Advertisement

ಸಿಎಂ ಬೊಮ್ಮಾಯಿ ನಿರಾಳ; ಮುಖ್ಯಮಂತ್ರಿ ನಾಯಕತ್ವಕ್ಕೆ ಶಾ ಬೆಂಬಲ

08:54 AM May 04, 2022 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯ ನಾಯಕತ್ವ ಗೊಂದಲಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತೆರೆ ಎಳೆದಿದ್ದು, ಊಹಾಪೋಹಗಳಿಗೆ ತಲೆ ಕೆಡಿಸಿಕೊಳ್ಳದೆ ಅಭಿವೃದ್ಧಿಯ ವೇಗ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಇದರ ಬೆನ್ನಲ್ಲೇ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮತ್ತಿತರ ಪ್ರಮುಖ ನಾಯಕರು ಕೂಡ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಈ ಮೂಲಕ ನಾಯಕತ್ವ ಬದಲಾವಣೆಯ ಕುರಿತಾದ ಬೆಳವಣಿಗೆಗಳಿಗೆ ತೆರೆ ಎಳೆಯಲಾಗಿದ್ದರೆ, ಸಂಪುಟ ಪುನಾರಚನೆಯ ಸುಳಿವು ದೊರೆತಿದೆ. ಈ ಕುರಿತು ಕೇಂದ್ರದಿಂದ ಸೂಚನೆ ನೀಡುವುದಾಗಿ ಅಮಿತ್‌ ಶಾ ಅವರು ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಆಕಾಂಕ್ಷಿಗಳ ಆಸೆ ಮತ್ತೆ ಗರಿಗೆದರಿದೆ.

ಸೋಮವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಅಮಿತ್‌ ಶಾ ಕೂಡಲೇ ಸಿಎಂ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ರಾಜ್ಯದ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ಇದ್ದು, ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇನ್ನಷ್ಟು ಆಕ್ರಮಣಕಾರಿಯಾಗಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಸದಾ ಅಭಿವೃದ್ಧಿ ಆಧಾರದಲ್ಲಿಯೇ ಚುನಾವಣೆ ಎದುರಿಸಿ ಜಯ ಗಳಿಸುತ್ತ ಬಂದಿದ್ದು, ರಾಜ್ಯದಲ್ಲೂ ಅದೇ ಅಜೆಂಡಾದೊಂದಿಗೆ ಚುನಾವಣೆ ಎದುರಿಸಬೇಕು. ಘೋಷಣೆಯಾದ ಯೋಜನೆಗಳು ಜನರಿಗೆ ತಲುಪುವಂತೆ ನೋಡಿಕೊಂಡು, ಅಭಿವೃದ್ಧಿಯ ವೇಗ ಹೆಚ್ಚಿಸುವಂತೆ ಸೂಚಿಸಿದ್ದಾರೆ. ನಾಯಕತ್ವ ಗೊಂದಲ ಸೃಷ್ಟಿಸುವವರಿಗೆ ಸೂಕ್ತ ಸಂದರ್ಭದಲ್ಲಿ ಸ್ಪಷ್ಟ ಸಂದೇಶ ಕಳುಹಿಸುವುದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಡೀ ದಿನ ಶಾ ಸಕ್ರಿಯ
ಅಮಿತ್‌ ಶಾ ಮಂಗಳವಾರವಿಡೀ ಸರಕಾರಿ ಕಾರ್ಯಕ್ರಮಗಳ ಜತೆಗೆ ಪಕ್ಷದ ರಾಜಕೀಯ ಚಟುವಟಿಕೆಗಳಲ್ಲಿ ಬಿಡುವಿಲ್ಲದೆ ತೊಡಗಿಕೊಂಡರು.

