Advertisement

ಇನ್ನು 200 ವಾಹಿನಿಗಳ ಮೂಲಕ ಪಾಠ

07:58 PM Feb 01, 2022 | Team Udayavani |

ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ನಿರಂತರವಾಗಿ ಕೊರೊನಾ ಕಾಡಿದೆ. ಇದರಿಂದ ವಿದ್ಯಾರ್ಥಿಗಳು, ಅದರಲ್ಲೂ ಗ್ರಾಮೀಣಭಾಗದ ವಿದ್ಯಾರ್ಥಿಗಳು ಎರಡು ವರ್ಷಗಳು ಮಾಮೂಲಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸಲು ಕೇಂದ್ರ ಸರ್ಕಾರ ಡಿಜಿಟಲ್‌ ಶಿಕ್ಷಣದ ಮೊರೆ ಹೋಗಿದೆ. “ಪಿಎಂ ಇವಿದ್ಯಾ’ ಯೋಜನೆಯಡಿ “ಒಂದು ತರಗತಿ-ಒಂದು ವಾಹಿನಿ’ಗಳನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಅಂದರೆ ಇದುವರೆಗೆ 12 ವಾಹಿನಿಗಳ ಮೂಲಕ ಶಾಲೆಯಲ್ಲಿ ತಪ್ಪಿಸಿಕೊಂಡಿದ್ದ ವಿಷಯಗಳನ್ನು ಪಾಠ ಮಾಡಲಾಗುತ್ತಿತ್ತು. ಇನ್ನು ಅಂತಹ ವಾಹಿನಿಗಳ ಸಂಖ್ಯೆಯನ್ನು 200ಕ್ಕೆ ಏರಿಸಲಾಗುತ್ತದೆ!

Advertisement

ಇದರಿಂದ ಎಲ್ಲ ರಾಜ್ಯಗಳೂ 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ, ತಂತಮ್ಮ ಸ್ಥಳೀಯ ಭಾಷೆಗಳಲ್ಲಿ ಪೂರಕ ಶಿಕ್ಷಣ ನೀಡಲು ಸಾಧ್ಯವಾಗಲಿದೆ. ಇದು ಸತತ ಎರಡು ವರ್ಷ ಉಂಟಾಗಿರುವ ಮಾಮೂಲಿ ಶಿಕ್ಷಣದ ಕೊರತೆಯನ್ನು ನೀಗಿಸುತ್ತದೆ ಎನ್ನುವುದು ಕೇಂದ್ರ ಸರ್ಕಾರದ ಲೆಕ್ಕಾಚಾರ. ಒಂದು ವೇಳೆ 200 ವಾಹಿನಿಗಳ ಮೂಲಕ ಪಾಠ ಮಾಡುವ ಯೋಜನೆ ಪಕ್ಕಾ ಜಾರಿಯಾದರೆ, ಮಕ್ಕಳಿಗೆ ಅದು ಸುಲಭವಾಗಿ ಲಭ್ಯವಾದರೆ ದೊಡ್ಡ ಪರಿಣಾಮವೇ ಉಂಟಾಗಲಿದೆ.

ಕಳೆದೆರಡು ವರ್ಷಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣ ಬಹುತೇಕ ಶಿಕ್ಷಣ ತಪ್ಪಿಸಿಕೊಂಡಿದ್ದಾರೆ. ಅದರಲ್ಲೂ ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿಗಳು, ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸಿದ್ದಾರೆ. ವಾಸ್ತವಿಕವಾಗಿ ನೋಡಿದರೆ ಗುಡ್ಡಗಾಡುಗಳಲ್ಲಿ ವಾಸಿಸುವ, ವಿದ್ಯುತ್‌, ಅಂತರ್ಜಾಲದ ಸೌಲಭ್ಯ ಸರಿಯಾಗಿಲ್ಲದಿರುವ, ರಸ್ತೆ ಸಂಪರ್ಕವೂ ನೆಟ್ಟಗಿಲ್ಲದಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸುವುದು ಭವಿಷ್ಯದ ದೃಷ್ಟಿಯಿಂದ ಅನಿವಾರ್ಯ. ಸಾಮಾನ್ಯವಾಗಿ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಗಂಭೀರ ಆಸಕ್ತಿಯಿರುವುದಿಲ್ಲ. ಹೀಗೆ ತರಗತಿಗಳೂ ತಪ್ಪಿಹೋದರೂ ಶಿಕ್ಷಣದಿಂದ ವಿಮುಖವಾಗುವ ಅಪಾಯ ಜಾಸ್ತಿ. ಅದನ್ನು ಸರಿ ಮಾಡುವುದು ಕೇಂದ್ರ-ರಾಜ್ಯ ಸರ್ಕಾರಗಳ ಮೇಲಿರುವ ದೊಡ್ಡ ಜವಾಬ್ದಾರಿ.

