Advertisement

ಬಜೆಟ್ ಕಿರು ವಿಮರ್ಶೆ: ಅನುದಾನದಲ್ಲಿ ಅಲ್ಪ ಹೆಚ್ಚಳ: ರಕ್ಷಣಾ ಪಡೆಗಳಿಗೆ ನಿರಾಸೆ

09:59 AM Feb 02, 2020 | keerthan |

ಮಣಿಪಾಲ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಲೋಕಸಭೆಯಲ್ಲಿ ಮಂಡಿಸಿದ 2020-21ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 3.37ಲಕ್ಷ ಕೋಟಿ ರೂ. ಗಳ ಅನುದಾನವನ್ನು ಮೀಸಲಿರಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷಕ್ಕೆ ಹೋಲಿಸಿದಲ್ಲಿ ಇದು ಕೇವಲ ಶೇ. 5.8ರಷ್ಟು ಹೆಚ್ಚಾಗಿದೆ. ನೆರೆಯ ರಾಷ್ಟ್ರಗಳು ಅದರಲ್ಲೂ ಪಾಕಿಸ್ಥಾನ ಮತ್ತು ಚೀನ ರಕ್ಷಣೆಗೆ ವಿಶೇಷ ಒತ್ತು ನೀಡಿ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಯುದ್ಧ ಸಾಮಗ್ರಿಗಳನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ಕೇಂದ್ರ ಸರಕಾರದ ಈ ನಡೆ ತುಸು ಅಚ್ಚರಿಗೆ ಕಾರಣವಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತ ಬಂದಿದೆ. ದೇಶದ ರಕ್ಷಣಾ ಪಡೆಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಮೂರೂ ಸೇನಾಪಡೆಗಳನ್ನು ಸ್ವಾವಲಂಬಿಯಾಗಿಸುವ ದಿಸೆಯಲ್ಲಿ ಹೆಜ್ಜೆ ಇರಿಸಿತ್ತು. ಆದರೆ ಈ ಬಾರಿಯ ಬಜೆಟ್‌ ಭಾಷಣದಲ್ಲಿ ಈ ಹಿಂದೆ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದ ನಿರ್ಮಲಾ ಸೀತಾರಾಮನ್‌ ಅವರು ರಕ್ಷಣಾ ಬಜೆಟ್‌ನ ಬಗ್ಗೆ ಎಲ್ಲೂ ಉಲ್ಲೇಖಿಸದಿರುವುದು ಸಹಜವಾಗಿಯೇ ಜನರಿಗೆ ಒಂದಿಷ್ಟು ಅಚ್ಚರಿ ಮೂಡಿಸಿದೆ.

ಮುಂಬರುವ ಸಾಲಿಗಾಗಿ ರಕ್ಷಣಾ ವಲಯಕ್ಕೆ ಹಂಚಿಕೆ ಮಾಡಲಾಗಿರುವ ಒಟ್ಟು ಮೊತ್ತದಲ್ಲಿ 1.18 ಲಕ್ಷ ಕೋಟಿ ರೂ.ಗಳಷ್ಟು ಬಂಡವಾಳ ವಿನಿಯೋಗ ಮತ್ತು 2.18 ಲಕ್ಷ ಕೋಟಿ ರೂ.ಗಳಷ್ಟು ಆದಾಯದಿಂದ ಸಂಗ್ರಹವಾಗಲಿದೆ. ಪ್ರಸಕ್ತ ಸಾಲಿಗೆ ಹೋಲಿಸಿದರೆ ಬಂಡವಾಳ ವಿನಿಯೋಗ ಮತ್ತು ಆದಾಯ ಪ್ರಮಾಣದಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಿದೆ. ಇದರಿಂದಾಗಿ ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಗಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಪ್ರಕ್ರಿಯೆಯ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿಂದಿನ ವರ್ಷಗಳಲ್ಲಿ ಕೇಂದ್ರ ಸರಕಾರ ಆರಂಭಿಸಿದ್ದ ಸೇನಾ ಪಡೆಗಳನ್ನು ಆಧುನೀಕರಣಗೊಳಿಸುವ ಮತ್ತು ಉನ್ನತೀಕರಣಗೊಳಿಸುವ ಯೋಜನೆಗಳ ಮೇಲೂ ಇದು ಕರಿಛಾಯೆ ಆವರಿಸುವಂತೆ ಮಾಡಿದೆ.

