ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಕರಣದಲ್ಲಿ ನಾವು ಯಶಸ್ಸು ಕಾಣಬೇಕಾದರೆ ಕರ್ನಾಟಕ ರಾಜ್ಯದಲ್ಲಿರುವ ಮರಾಠಿ ಭಾಷಿಕರು ಒಗ್ಗಟ್ಟಾಬೇಕು ಎಂದು ಮಹಾರಾಷ್ಟ್ರದ ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ ಹೇಳಿದರು.
ನಗರದ ಸಂಭಾಜಿ ಮಹಾರಾಜ ಉದ್ಯಾನವನದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ವತಿಯಿಂದ ಮಂಗಳವಾರ ನಡೆದ ಪ್ರಚಾರ ರ್‍ಯಾಲಿಯಲ್ಲಿ ಅವರು ಮಾತನಾಡಿದರು.
ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸಿದರೆ ಗಡಿ ಹೋರಾಟದಲ್ಲಿ ಸಫಲತೆ ಕಾಣುತ್ತೇವೆ. ಗಡಿ ಹೋರಾಟದಲ್ಲಿ ನಾನು ಪಾಲ್ಗೊಳ್ಳುವ ಮುನ್ನ ಸಮಗ್ರ ಅಧ್ಯಯನ ನಡೆಸುತ್ತೇನೆ. ಗಡಿ ಹೋರಾಟಗಾರರಿಂದ ಮಾಹಿತಿ ಪಡೆದ ಬಳಿಕವೇ ನಾನು ಇದರಲ್ಲಿ ಪಾಲ್ಗೊಳ್ಳುತ್ತೇನೆ. ಹೋರಾಟ ಆರಂಭಿಸಿದರೆ ಇದು ಮುಗಿಯುವವರೆಗೂ ಹಾಗು ಇತ್ಯರ್ಥ ಕಾಣುವವರೆಗೂ ನಾನು ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಮರಾಠಾ ಸಮುದಾಯಕ್ಕೆ ಮೀಸಲಾತಿ ಸಿಗುವವರೆಗೂ ನಾನು ವಿಶ್ರಮಿಸುವುದಿಲ್ಲ. ಯಾವುದೇ ಅಡೆತಡೆ ಬಂದರೂ ನಾನು ಹಿಂದೆ ಸರಿಯುವುದಿಲ್ಲ. ಮಹಾರಾಷ್ಟ್ರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ನಮ್ಮ ಪರವಾಗಿರಲಿಲ್ಲ. ಆದರೂ ಸಮಾಜದವರೆಲ್ಲರೂ ಸೇರಿ ಒಂದಾಗಿ ಬೀದಿಗೆ ಇಳಿದಿದ್ದರಿಂದ ಮೀಸಲಾತಿ ಹೋರಾಟದಲ್ಲಿ ಯಶಸ್ವಿಯಾಗಿದ್ದೇವೆ. ಇಲ್ಲಿಯೂ ನಿಮ್ಮ ಬೇಡಿಕೆಗಳು ಈಡೇರಬೇಕಾದರೆ ಇಲ್ಲಿ ಮರಾಠಿ ಮಾತನಾಡುವವರೂ ಇದೇ ರೀತಿಯ ಒಂದಾಗಬೇಕು ಎಂದರು.
ಅಭ್ಯರ್ಥಿ ಮಹಾದೇವ ಪಾಟೀಲ, ಮುಖಂಡರಾದ ರಮಾಕಾಂತ್ ಕೊಂಡೂಸ್ಕರ, ಮನೋಹರ ಕಿಣೇಕರ, ಮಾಲೋಜಿರಾವ್ ಅಷ್ಟೇಕರ, ರಂಜೀತ್ ಚವ್ಹಾಣಪಾಟೀಲ, ವಿಕಾಸ ಕಲಘಟಗಿ ಇತರರು ಇದ್ದರು.
ನಾಡವಿರೋಧಿ ಘೋಷಣೆ
ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ ಬೆಳಗಾವಿಗೆ ಬರುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಅಲ್ಲಿ ಸೇರಿದ್ದ ಜನರು, ಬೆಳಗಾವಿ, ನಿಪ್ಪಾಣಿ, ಖಾನಾಪುರ, ಕಾರವಾರ, ಬೀದರ, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಝಾಲಾಚ್ ಪಾಹಿಜೆ ಎಂದು ಪದೇಪದೆ ಘೋಷಣೆಗಳನ್ನು ಮೊಳಗಿಸಿದರು. ಜೈ ಮಹಾರಾಷ್ಟ್ರ ಎಂಬ ಘೋಷಣೆ ಕೂಗಿದರು.