ವಿಶ್ವವಿದ್ಯಾಲಯವೂ ಡಿಜಿಟಲ್‌!
ವಿಶ್ವದರ್ಜೆಯ ಶಿಕ್ಷಣ ಬೇಕೆಂದರೆ ಸಾಮಾನ್ಯವಾಗಿ ವಿದ್ಯಾರ್ಥಿಗಳು ಅಮೆರಿಕ, ಇಂಗ್ಲೆಂಡ್‌, ಜಪಾನ್‌ನತ್ತ ಮುಖ ಮಾಡುತ್ತಾರೆ. ಅಂತಹ ಶಿಕ್ಷಣವನ್ನು ಭಾರತದಲ್ಲೇ, ಅದೂ ಆನ್‌ಲೈನ್‌ ಮೂಲಕವೇ ನೀಡುವುದಾದರೆ? ಕೇಂದ್ರ ಸರ್ಕಾರ ಅಂತಹದ್ದೊಂದು ನಿರ್ಧಾರ ಮಾಡಿದೆ. ಇದಕ್ಕಾಗಿ ಡಿಜಿಟಲ್‌ ವಿಶ್ವವಿದ್ಯಾಲಯವನ್ನು ಆರಂಭಿಸಲಿದೆ. ಇದರ ಖಚಿತ ರೂಪುರೇಷೆಗಳು ಹೊರಬಿದ್ದಿಲ್ಲ. ಆದರೆ ವಿದ್ಯಾರ್ಥಿಗಳ ಮಟ್ಟಿಗೆ ಇದೊಂದು ಮಹತ್ವದ ಉಪಕ್ರಮ.

ಸದ್ಯಕ್ಕೆ ವಿವರಿಸಿರುವ ಪ್ರಕಾರ, ವಿದ್ಯಾರ್ಥಿಗಳು ತಾವಿದ್ದಲ್ಲೇ ವಿಶ್ವದರ್ಜೆಯ ಪಾಠಗಳನ್ನು ಕೇಳಬಹುದು. ದೇಶದ ವಿಭಿನ್ನ ಭಾಷೆಗಳಲ್ಲಿ ಪಾಠಗಳಿರುತ್ತವೆ. ಇವನ್ನು ಐಸಿಟಿ ಮಾದರಿಗಳಲ್ಲಿ (ಪುಟಗಳು, ವಿವಿಧ ಮಾದರಿಯ ಫೈಲ್‌ಗ‌ಳಲ್ಲಿ ಪಠ್ಯಗಳಿರುತ್ತವೆ) ನೀಡಲಾಗುತ್ತದೆ. ಇದಕ್ಕಾಗಿ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ಸಂಸ್ಥೆಗಳ ಸಹಕಾರದೊಂದಿಗೆ ಸಂಪರ್ಕಸೇತುವೊಂದನ್ನು ಸ್ಥಾಪಿಸಲಾಗುತ್ತದೆ. ಅದರ ಮೂಲಕವೇ ಶಿಕ್ಷಣ ನೀಡಲಾಗುತ್ತದೆ.

Advertisement

ವೆಬ್‌, ಗ್ರಾಫಿಕ್‌ ವಿನ್ಯಾಸ ಕಲಿಸಲು ವಚ್ಯುವಲ್‌ ಪ್ರಯೋಗಾಲಯ
ನಿರ್ದಿಷ್ಟವಾಗಿ ಕೆಲಸವನ್ನೇ ಆಧರಿಸಿದ ಕೆಲವು ಕೋರ್ಸ್‌ಗಳಿವೆ. ಇವಿನ್ನೂ ಸಾಂಪ್ರದಾಯಿಕ ಶಿಕ್ಷಣಕ್ರಮದಲ್ಲಿ ಮುಖ್ಯಸ್ಥಾನ ಪಡೆದಿಲ್ಲ. ಆದರೆ ಆರ್ಥಿಕ ದೃಷ್ಟಿಯಿಂದ ನೋಡಿದರೆ ಇವಕ್ಕೆ ಬಹಳ ಮಹತ್ವವಿದೆ. ಉದಾಹರಣೆಗೆ ವೆಬ್‌ಸೈಟ್‌ಗಳ ವಿನ್ಯಾಸ (ವೆಬ್‌ ಡಿಸೈನ್‌), ಪುಟವಿನ್ಯಾಸ (ಗ್ರಾಫಿಕ್‌ ಡಿಸೈನ್‌), ಆಹಾರ ತಯಾರಿ ಕಲೆ, ಅಲಂಕಾರ ಕಲೆ ಇತ್ಯಾದಿ. ಇವನ್ನೆಲ್ಲ ಸಂಸ್ಥೆಗಳ ಮೂಲಕ ಕಲಿಸುವುದು ದೊಡ್ಡಮಟ್ಟದಲ್ಲಿ ನಡೆಯುತ್ತಿಲ್ಲ. ಆದರೆ ಈ ವಿಷಯಗಳಿಗೆ ಭಾರೀ ಮಹತ್ವವಿದೆ. ಇದನ್ನು ಕೇಂದ್ರ ಸರ್ಕಾರ ಗಮನಿಸಿದೆ. ಆದ್ದರಿಂದ ಇವನ್ನು ಕಲಿಸಲಿಕ್ಕೆಂದೇ 750 ವಚ್ಯುವಲ್‌ ಪ್ರಯೋಗಾಲಯಗಳನ್ನು ತೆರೆಯಲಿದೆ. ತಾಂತ್ರಿಕ ನೈಪುಣ್ಯ ಹೆಚ್ಚಿಸಲು, ಸೃಷ್ಟಿಶೀಲ ಮನಸ್ಸುಗಳನ್ನು ಇನ್ನಷ್ಟು ತೀಕ್ಷ್ಣಗೊಳಿಸಲು 75 ಕೌಶಲ್ಯ ಇ-ಪ್ರಯೋಗಾಲಯಗಳನ್ನು (ಸ್ಕಿಲ್ಲಿಂಗ್‌ ಇ-ಲ್ಯಾಬ್‌) ತೆರೆಯಲಿದೆ. ಅಂದರೆ ಇಲ್ಲೂ ಆನ್‌ಲೈನ್‌ ಪಾಠಗಳಾಗುತ್ತವೆ. 2022-23ರ ಅವಧಿಯಲ್ಲಿ ಇವು ಬಳಕೆಗೆ ತೆರೆದುಕೊಳ್ಳಲಿವೆ.

