Advertisement

ಪ್ರವೀಣ್‌ ನೆಟ್ಟಾರು ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

06:04 PM Jul 31, 2022 | Team Udayavani |

ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಯಾದ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರವಿವಾರ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ತಿಳಿಸಿದರು.

Advertisement

ತನ್ನ ಒಂದು ತಿಂಗಳ ಸಂಬಳ ಹಾಗೂ ಬೆಂಗಳೂರಿನ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಸಂಗ್ರಹಿಸಿದ ಆರ್ಥಿಕ ನೆರವನ್ನು ಮನೆಯವರಿಗೆ ಹಸ್ತಾಂತರಿಸಿದರು.

ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಕಾರ್ಯದರ್ಶಿ ಪ್ರಕಾಶ್‌, ಮಾಜಿ ಸಚಿವ ನಾಗರಾಜ ಶೆಟ್ಟಿ, ಸಹಜ್‌ ರೈ, ಅರುಣ್‌ ಕುಮಾರ್‌ ಪುತ್ತಿಲ ಜತೆಗಿದ್ದರು.

ಈಗ ಎಲ್ಲರೂ ಘಟನೆ ಬಗ್ಗೆ ಧ್ವನಿ ಎತ್ತುತ್ತಾರೆ, ಬಳಿಕ ಸುಮ್ಮನಾಗಬಾರದು. ಪ್ರಕರಣದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಪ್ರವೀಣ್‌ ತಾಯಿ ಸಚಿವರಲ್ಲಿ ತಿಳಿಸಿದರು. ಸಚಿವೆ ಶೋಭಾ ಕರಂದ್ಲಾಜೆ ಮನೆಯವರಿಗೆ ಧೈರ್ಯ ಹೇಳಿ ಸಂತೈಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಘಟನೆ ವೇಳೆ ನಾನು ದಿಲ್ಲಿಯಲ್ಲಿದ್ದೆ. ಮಾಹಿತಿ ಬಂದ ಮರುದಿನವೇ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಸೂಕ್ತ ರೀತಿಯ ತನಿಖೆಗೆ ಆಗ್ರಹಿಸಿದ್ದೇನೆ. ಈ ಹಿಂದೆ ನಡೆದ ಪ್ರಕರಣ ಮಾದರಿಯಲ್ಲಿ ಈ ಕೃತ್ಯ ನಡೆದಿದೆ.

Advertisement

ಕೇರಳ ಮಾದರಿಯಲ್ಲಿ ಕೊಲೆ ನಡೆದಿದ್ದು, ಪಿಎಫ್ಐ ಕೊಲೆ ಮಾಡುವ ರೀತಿಯಲ್ಲಿದೆ. ವಿದೇಶದಲ್ಲಿ ತರಬೇತಿ ಪಡೆದು ಇಲ್ಲಿ ಕೃತ್ಯ ಎಸಗುವ ಸಂಭವವೂ ಇದ್ದು, ಈ ಕೃತ್ಯದ ಹಿಂದೆಯೂ ಪಿಎಫ್ಐ ಕೈವಾಡ ಇರುವ ಊಹೆಯಲ್ಲೂ ಗೃಹ ಸಚಿವರಿಗೆ ಮಾಹಿತಿ ನೀಡಿದ್ದೇನೆ ಎಂದರು.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿದ್ದು, ಅವರ ಮೇಲೆ ವಿಶ್ವಾಸ ಇದೆ. ನಿಜವಾದ ಎಲ್ಲಾ ಆರೋಪಿಗಳನ್ನು ಬಂಧಿಸುವ ಮೂಲಕ ಪ್ರವೀಣ್‌ಗೆ ನ್ಯಾಯ ಕೊಡಿಸುವ ಕೆಲಸವಾಗ ಬೇಕೆಂದರು.

ಪ್ರವೀಣ್‌ ಮನೆಗೆ ಬಿ.ಕೆ.ಹರಿಪ್ರಸಾದ್‌ ಭೇಟಿ
ಸುಳ್ಯ: ಪ್ರವೀಣ್‌ ನೆಟ್ಟಾರು ಮನೆಗೆ ರವಿವಾರ ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ಅಭಯಚಂದ್ರ ಜೈನ್‌, ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್‌ ಶಿವರಾಮ, ಡಾ| ರಘು ಉಪಸ್ಥಿತರಿದ್ದರು.

ಮಾಧ್ಯಮ ಜತೆ ಮಾತನಾಡಿದ ಬಿ.ಕೆ. ಹರಿಪ್ರಸಾದ್‌, ರಾಜ್ಯದಲ್ಲಿ ಗುಪ್ತಚರ ಇಲಾಖೆ ಸಂಪೂರ್ಣ ವಿಫ‌ಲವಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮುಂದಿನ 15 ದಿನಗಳಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಕಾಂಗ್ರೆಸ್‌ ವತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.

ಬಿಜೆಪಿ ಸರಕಾರದಲ್ಲಿ ಅವರ ಕಾರ್ಯಕರ್ತರಿಗೆ ರಕ್ಷಣೆ ನೀಡಲಾಗುತ್ತಿಲ್ಲ. ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ಜರಗಿಸಬೇಕು ಎಂದರು.

ಕಾಂಗ್ರೆಸ್‌ ನಾಯಕರ ಭೇಟಿ ವೇಳೆ ಕುಟುಂಬಸ್ಥರು ಅಸಮಾಧಾನ ಹೊರಹಾಕಿದ ಘಟನೆಯೂ ನಡೆದಿದೆ. ರಮಾನಾಥ ರೈ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖಂಡರು ತೆರಳುವ ವೇಳೆ ದಿಕ್ಕಾರ ಕೂಗಲಾಯಿತು.

ವಿನಯ ಕುಮಾರ್‌ ಸೊರಕೆ ಭೇಟಿ
ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಪ್ರವೀಣ್‌ ಮನೆಗೆ ರವಿವಾರ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next