Advertisement

ಕೇಂದ್ರಾಡಳಿತ ಪ್ರದೇಶ: ಏನು, ಎತ್ತ?

12:18 AM Aug 06, 2019 | Lakshmi GovindaRaj |

ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಭಾಗಗಳಾಗಿ ವಿಂಗಡಿಸಲಾದ ಕಾರಣ, ಈಗ ದೇಶಾದ್ಯಂತ ಇರುವ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 9ಕ್ಕೇರಿದಂತಾಗಿದೆ. ವಿಧಾನಸಭೆ ಇರುವ ದೆಹಲಿ ಹಾಗೂ ಪುದುಚೇರಿಗಳ ಸಾಲಿಗೆ ಜಮ್ಮು-ಕಾಶ್ಮೀರವು ಸೇರ್ಪಡೆಯಾಗುತ್ತದೆ. ಇನ್ನು ಲಡಾಖ್‌ ವಿಧಾನಸಭೆ ಇಲ್ಲದಂಥ 5 ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಗೆ ಸೇರುತ್ತದೆ. ಕೇಂದ್ರಾಡಳಿತ ಪ್ರದೇಶಗಳ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Advertisement

ಕೇಂದ್ರಾಡಳಿತ ಪ್ರದೇಶ ಎಂದರೇನು?
ಕೇಂದ್ರಾಡಳಿಡ ಪ್ರದೇಶ ಎಂದರೆ, ನೇರವಾಗಿ ಕೇಂದ್ರ ಸರ್ಕಾರದ ಆಡಳಿತದಡಿ ಬರುವಂಥ ಆಡಳಿತಾತ್ಮಕ ವಿಭಾಗ.

ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶ ಎಂದರೆ?
ಇವುಗಳು ಭಾಗಶಃ ರಾಜ್ಯ ಸ್ಥಾನಮಾನ ಹೊಂದಿದ್ದು, ವಿಧಾನಸಭೆ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ಅನ್ನೂ ಹೊಂದಿರುತ್ತದೆ. ಇಂಥ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾಯಿತ ಮುಖ್ಯಮಂತ್ರಿ ಮತ್ತು ಸಚಿವರ ಮಂಡಳಿ ಕಾರ್ಯನಿರ್ವಹಿಸುತ್ತಿರುತ್ತದೆ. ಲೆಫ್ಟಿನೆಂಟ್‌ ಗವರ್ನರ್‌ ಇಲ್ಲಿ ರಾಷ್ಟ್ರಪತಿಯವರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾರೆ. ಆದರೆ ಇವರು ಪ್ರತಿಯೊಂದು ವಿಚಾರದಲ್ಲೂ ಸಚಿವರ ಮಂಡಳಿಯ ಶಿಫಾರಸುಗಳಿಗೆ ಒಪ್ಪಲೇಬೇಕೆಂದಿರುವುದಿಲ್ಲ. ದೆಹಲಿಯ ವಿಚಾರಕ್ಕೆ ಬಂದರೆ, ಅಲ್ಲಿನ ಸರ್ಕಾರವು ಭೂಪ್ರದೇಶ, ಕಾನೂನು ಮತ್ತು ಪೊಲೀಸರ ಮೇಲೆ ಯಾವುದೇ ಅಧಿಕಾರ ಚಲಾಯಿಸುವಂತಿಲ್ಲ. ಈ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರ ಇರುವುದು ಲೆಫ್ಟಿನೆಂಟ್‌ ಗವರ್ನರ್‌ಗೆ ಮಾತ್ರ.

ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವೆಂದರೇನು?
ಇಂಥ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾಯಿತ ಮುಖ್ಯಮಂತ್ರಿ ಇರುವುದಿಲ್ಲ. ಇವುಗಳ ಆಡಳಿತವನ್ನು ಲೆಫ್ಟಿನೆಂಟ್‌ ಗವರ್ನರ್‌(ಎಲ್‌ಜಿ) ಮೂಲಕ ನೇರವಾಗಿ ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ. ಎಲ್‌ಜಿ ತಮ್ಮದೇ ಸಲಹೆಗಾರರ ತಂಡದ ಮೂಲಕವಾಗಿ ಆಡಳಿತ ನಡೆಸುತ್ತಾರೆ.

ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳು
1. ಪುದುಚೇರಿ
2. ದೆಹಲಿ
3. ಜಮ್ಮು ಮತ್ತು ಕಾಶ್ಮೀರ

Advertisement

ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶಗಳು
1. ಚಂಡೀಗಡ
2. ದಾದ್ರಾ ಮತ್ತು ನಗರ ಹವೇಲಿ
3. ದಾಮನ್‌ ಮತ್ತು ದಿಯು
4. ಲಕ್ಷದ್ವೀಪ
5. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು
6. ಲಡಾಖ್‌

ರಾಜ್ಯ ವರ್ಸಸ್‌ ಕೇಂದ್ರಾಡಳಿತ ಪ್ರದೇಶ
ರಾಜ್ಯ
– ಸ್ವಂತ ಸರ್ಕಾರ ಇರುತ್ತದೆ
– ಆಡಳಿತವನ್ನು ಚುನಾಯಿತ ಮುಖ್ಯಮಂತ್ರಿ ನೋಡಿಕೊಳ್ಳುತ್ತಾರೆ
– ಸಾಂವಿಧಾನಿಕ ಮುಖ್ಯಸ್ಥರಾಗಿ ರಾಜ್ಯಪಾಲರು ಇರುತ್ತಾರೆ
– ಅಧಿಕಾರದ ನಿಯಂತ್ರಣವು ರಾಜ್ಯ ಹಾಗೂ ಕೇಂದ್ರದ ನಡುವೆ ಹಂಚಿಕೆಯಾಗಿರುತ್ತದೆ
– ಬೃಹತ್‌ ಭೂಪ್ರದೇಶವನ್ನು ಹೊಂದಿರುತ್ತದೆ

