ನವದೆಹಲಿ: ಈ ವರ್ಷದ ವಿಧಾನಸಭೆ ಚುನಾವಣೆ ಸಿದ್ಧತೆಯಲ್ಲಿರುವ ಕರ್ನಾಟಕಕ್ಕೆ ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಲ್ಲಿ ನೀರಾವರಿಗೆ ಭರ್ಜರಿ ಕೊಡುಗೆ ಘೋಷಿಸಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಲೋಕಸಭೆಯಲ್ಲಿ ಮಂಡಿಸಿರುವ ಬಜೆಟ್ ನಲ್ಲಿ “ಕರ್ನಾಟಕದ ಮಹತ್ವದ ಭದ್ರಾ ಮೇಲ್ಡಂಡೆ ಯೋಜನೆಗೆ” 5,300 ಕೋಟಿ ರೂಪಾಯಿ ನೆರವು ನೀಡುವುದಾಗಿ ಘೋಷಿಸಿದೆ.
ಇದನ್ನೂ ಓದಿ:Union Budget 2023: ಆದಾಯ ತೆರಿಗೆಯಲ್ಲಿ ಭಾರಿ ಬದಲಾವಣೆ; 7 ಲಕ್ಷದವರೆಗೆ ಟ್ಯಾಕ್ಸ್ ಕಟ್ಟಬೇಕಿಲ್ಲ
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 29.90 ಟಿಎಂಸಿ ಅಡಿ ನೀರಿನ ಬಳಕೆಯೊಂದಿಗೆ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ 5,57,022 ಎಕರೆ ಭೂಪ್ರದೇಶಕ್ಕೆ ನೀರಾವರಿ ಕಲ್ಪಿಸಲು ಮತ್ತು ಇದೇ ಜಿಲ್ಲೆಗಳ 367 ಸಣ್ಣ ನೀರಾವರಿ ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ.50ರಷ್ಟು ತುಂಬಿಸಲು ಉದ್ದೇಶಿಸಲಾಗಿತ್ತು.
Related Articles
ಈ ಯೋಜನೆಗೆ ಒಟ್ಟು 21,473.67 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಎರಡು ಹಂತದಲ್ಲಿ ಈ ಯೋಜನೆಯನ್ನು ಕೈಗೊಳ್ಳಲು ನಿರ್ಧರಿಸಲಾಗಿತ್ತು. ಇದೀಗ ಭದ್ರಾ ಮೇಲ್ಡಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಲ್ಪಟ್ಟಿದ್ದರಿಂದ ಕೇಂದ್ರ ಸರ್ಕಾರ 5,300 ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿದೆ.
ಕೇಂದ್ರದ ಅನುದಾನಕ್ಕೆ ಸಿಎಂ ಬೊಮ್ಮಾಯಿ ಸಂತಸ:
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5,300 ಕೋಟಿ ರೂಪಾಯಿ ಅನುದಾನ ನೀಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃತಜ್ಞತೆ ಸಲ್ಲಿಸಿದ್ದಾರೆ. ಅನುದಾನದ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಈ ಸಾಲಿನ ಕೇಂದ್ರ ಬಜೆಟ್ ನಲ್ಲಿ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ಡಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಮಸ್ತ ಕರ್ನಾಟಕದ ಪರವಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ.