ನವದೆಹಲಿ: ವಿವಾದಿತ ಮೂರು ಕೃಷಿ ಕಾಯ್ದೆಯನ್ನು ರದ್ದು ಮಾಡುವ ಮಸೂದೆಗೆ ಬುಧವಾರ (ನವೆಂಬರ್ 24) ನಡೆದ ಕೇಂದ್ರ ಸಂಪುಟ ಸಭೆ ನಿರ್ಣಯ ಅಂಗೀಕರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:#What’s App: ಸಂದೇಶಗಳನ್ನು ಕಳುಹಿಸಿದ 7 ದಿನಗಳ ಬಳಿಕವೂ ಅಳಿಸುವ ಆಯ್ಕೆ..!
ಕೃಷಿ ಕಾಯ್ದೆ ಮಸೂದೆ 2021 ರದ್ದುಗೊಳಿಸುವ ಪ್ರಸ್ತಾಪಕ್ಕೆ ಇಂದು ಬೆಳಗ್ಗೆ ನಡೆದ ಕೇಂದ್ರ ಸಂಪುಟ ಸಭೆ ಅಂಕಿತ ನೀಡಿದೆ. ಪ್ರಧಾನಮಂತ್ರಿ ಕಚೇರಿಯನ್ನು ಸಂಪರ್ಕಿಸಿ ಈ ಮಸೂದೆಯನ್ನು ರದ್ದುಗೊಳಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.
ಮೂರು ಕಾಯ್ದೆಗಳನ್ನು ರದ್ದು ಮಾಡುವ ಬಗ್ಗೆ ಒಂದೇ ಮಸೂದೆ ಮಂಡಿಸುವ ಮೂಲಕ ಕಾಯ್ದೆಗಳನ್ನು ವಾಪಸ್ ಪಡೆಯಲು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಕಳೆದ ವರ್ಷ ಲೋಕಸಭೆಯಲ್ಲಿ ಮೂರು ಕೃಷಿ ಕಾಯ್ದೆಗಳ ಮಸೂದೆಯನ್ನು ಜಾರಿ ಮಾಡಲಾಗಿತ್ತು. ಆದರೆ ರೈತ ಸಂಘಟನೆಗಳು ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಒಂದು ವರ್ಷಗಳ ಕಾಲ ತೀವ್ರ ಪ್ರತಿಭಟನೆ ನಡೆಸಿವೆ.
ಇದೀಗ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ನಿರ್ಣಯಕ್ಕೆ ಕೇಂದ್ರ ಸಚಿವ ಸಂಪುಟ ಅಂಗೀಕಾರ ನೀಡಿದ್ದು, ಮುಂಬರುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು. ನವೆಂಬರ್ 29ರಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಡಿಸೆಂಬರ್ 23ರವರೆಗೆ ಅಧಿವೇಶನ ನಡೆಯಲಿದೆ.
ಗುರು ನಾನಕ್ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾಯ್ದೆಗಳನ್ನು ಸಾಂವಿಧಾನಿಕ ಪ್ರಕ್ರಿಯೆ ಮೂಲಕ ರದ್ದುಗೊಳಿಸಲಾಗುವುದು ಎಂದು ಘೋಷಿಸಿದ್ದರು. ಅಲ್ಲದೇ ಈ ಬಗ್ಗೆ ದೇಶದ ಕ್ಷಮೆಯಾಚಿಸಿದ ಪ್ರಧಾನಿ, ರೈತರು ಪ್ರತಿಭಟನೆಯನ್ನು ಕೈಬಿಟ್ಟು ಮನೆಗಳಿಗೆ ತೆರಳುವಂತೆ ಮನವಿ ಮಾಡಿದ್ದರು. ಆದರೆ ಮೂರು ಕೃಷಿ ಕಾಯ್ದೆ ಸಂಸತ್ ಅಧಿವೇಶನದಲ್ಲಿ ರದ್ದುಗೊಂಡ ನಂತರವೇ ಪ್ರತಿಭಟನೆ ಸ್ಥಗಿತಗೊಳಿಸುವುದಾಗಿ ರೈತ ಸಂಘಟನೆ ಮುಖಂಡ ರಾಕೇಶ್ ಟಿಕಾಯತ್ ಘೋಷಿಸಿದ್ದರು.