ನವದೆಹಲಿ: ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಬಿಗ್ ರಿಲೀಫ್ ಎನ್ನುವಂತೆ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿದ್ದು, ಇದರಿಂದಾಗಿ ಪ್ರಧಾನಮಂತ್ರಿ ಉಜ್ವಲಾ ಸ್ಕೀಮ್ ಫಲಾನುಭವಿಗಳಿಗೆ ಪ್ರತಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 400 ರೂಪಾಯಿ ಇಳಿಕೆ ಮಾಡಿರುವುದಾಗಿ ಘೋಷಿಸಿದೆ.
ಇದನ್ನೂ ಓದಿ:Chandan Shetty; ಟ್ರೆಂಡಿಗ್’ನಲ್ಲಿರಬೇಕಾದ್ರೆ ಏನ್ ಮಾಡೋಣ..: ಸೂತ್ರಧಾರಿ ಹಾಡು ಬಂತು
ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಪ್ರತಿ ಎಲ್ ಪಿಜಿ ಸಿಲಿಂಡರ್ ಗೆ ಹೆಚ್ಚುವರಿಯಾಗಿ 200 ರೂಪಾಯಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವುದಾಗಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಂಗಳವಾರ (ಆಗಸ್ಟ್ 29) ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಉಜ್ವಲಾ ಯೋಜನೇತರ ಗ್ರಾಹಕರಿಗೆ 14ಕೆಜಿಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಇಳಿಕೆಯಾಗಲಿದ್ದು,ಪ್ರತಿ ಸಿಲಿಂಡರ್ ಬೆಲೆ 900 ರೂಪಾಯಿ ಆಗಲಿದೆ.
ಉಜ್ವಲಾ ಸ್ಕೀಮ್ ನ ನೋಂದಾಯಿತ ಗ್ರಾಹಕರಿಗೆ ಒಟ್ಟು 400 ರೂಪಾಯಿ ಸಬ್ಸಿಡಿ ದೊರೆಯುವ ಮೂಲಕ ಪ್ರತಿ ಸಿಲಿಂಡರ್ ಬೆಲೆ 700 ರೂಪಾಯಿ ಆಗಲಿದೆ. ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಗೆ 200 ರೂಪಾಯಿ ಸಬ್ಸಿಡಿ ನೀಡುವ ನಿರ್ಧಾರದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಒಟ್ಟು 7,500 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಠಾಕೂರ್ ತಿಳಿಸಿದ್ದಾರೆ.
ರಕ್ಷಾ ಬಂಧನ್, ಓಣಂ ಹಬ್ಬದ ಸಂದರ್ಭದಲ್ಲಿ ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸುಮಾರು 73 ಲಕ್ಷ ಮಹಿಳಾ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಉಜ್ವಲಾ ಸ್ಕೀಮ್ ಸಬ್ಸಿಡಿಯನ್ನು ಮುಂದುವರಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಸಚಿವ ಠಾಕೂರ್ ತಿಳಿಸಿದ್ದಾರೆ.