Advertisement

ಭೋಜನದ ಮುಂಚೆ ಸಭೆ
ಮುಖ್ಯಮಂತ್ರಿ ಬೊಮ್ಮಾಯಿ ತಮ್ಮ ಸರಕಾರಿ ನಿವಾಸದಲ್ಲಿ ಏರ್ಪಡಿಸಿದ್ದ ವಿಶೇಷ ಭೋಜನ ಕೂಟದಲ್ಲಿ ಪಾಲ್ಗೊಳ್ಳುವುದಕ್ಕೆ ಮುನ್ನವೇ ಅಮಿತ್‌ ಶಾ ಅವ ರು, ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌, ಮಾಜಿ ಸಿಎಂ ಬಿಎಸ್‌ವೈ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಅವರೊಂದಿಗೆ ಸುಮಾರು 15 ನಿಮಿಷ ಚರ್ಚೆ ನಡೆಸಿದರು. ಈ ವೇಳೆ ಸಂಪುಟ ಪುನಾರಚನೆಯೂ ಪ್ರಸ್ತಾವನೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಾಯಕತ್ವ ಬದಲಾವಣೆ ಇಲ್ಲ
ನಾಯಕತ್ವ ಬದಲಾವಣೆಗಳ ಕುರಿತ ಗೊಂದಲಗಳಿಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಮೂಲಕ ತೆರೆ ಎಳೆಯುವ ಪ್ರಯತ್ನವನ್ನು ಅಮಿತ್‌ ಶಾ ಮಾಡಿದ್ದಾರೆ. ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಇರುವಾಗ ನಾಯಕತ್ವ ಬದಲಾವಣೆ ಮಾಡುವುದರಿಂದ ನಕಾರಾತ್ಮಕ ಸಂದೇಶ ರವಾನೆಯಾಗುತ್ತದೆ ಎನ್ನುವ ಕಾರಣದಿಂದ ಬಿಜೆಪಿ ವರಿಷ್ಠರು ಸದ್ಯ ಮುಖ್ಯಮಂತ್ರಿ ಬದಲಾವಣೆಯ ವಿಚಾರವನ್ನು ಕೈಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಜೆಪಿ ಶಾಸಕರ ಬಹುದಿನಗಳ ಬೇಡಿಕೆಯಾಗಿರುವ ಸಂಪುಟ ಪುನಾರಚನೆಗೆ ಅಮಿತ್‌ ಶಾ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಈ ಕುರಿತು ದಿಲ್ಲಿಯಿಂದ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಹುದ್ದೆಯ ಜತೆಗೆ ಮೂರರಿಂದ ನಾಲ್ಕು ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿ ಮಾಡಲಾಗುತ್ತದೆ. ಜಾತಿ ಮತ್ತು ಪ್ರಾದೇಶಿಕತೆಯ ಆಧಾರದಲ್ಲಿ ಒಕ್ಕಲಿಗ, ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗದವರಿಗೆ ಈ ನಾಲ್ಕು ಡಿಸಿಎಂ ಸ್ಥಾನಗಳನ್ನು ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಚಿವ ಸಂಪುಟದಲ್ಲಿ ಖಾಲಿ ಇರುವ ಐದು ಸ್ಥಾನಗಳ ಜತೆಗೆ ಐದಾರು ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸುವ ಬಗ್ಗೆ ಕೂಡ ಚರ್ಚೆ ನಡೆದಿದೆ. ಈ ವಾರಾಂತ್ಯದೊಳಗೆ, ಅಂದ ರೆ ಮೇ 5 ಅಥವಾ 6ರಂದು ಹೊಸಬರು ಸಚಿವ ಸಂಪುಟ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಕ್ಷದಲ್ಲಿ ಬದಲಾವಣೆ
2023ರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಪಕ್ಷದಲ್ಲಿ ಕೂಡ ಸಾಕಷ್ಟು ಬದಲಾವಣೆ ತರಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಹೊಸ ರಾಜ್ಯಾಧ್ಯಕ್ಷರ ನೇಮಕ ಸಹಿತ ಸಂಘಟನಾತ್ಮಕವಾಗಿ ಕೆಲವು ಪ್ರಮುಖ ಹುದ್ದೆಗಳಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಸಂಪುಟದಿಂದ ಕೈ ಬಿಡುವ ಕೆಲವು ಹಿರಿಯ ಸಚಿವರಿಗೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಗೊಂದಲದಲ್ಲಿ ಶಾಸಕರು
ಸಿಎಂ ನಿವಾಸದ ಭೋಜನ ಕೂಟ ಸಂದರ್ಭದಲ್ಲಿಯೇ ಅಮಿತ್‌ ಶಾ ಎಲ್ಲರನ್ನೂ ಉದ್ದೇಶಿಸಿ ಮಾತನಾಡುತ್ತಾರೆ. ಆಗಲೇ ಸಂಪುಟ ಪುನಾರಚನೆಯ ಮಾಹಿತಿ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಶಾಸಕರಿಗೆ ನಿರಾಸೆಯಾಗಿದೆ. ಶಾ ಅವ ರು ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಯಡಿಯೂರಪ್ಪ, ನಳಿನ್‌ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ, ಎಲ್ಲ ಶಾಸಕರು ಮತ್ತು ಸಚಿವರಿಗೆ ಭೋಜನ ಸ್ವೀಕರಿಸುವಂತೆ ಸೂಚಿಸಿ ತೆರಳಿದ್ದರು.

ಸಿಎಂ ಲವಲವಿಕೆ
ಸೋಮವಾರ ರಾತ್ರಿಯೇ ನಾಯಕತ್ವ ಗೊಂದಲ ತಿಳಿಯಾದದ್ದರಿಂದ ಸಿಎಂ ಬೊಮ್ಮಾಯಿ ಮಂಗಳವಾರ ದಿನವಿಡೀ ಅಮಿತ್‌ ಶಾ ಅವರೊಂದಿಗೆ ಲವಲವಿಕೆಯಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಎರಡು-ಮೂರು ದಿನಗಳಲ್ಲಿ ನಿಶ್ಚಿತವಾಗಿ ಸಂಪುಟ ಪುನಾರಚನೆ ಆಗಲಿದೆ ಎನ್ನುವ ವಿಶ್ವಾಸ ಇದೆ. ಆ ಬಗ್ಗೆ ಸ್ಪಷ್ಟ ತೀರ್ಮಾನ ತಗೆದುಕೊಂಡು ಅಮಿತ್‌ ಶಾ ರಾಜ್ಯಕ್ಕೆ ಬಂದಿದ್ದಾರೆ ಅಂದುಕೊಂಡಿದ್ದೇನೆ. ಅಥವಾ ದಿಲ್ಲಿಗೆ ಹೋಗಿ ಮೋದಿಯವರ ಜತೆ ಚರ್ಚಿಸಿ ತೀರ್ಮಾನ ಮಾಡಲೂಬಹುದು. ಆದಷ್ಟು ಬೇಗ ಸಂಪುಟ ಪುನಾರಚನೆ ಆಗುತ್ತದೆ. ಸಿಎಂ ಬದಲಾವಣೆಯ ವಿಚಾರ ಕೇವಲ ಊಹಾಪೋಹ.
-ಬಿ.ಎಸ್‌. ಯಡಿಯೂರಪ್ಪ,
ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next