ಭಾರತದ ಕೈಗಾರಿಕೆ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದೆಬರುವ ವಿದೇಶಿ ಹೂಡಿಕೆದಾರರಿಗೆ
(ಫಾರಿನ್ ಪೋರ್ಟ್‌ಫೋಲಿಯೋ ಇನ್ವೆಸ್ಟರ್-ಎಫ್ಪಿಐ) ಅಗತ್ಯ ಸೌಲಭ್ಯ ಕಲ್ಪಿಸಿ ಉತ್ತೇಜನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ ನೋ ಯುವರ್ ಕಸ್ಟಮರ್ (ಕೆವೈಸಿ) ನಿಯಮಗಳನ್ನು ಮತ್ತಷ್ಟು ಸುಧಾರಿಸುವ ಮತ್ತು ಸುಲಭವಾಗಿಸುವ ಭರವಸೆ ನೀಡಿದೆ. ಇದೇ ವೇಳೆ ನೆರೆ ದೇಶಗಳ ನಡುವಿನ ಬಂಡವಾಳ ಹರಿವಿನ ಸಮಗ್ರತೆಗೆ ಸಂಬಂಧಿಸಿದಂತೆ ಯಾವುದೇ ರಾಜಿ ಮಾಡಿಕೊಳ್ಳದೆ
ಹೂಡಿಕೆದಾರರ ಸ್ನೇಹಿ ಕೆವೈಸಿ ನಿಯಮ ರೂಪಿಸುವುದಾಗಿ ಹೇಳಲಾಗಿದೆ.
ಆರ್ಥಿಕ ಒಳಗೊಳ್ಳುವಿಕೆ ಮತ್ತು ಸರ್ವರ ವಿಕಾಸದ ಪರಿಕಲ್ಪನೆಗೆ ಸಾಕಾರ ರೂಪ ನೀಡುವ ನಿಟ್ಟಿನಲ್ಲಿ ಹೂಡಿಕೆ ಮಾರುಕಟ್ಟೆಯನ್ನು ಸಮುದಾಯದ ಬಳಿಗೆ ಕೊಂಡೊಯ್ಯಲು ಕೇಂದ್ರ ಚಿಂತನೆ ನಡೆಸಿದೆ. “ಸಾಮಾಜಿಕ ಕ್ಷೇಮಾಭಿವೃದ್ದಿ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಉದ್ದಿಮೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಈಕ್ವಿಟಿ, ಸಾಲ ಅಥವಾ ಮ್ಯೂಚಲ್ ಫಂಡ್ ಮಾದರಿಯಲ್ಲಿ ಬಂಡವಾಳ ಒಟ್ಟುಗೂಡಿಸಲು ಸೆಕ್ಯೂರಿಟಿ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಡಿಯಲ್ಲಿ “ಸೋಷಿಯಲ್ ಸ್ಟಾಕ್ ಎಕ್ಸ್‌ಚೇಂಜ್’ ಎಂಬ ಎಲೆಕ್ಟ್ರಾನಿಕ್ ಬಂಡವಾಳ ಸಂಗ್ರಹ ವೇದಿಕೆ ಆರಂಭಿಸಲಾಗುವುದು,’ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ರೀಟೇಲ್ ಹೂಡಿಕೆದಾರರು ಖಜಾನೆ ಬಿಲ್‌ಗಳಲ್ಲಿ ಹೂಡಿಕೆ ಮಾಡುವಂತಾಗಲು ಆರ್‌ಬಿಐ ಮಾಡಿರುವ ಪ್ರಯತ್ನಗಳಿಗೆ ಪೂರಕವಾಗಿ ನೀತಿಗಳನ್ನು ರೂಪಿಸುವ ಜತೆಗೆ, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ತಿಳಿಸಿದೆ.