿಸ್ಥಿತಿ, ಮುಂದಿನ ಜೂನ್‌ ವೇಳೆಗೆ ಅತಂತ್ರವಾಗಲಿದೆ. ಇದರಲ್ಲಿ ಭಾರೀ ಪ್ರಮಾಣದ ಭಾರತೀಯರೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವ ಗ್ರೀನ್‌ಕಾರ್ಡನ್ನು 2.50 ಲಕ್ಷ ಮಂದಿ ಬಯಸುತ್ತಿದ್ದಾರೆ. ಈ ಪೈಕಿ 2 ಲಕ್ಷ ಮಂದಿ ಎಚ್‌-1ಬಿ ವೀಸಾದಲ್ಲಿದ್ದಾರೆ. ಇವರ ಪರಿಸ್ಥಿತಿಯೇ ಸಂಕಷ್ಟದಲ್ಲಿರುವುದು!

ಕೋವಿಡ್ ಪರಿಣಾಮ ಈಗಾಗಲೇ ಲಕ್ಷಾಂತರ ಮಂದಿ ಅಮೆರಿಕದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಎಚ್‌-1ಬಿ ವೀಸಾ ಹೊಂದಿರುವವರು ಕೆಲಸ ಕಳೆದುಕೊಂಡರೆ, ಮುಂದಿನ 60 ದಿನದೊಳಗೆ ಹೊಸ ಕೆಲಸ ಪಡೆಯಬೇಕು. ಇಲ್ಲವಾದರೆ ಅವರು ಅಮೆರಿಕದಿಂದ ಹೊರಹೊರಡಬೇಕು.

ಇನ್ನು ಅವರು ಮನೆಯಿಂದ ಕೆಲಸ ಮಾಡುವುದು, ಕಡಿಮೆ ವೇತನ ಪಡೆಯುವುದು ಇವೆಲ್ಲ ವೀಸಾ ನಿಯಮಕ್ಕೆ ವಿರುದ್ಧ! ಒಂದೋ ಅವರು ಬೇರೆ ಮಾದರಿ ವೀಸಾ ಪಡೆಯಬೇಕು, ಇಲ್ಲವೇ ಕೆಲಸ ಹುಡುಕಿಕೊಳ್ಳಬೇಕು ಅಥವಾ ದೇಶಬಿಟ್ಟು ಹೊರಡಬೇಕು ಎನ್ನುವ ಸ್ಥಿತಿಯಲ್ಲಿದ್ದಾರೆ.

ಕೆಲಸ ಕಳೆದುಕೊಳ್ಳದ ಎಚ್‌-1ಬಿ ವೀಸಾದಾರರಿಗೂ ಸಂಕಷ್ಟ ಕಟ್ಟಿಟ್ಟದ್ದು. ಏಕೆಂದರೆ ಅವರಿಗೂ ತಮ್ಮ ವೀಸಾ ನವೀಕರಣದ ಬಗ್ಗೆ ಭರವಸೆಯಿಲ್ಲ. ಸದ್ಯ ಟ್ರಂಪ್‌ ಆಡಳಿತ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next