ಎಲ್ಲ ಭಾಷೆಗಳಲ್ಲಿ ಗುಣಮಟ್ಟದ ಆನ್‌ಲೈನ್‌ ಪಾಠ
ಈಗ ಶಿಕ್ಷಣ ಸೇರಿ ಎಲ್ಲವೂ ಆನ್‌ಲೈನ್‌ ಆಗಿದೆ. ಹಾಗಾಗಿ ಆನ್‌ಲೈನ್‌ ಮೂಲಕ ಬೋಧಿಸುವ ವಿಷಯಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದು ಮುಖ್ಯ. ಭಾರತದಲ್ಲಿ ಮಾತನಾಡುವ ಎಲ್ಲ ಭಾಷೆಗಳಲ್ಲಿ ಆನ್‌ಲೈನ್‌ ಮೂಲಕ ಬೋಧಿಸಲು ಗುಣಮಟ್ಟದ ವಿಷಯಗಳನ್ನು ಸಿದ್ಧಪಡಿಸಲಾಗುತ್ತದೆ. ಇವು ಮೌಖೀಕವಾಗಿಯೂ, ಲಿಖೀತವಾಗಿಯೂ ಇರುತ್ತವೆ. ಅಂತರ್ಜಾಲ, ಮೊಬೈಲ್‌ ಫೋನ್‌ಗಳು, ಟೀವಿ, ರೇಡಿಯೊಗಳ ಮೂಲಕ ಇವು ಪ್ರಸಾರವಾಗುತ್ತವೆ. ಇವಕ್ಕಾಗಿಯೇ ಶಿಕ್ಷಕರೂ ಇರುತ್ತಾರೆ. ಈ ಮೂಲಕ ಒಂದಷ್ಟು ಉದ್ಯೋಗಾವಕಾಶ ಸಿದ್ಧಗೊಳ್ಳುವುದು ಖಚಿತ.

ಇ-ಪಠ್ಯದ ಚೆನ್ನಾಗಿರಲೆಂದೇ ಪ್ರತ್ಯೇಕ ವ್ಯವಸ್ಥೆ
ಗುಣಮಟ್ಟದ ಆನ್‌ಲೈನ್‌ ಪಠ್ಯ ಸಿದ್ಧವಾಗಬೇಕಾದರೆ ಅದಕ್ಕೊಂದು ಉತ್ತಮ ವ್ಯವಸ್ಥೆಯೂ ಇರಬೇಕು. ಅದಕ್ಕಾಗಿಯೇ ತರಬೇತಾದ ಶಿಕ್ಷಕರಿರುವ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತದೆ. ಆನ್‌ಲೈನ್‌ ಮೂಲಕ ಚೆನ್ನಾಗಿ ಪಾಠ ಮಾಡಲು, ಕಲಿಕೆಯೂ ಸುಗಮವಾಗಲು ಕೆಲವು ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ವಿಶೇಷ ತಾಂತ್ರಿಕ ಉಪಕರಣಗಳನ್ನು ಸಿದ್ಧ ಮಾಡಲಾಗುತ್ತದೆ. ಅದೇನು ಎನ್ನುವುದು ಮುಂದೆಯೇ ಗೊತ್ತಾಗಬೇಕು!

Advertisement

Udayavani is now on Telegram. Click here to join our channel and stay updated with the latest news.

Next