Advertisement

ಅನಂತ್‌ ಕ್ಷಮೆ; ಸ್ಪೀಕರ್‌ ಮಾತಿಗೆ ಮಣಿದ ಕೇಂದ್ರ ಸಚಿವ

06:00 AM Dec 29, 2017 | |

ನವದೆಹಲಿ: ಸಂವಿಧಾನ ಬದಲಿಸುವುದಾಗಿ ಹೇಳಿ ವಿವಾದಕ್ಕೆ ಸಿಲುಕಿದ್ದ ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ಸಹಾಯಕ ಸಚಿವ ಅನಂತ ಕುಮಾರ್‌ ಹೆಗಡೆ, ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿಯದಿದ್ದರೂ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಆಕ್ಷೇಪಕ್ಕೆ ಮಣಿದು ಲೋಕಸಭೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.

Advertisement

ಗುರುವಾರ ಎಂದಿನಂತೆ ಲೋಕಸಭೆಯ ಕಲಾಪ ಆರಂಭವಾಯಿತು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಕಲಾಪದಲ್ಲಿ ಉಪಸ್ಥಿತರಿದ್ದರು. ಕಲಾಪ ಆರಂಭಗೊಳ್ಳುತ್ತಿದ್ದಂತೆ, ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್‌ನ ಧುರೀಣ ಮಲ್ಲಿಕಾರ್ಜುನ ಖರ್ಗೆ, ಹೆಗಡೆ ವಿಚಾರವನ್ನು ಎತ್ತಿ, ಸಚಿವರು ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಕಾಂಗ್ರೆಸ್‌ ಸೇರಿದಂತೆ ಅನೇಕ ಪ್ರತಿಪಕ್ಷಗಳ ಸಂಸದರೂ ಸಾಥ್‌ ನೀಡಿದರು.

ಇದಕ್ಕೆ ಸ್ಪಂದಿಸಿದ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಹೆಗಡೆಯವರಿಗೂ ಈ ಆರೋಪಗಳಿಗೆ ಉತ್ತರಿಸಲು ಅವಕಾಶ ನೀಡುವುದಾಗಿ ಹೇಳಿ, ಹೆಗಡೆಯವರಿಗೆ ಮಾತನಾಡಲು ಅವಕಾಶ ಕಲ್ಪಿಸಿದರು.

ಅಂತೆಯೆ, ಉತ್ತರ ನೀಡಲು ನಿಂತ ಹೆಗಡೆ, “ಭಾರತೀಯ ಪ್ರಜೆಯಾದ ತಮಗೆ ಸಂವಿಧಾನ ಹಾಗೂ ಸಂವಿಧಾನ ಕತೃì ಡಾ.ಬಿ.ಆರ್‌. ಅಂಬೇಡ್ಕರ್‌ ಬಗ್ಗೆ ಅಪಾರ ಗೌರವವಿದೆ. ಸಂವಿಧಾನಕ್ಕೆ ಚ್ಯುತಿ ತರುವ ಬಗ್ಗೆ ಆಲೋಚನೆ ಸಹ ಮಾಡಲಾರೆ’ ಎಂದರು.

ಆದರೆ ಇದು ಪ್ರತಿಪಕ್ಷಗಳನ್ನು ತೃಪ್ತಿಪಡಿಸಲಿಲ್ಲ. ಹೆಗಡೆ ಕ್ಷಮೆ ಕೋರುತ್ತಿಲ್ಲವೆಂದು ಆಕ್ಷೇಪಿಸಿದ ಪ್ರತಿಪಕ್ಷಗಳ ಸದಸ್ಯರು, ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ತೀವ್ರ ಪ್ರತಿಭಟನೆಗೆ ಮುಂದಾದರು. ಆಗ ಸದನದಲ್ಲಿ ಪುನಃ ಗದ್ದಲ ಏರ್ಪಟ್ಟಿತು.