ಮುಂದಿನ ಹಣಕಾಸು ವರ್ಷದಲ್ಲಿ ಹೆಚ್ಚಿನ ಅನುದಾನಕ್ಕಾಗಿ ನೌಕಾ ಪಡೆ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಹಣಕಾಸು ಸಂಕಷ್ಟದಿಂದಾಗಿ ನೌಕಾ ಪಡೆ ಕೈಗೆತ್ತಿಕೊಂಡಿರುವ ಹಲವಾರು ಉಪಕ್ರಮಗಳ ಸಮರ್ಪಕ ಜಾರಿಗೆ ಅಡಚಣೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ನಿಧಿಯನ್ನು ನೀಡುವಂತೆ ಸರಕಾರವನ್ನು ಕೋರಿತ್ತು. ಆದರೆ ಇದೀಗ ಅನುದಾನದಲ್ಲಿ ಕೊರತೆಯಾಗಿರುವುದರಿಂದ ನೌಕಾ ಪಡೆ 2027ರ ಒಳಗಾಗಿ 200 ಯುದ್ಧನೌಕೆಗಳನ್ನು ಹೊಂದುವ ತನ್ನ ಯೋಜನೆಯನ್ನು ಪರಾಮರ್ಶಿಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ.

2019-20ನೇ ಸಾಲಿನಲ್ಲಿ ರಕ್ಷಣಾ ವಲಯಕ್ಕೆ ಮೀಸಲಿರಿಸಲಾಗಿದ್ದ ಅನುದಾನದಲ್ಲಿ ಹೆಚ್ಚಿನ ಪಾಲು ರಕ್ಷಣಾ ಪಡೆಗಳ ಯೋಧರ ಸಂಬಳ, ಪಿಂಚಣಿಗೇ ವಿನಿಯೋಗವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ರಕ್ಷಣಾ ವಲಯಕ್ಕೆ ಹೆಚ್ಚಿನ ಅನುದಾನ ನೀಡಲಿದೆ ಎಂದು ನಿರೀಕ್ಷಿಸಲಾಗಿತ್ತಾದರೂ ಕೇಂದ್ರ ಸರಕಾರ ಇದನ್ನು ಹುಸಿಯಾಗಿಸಿದೆ.

Advertisement

ಒಟ್ಟಾರೆಯಾಗಿ ಕೇಂದ್ರ ಸರಕಾರದ ಮುಂಬರುವ ಸಾಲಿನ ತನ್ನ ಬಜೆಟ್‌ನಲ್ಲಿ ರಕ್ಷಣಾ ವಲಯವನ್ನು ಆದ್ಯತೆಯ ಕ್ಷೇತ್ರವನ್ನಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ. ದೇಶದ ಭದ್ರತೆಯ ದೃಷ್ಟಿಯಿಂದ ಅತಿ ಮುಖ್ಯವಾಗಿರುವ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಅನುದಾನವನ್ನು ಮೀಸಲಿಡುವ ಮೂಲಕ ಹಾಲಿ ಯೋಜನೆಗಳನ್ನು ಪೂರ್ಣಗೊಳಿಸುವುದರ ಜತೆಗೆ ರಕ್ಷಣಾ ಕ್ಷೇತ್ರದಲ್ಲಿನ ಆಧುನಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅಣಿಗೊಳಿಸಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ. ಆದರೆ ಈ ಬಜೆಟ್‌ನಲ್ಲಿ ವಿತ್ತ ಸಚಿವರು ರಕ್ಷಣಾ ವಲಯಕ್ಕೆ ಮೀಸಲಿಟ್ಟಿರುವ ಹಣ ಹಾಲಿ ಯೋಜನೆಗಳನ್ನು ಪೂರ್ಣಗೊಳಿಸಲು ಮತ್ತು ಬಾಕಿ ಮೊತ್ತವನ್ನೂ ಪಾವತಿಸಲೂ ಸಾಲದಂತಾಗಿದೆ.

ಹರೀಶ್ ಕೊಕ್ಕಡ

Advertisement

Udayavani is now on Telegram. Click here to join our channel and stay updated with the latest news.

Next