Advertisement

ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸಚಿವರು ಕಿಡಿ

07:00 AM Mar 09, 2018 | Team Udayavani |

ಬೆಂಗಳೂರು: ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಹತ್ಯೆ ಯತ್ನ ಪ್ರಕರಣ ಸೇರಿ ರಾಜ್ಯದ ಕಾನೂನು ಸುವ್ಯವಸ್ಥೆ ನಿರ್ವಹಿಸುವಲ್ಲಿ ಸರ್ಕಾರ ವಿಫ‌ಲವಾಗಿರುವ ಬಗ್ಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳೂ ಆಗಿರುವ ಕೇಂದ್ರ ಸಚಿವರಾದ ಪ್ರಕಾಶ್‌ ಜಾವಡೇಕರ್‌ ಮತ್ತು ಪಿಯೂಷ್‌ ಗೋಯೆಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಗುರುವಾರ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ನ್ಯಾ. ವಿಶ್ವನಾಥ ಶೆಟ್ಟಿ ಅವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಲೋಕಾಯುಕ್ತರಿಗೆ ದೂರುದಾರನೊಬ್ಬ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿರುವುದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.

ಪ್ರತಿಷ್ಠಿತ ಹುದ್ದೆಯಲ್ಲಿರುವ ಲೋಕಾಯುಕ್ತರಿಗೇ ಸರ್ಕಾರ ಸೂಕ್ತ ಭದ್ರತೆ ಒದಗಿಸಿಲ್ಲ ಎಂದರೆ ಜನ ಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಈಗಾಗಲೇ ಹದಗೆಟ್ಟಿದೆ. ಈ ಹಿಂದೆ ಬಸ್‌ನಲ್ಲಿ ಹಾಡ ಹಗಲೇ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿತ್ತು. ನಂತರ ಶಾಸಕರ ಕಡೆಯವರು ಅಮಾಯಕನ ಮೇಲೆ ಹಲ್ಲೆ ಮಾಡಿದ ಪ್ರಕರಣ ನಡೆದಿದೆ. ಶಾಸಕರ ಪುತ್ರನೇ ಉದ್ಯಮಿ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈಗ ಲೋಕಾಯುಕ್ತರನ್ನೇ ಕೊಲೆ ಮಾಡಲು ಹೊರಟಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂಬ ಆತಂಕ ಕಾಣಿಸಿದೆ ಎಂದು ಹೇಳಿದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಮಾತನಾಡಿ, ಲೋಕಾಯುಕ್ತರ ಹತ್ಯೆ ಯತ್ನ ದೊಡ್ಡ ಅನಾಹುತವಾಗಿದ್ದು, ರಾಜ್ಯವೇ ತಲೆ ತಗ್ಗಿಸುವಂತಹ ವಿಷಯ. ಕಾಂಗ್ರೆಸ್‌ ಶಾಸಕರ ಮಗನೇ ಇತ್ತೀಚೆಗೆ ಗೂಂಡಾಗಿರಿ ಮಾಡಿದ್ದಾರೆ. ಇದು ಗೂಂಡಾಗಳ ರಾಜ್ಯವಾಗುತ್ತಿದೆ ಎಂದು ಕಿಡಿ
ಕಾರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next