Advertisement

ಸ್ಪೀಕರ್‌ ಆಕ್ಷೇಪ: ಪ್ರತಿಭಟನೆ ನಡುವೆಯೇ ಮಧ್ಯೆ ಪ್ರವೇಶಿಸಿದ ಸುಮಿತ್ರಾ ಮಹಾಜನ್‌, ಹೆಗಡೆಯವರನ್ನುದ್ದೇಶಿಸಿ, “”ಅಂಬೇಡ್ಕರ್‌ ಅಥವಾ ಸಂವಿಧಾನದ ಬಗ್ಗೆ ನೀವು ಎಷ್ಟು ಗೌರವ ಹೊಂದಿದ್ದೀರಿ ಎಂಬುದರ ಬಗ್ಗೆ ಇಲ್ಲಿ ಚರ್ಚೆಯಾಗುತ್ತಿಲ್ಲ. ಆದರೆ, ನೀವು ಇತ್ತೀಚೆಗೆ ನೀಡಿದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ನಿಮ್ಮ ಮಾತು ನಿಮಗೆ ಸರಿಯೆನಿಸಿದರೂ ಮತ್ಯಾರಿಗೋ ಅದು ನೋವುಂಟು ಮಾಡಿದೆ. ಹಾಗಾಗಿ, ಕ್ಷಮೆ ಕೇಳುವುದು ನಿಮ್ಮ ಧರ್ಮ. ಅಲ್ಲದೆ, ಕ್ಷಮೆ ಕೇಳುವುದರಿಂದ ನಿಮ್ಮ ಘನತೆಯೇನೂ ಕುಂದುವುದಿಲ್ಲ” ಎಂದು ಕಿವಿಮಾತು ಹೇಳಿದರು. ಸ್ಪೀಕರ್‌ ಮಾತಿಗೆ ಬೆಲೆ ಕೊಟ್ಟ ಹೆಗಡೆ, ಕೊನೆಗೂ ಲೋಕಸಭೆಯಲ್ಲಿ ಕ್ಷಮೆ ಯಾಚಿಸುವ ಮೂಲಕ ವಿವಾದಕ್ಕೆ ಇತಿಶ್ರೀ ಹಾಡಿದರು.

ಎರಡು ದಿನ ವ್ಯರ್ಥ: ಹೆಗಡೆಯವರ ಕ್ಷಮೆಯಾಚನೆಗೆ ಆಗ್ರಹಿಸಿ ಮಂಗಳವಾರವೂ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿ ಕಲಾಪದ ಸಮಯವನ್ನು ವ್ಯರ್ಥಗೊಳಿಸಿದ್ದವು. ಇದೀಗ, ಪ್ರತಿಭಟನೆಯ ಸತತ 2ನೇ ದಿನದಲ್ಲಿ ಅನಂತ್‌ ಕ್ಷಮೆ ಪಡೆಯುವುದರೊಂದಿಗೆ ಈ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.
   
ರಾಜ್ಯಸಭೆಯಲ್ಲಿಯೂ ಗದ್ದಲ
ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ  ಪ್ರತಿಪಕ್ಷಗಳು ರಾಜ್ಯಸಭೆಯಲ್ಲೂ ಗದ್ದಲ ನಡೆಸಿದವು. ಗುರುವಾರ ಬೆಳಗ್ಗೆ ಎಂದಿನಂತೆ ಕಲಾಪ ಆರಂಭವಾದ ಕೂಡಲೇ ಶೂನ್ಯ ವೇಳೆಯಲ್ಲಿ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌, ಹೆಗಡೆ ವಿರುದ್ಧ ಕಿಡಿಕಾರಿದರು. ಇದಕ್ಕೆ ಪ್ರತಿಪಕ್ಷಗಳ ಸದಸ್ಯರೂ ದನಿಗೂಡಿಸಿದಾಗ ಸದನದಲ್ಲಿ ಗದ್ದಲ ಏರ್ಪಟ್ಟಿತು. ಹಾಗಾಗಿ, ಮೊದಲಿಗೆ ಅಪರಾಹ್ನ 12 ಗಂಟೆಗೆ ಮುಂದೂಡಲಾಯಿತು. 12 ಗಂಟೆಗೆ ಮತ್ತೆ ಸಭೆ ಸೇರಿದಾಗ, ಕಾಂಗ್ರೆಸ್‌ ಸಂಸದ ರಾಜೀವ್‌ ಗೌಡ, ಅವರು ಹೆಗಡೆ ವಿರುದ್ಧ ಮಾತನಾಡಲು ಅವಕಾಶ ಕೋರಿದರು. ಆದರೆ, ಸ್ಪೀಕರ್‌ ಹಾಗೂ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಇದಕ್ಕೆ ಸಮ್ಮತಿಸಲಿಲ್ಲ. ಹಾಗಾಗಿ, ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಪಕ್ಷಗಳ ಸದಸ್ಯರು ಗದ್ದಲ ಸೃಷ್ಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next