ಕೇಂದ್ರಾಡಳಿತ ಪ್ರದೇಶ
– ನೇರವಾಗಿ ಕೇಂದ್ರ ಸರ್ಕಾರವೇ ಆಡಳಿತ ನಡೆಸುತ್ತದೆ
– ಆಡಳಿತಗಾರರನ್ನು ರಾಷ್ಟ್ರಪತಿಯೇ ನೇಮಿಸುತ್ತಾರೆ
– ಸಾಂವಿಧಾನಿಕ ಮುಖ್ಯಸ್ಥರು ರಾಷ್ಟ್ರಪತಿಯೇ ಆಗಿರುತ್ತಾರೆ
– ಎಲ್ಲ ಅಧಿಕಾರವೂ ಕೇಂದ್ರ ಸರ್ಕಾರದ ಕೈಯ್ಯಲ್ಲಿರುತ್ತದೆ
– ಬಹುತೇಕ ರಾಜ್ಯಗಳಿಗೆ ಹೋಲಿಸಿದರೆ, ಅಲ್ಪಪ್ರಮಾಣದ ಭೂಪ್ರದೇಶ ಹೊಂದಿರುತ್ತದೆ.

ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿರುವಂಥ ಸರ್ಕಾರದ ಕ್ರಮವನ್ನು ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ದೇಶದ ಹಿತದೃಷ್ಟಿಯಿಂದ ಇದು ಅತ್ಯಂತ ಮಹತ್ವದ ನಿರ್ಧಾರ.
ಮೋಹನ್‌ ಭಾಗವತ್‌, ಆರ್‌ಎಸ್‌ಎಸ್‌ ಮುಖ್ಯಸ್ಥ

ಸರ್ಕಾರ ಕಾಶ್ಮೀರಕ್ಕೆ ಮಾಡಿದ್ದು ಪ್ರತಿಗಾಮಿ ಕ್ರಮ. ಇದು ಜಮ್ಮು ಕಾಶ್ಮೀರದ ಜನತೆಯನ್ನು ಭಾರತದಿಂದ ಇನ್ನಷ್ಟು ದೂರು ಮಾಡುತ್ತದೆ. ಕೇಂದ್ರಾಡಳಿತ ಹೇರುವ ಮೂಲಕ ಜಮ್ಮು ಕಾಶ್ಮೀರಕ್ಕಿದ್ದ ಸ್ವಾಯತ್ತ ಸ್ಥಾನಮಾನ ಹೊಸಕಿ ಹಾಕಲಾಯಿತು.
-ಡಿ. ರಾಜ, ಸಿಪಿಐ ಪ್ರಧಾನ ಕಾರ್ಯದರ್ಶಿ

ಪ್ರತ್ಯೇಕತಾವಾದಿಗಳಿಗಾಗಿ ಪ್ರತ್ಯೇಕ ರಾಜ್ಯ. ಯಾವ ಕ್ರಿಯಾತ್ಮಕ ರಾಜ್ಯವೂ ಈ ಸ್ಥಿತಿಯನ್ನು ಒಪ್ಪುವುದಿಲ್ಲ. ಐತಿಹಾಸಿಕವಾಗಿ ಆಗಿದ್ದ ತಪ್ಪನ್ನು ಇಂದು ಸರಿಪಡಿಸಲಾಯಿತು.
-ಅರುಣ್‌ ಜೇಟ್ಲಿ, ಬಿಜೆಪಿ ನಾಯಕ

ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದಾಗಿ ಟ್ರಂಪ್‌ ಹೇಳಿದ ಮಾತು ಕೇಳಿ ಇಮ್ರಾನ್‌ ಖಾನ್‌ ಮೂರ್ಖರಾದರು. ಭಾರತ ಸರ್ಕಾರದ ಯೋಜನೆಗಳೇನು ಎಂಬುದನ್ನು ಊಹಿಸುವಲ್ಲಿ ವಿಫ‌ಲರಾದರು.
-ಮರ್ಯಮ್‌ ನವಾಜ್‌, ಪಾಕ್‌ ಮಾಜಿ ಪಿಎಂ ನವಾಜ್‌ ಷರೀಫ್ ಪುತ್ರಿ

ದೇಶಕ್ಕಾಗಿ ಪ್ರಾಣ ಕೊಟ್ಟ ಎಲ್ಲಾ ಹುತಾತ್ಮರಿಗೂ ಇದು ದೊಡ್ಡ ಕೊಡುಗೆ. ಇದಕ್ಕಾಗಿ ಅಮಿತ್‌ ಶಾ, ಮೋದಿ ಅವರಿಗೆ ಧನ್ಯವಾದಗಳು.
-ವಿವೇಕ್‌ ಒಬೆರಾಯ್‌, ನಟ

Advertisement

Udayavani is now on Telegram. Click here to join our channel and stay updated with the latest news.

Next